ಅದಾನಿ ಸಂಸ್ಥೆಗಳ ಹಗರಣಗಳಿಗೆ ಭಾರತ ಬೆಲೆ ತೆರಬೇಕಾದೀತೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಂತರ್‌ರಾಷ್ಟ್ರೀಯವಾಗಿ ಅದಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತದಲ್ಲಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗಳ ಗುತ್ತಿಗೆಯನ್ನು ಸುಲಭವಾಗಿ ಪಡೆಯಲು ಅಧಿಕಾರಿಗಳಿಗೆ ಸುಮಾರು 2,000 ಕೋಟಿ ರೂಪಾಯಿಗಳ ಲಂಚ ನೀಡಿರುವ ಆರೋಪ ಅವರ ಮೇಲಿದ್ದು, ಅಮೆರಿಕದ ನ್ಯಾಯಾಲಯ ಬುಧವಾರ ಅದಾನಿ ಗುಂಪಿನ ಸ್ಥಾಪಕ ಗೌತಮ್ ಅದಾನಿ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದೆ. ಹೂಡಿಕೆದಾರರನ್ನು ವಂಚಿಸಿದ ಗಂಭೀರ ಆರೋಪ ಅವರ ಮೇಲಿದೆ. ಅದಾನಿ ಸಮೂಹವು ಈ ಆರೋಪವನ್ನು ತಳ್ಳಿ ಹಾಕಿದೆಯಾದರೂ, ಪ್ರಕರಣ ಗಂಭೀರ ಸ್ವರೂಪಕ್ಕೆ ತಿರುಗಿದೆ. ಕಳೆದ ವರ್ಷ ಹಿಂಡನ್ ಬರ್ಗ್ ವರದಿಯು ಅದಾನಿಯ ಶೇರು ಗೋಲ್‌ಮಾಲ್‌ಗಳ ಬಗ್ಗೆ ಮಾಡಿದ ವರದಿಯಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿಗೇ ಅಮೆರಿಕದ ನ್ಯಾಯಾಲಯ ಲಂಚ ನೀಡುವಿಕೆ ಮತ್ತು ಹೂಡಿಕೆದಾರರಿಗೆ ವಂಚನೆಗೆ ಸಂಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಅದಾನಿ ಸಂಸ್ಥೆಗಳ ಮೇಲೆ ಮರ್ಮಾಘಾತ ನೀಡಿದಂತಾಗಿದೆೆ. ಈ ಆರೋಪ ಅದಾನಿ ಸಂಸ್ಥೆಗಳ ಮೇಲೆ ಪರಿಣಾಮಗಳನ್ನು ಬೀರತೊಡಗಿದೆ. ಶೇರುಗಳಲ್ಲಿ ಭಾರೀ ಕುಸಿತ ಕಂಡು, ಶೇಕಡ 20ರವರೆಗೆ ಇಳಿದಿವೆ. ಈಗಾಗಲೇ ನಿರ್ಧರಿಸಲಾಗಿದ್ದ ಸುಮಾರು 60 ಕೋಟಿ ಡಾಲರ್ ಮೌಲ್ಯದ ಬಾಂಡ್‌ಗಳ ಮಾರಾಟವನ್ನು ಸ್ಥಗಿತಗೊಳಿಸಲು ಅದಾನಿ ಸಂಸ್ಥೆ ನಿರ್ಧರಿಸಿದೆ. ಅದಾನಿ ಸಮೂಹದ ಜೊತೆಗೆ ಇಂಧನ ಸಚಿವಾಲಯವು ಮಾಡಿಕೊಂಡಿರುವ 70 ಕೋಟಿ ಡಾಲರ್ ಮೊತ್ತದ ಒಪ್ಪಂದವನ್ನು ರದ್ದುಗೊಳಿಸಲು ಕೆನ್ಯಾ ನಿಧರ್ರಿಸಿದೆ. ಹಾಗೆಯೇ ಇನ್ನಿತರ ಮಹತ್ವದ ಮೂಲಭೂತ ಸೌಕರ್ಯ ಕಾಮಗಾರಿಗಳ ಗುತ್ತಿಗೆಗೆ ಸಂಬಂಧಿಸಿದ ಒಪ್ಪಂದಗಳೂ ಮುರಿದು ಬೀಳುವ ಹಂತದಲ್ಲಿವೆೆ. ನೆರೆಯ ಬಾಂಗ್ಲಾವೂ ಸೇರಿದಂತೆ ಹಲವು ದೇಶಗಳು ಅದಾನಿ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಮರು ಪರಿಶೀಲಿಸುವ ಬಗ್ಗೆ ಆಲೋಚಿಸುತ್ತಿವೆೆ.
ಅದಾನಿ ಸಂಸ್ಥೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಅಕ್ರಮಗಳ ಕುರಿತಂತೆ ಈ ಹಿಂದೆ ಹಿಂಡನ್‌ಬರ್ಗ್ ವರದಿ ಹೊರ ಬಿದ್ದಾಗ ಅದಾನಿಯ ಸಮರ್ಥನೆಗೆ ಸ್ವತಃ ಭಾರತ ಸರಕಾರವೇ ಇಳಿದಿತ್ತು. ಭಾರತದ ಆರ್ಥಿಕತೆಯ ವಿರುದ್ಧ ನಡೆಯುತ್ತಿರುವ ಸಂಚಿನ ಭಾಗ ಇದು ಎಂದು ಬಿಂಬಿಸಲು ಸರಕಾರ ಯತ್ನಿಸಿತ್ತು. ಹಿಂಡನ್ ಬರ್ಗ್ ವರದಿಗೆ ಸಂಬಂಧಿಸಿ ತನಿಖೆ ನಡೆಸಬೇಕಾಗಿದ್ದ ಸೆಬಿ ಕೂಡ ಅದಾನಿಯ ಅಕ್ರಮಗಳ ಜೊತೆಗೆ ಅನೈತಿಕ ಸಂಬಂಧಗಳನ್ನು ಹೊಂದಿರುವುದು ಇತ್ತೀಚೆಗೆ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿತ್ತು. ಅದಾನಿ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಯಾವುದೇ ದಾಖಲೆಗಳಿಲ್ಲ ಎಂದು ಕ್ರಮ ತೆಗೆದುಕೊಳ್ಳಲು ಸೆಬಿ ಹಿಂದೇಟು ಹಾಕುತ್ತಾ ಬಂದಿದೆ. ಅದಾನಿ ಅಕ್ರಮಗಳಲ್ಲಿ ಕೇಂದ್ರ ಸರಕಾರವೂ ಶಾಮೀಲಾಗಿದೆ ಎನ್ನುವ ವಿರೋಧ ಪಕ್ಷಗಳ ಆರೋಪಗಳಿಗೆ ಸೆಬಿಯ ಈ ನಡವಳಿಕೆ ಪುಷ್ಟಿ ನೀಡುತ್ತಿದೆ. ಈ ಹಿಂದೆ ಇಂಡೋನೇಶ್ಯದಿಂದ ಕಲ್ಲಿದ್ದಲು ಆಮದು ಮಾಡಿದಾಗ, 12,000 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ಅದಾನಿ ಸಂಸ್ಥೆ ತನ್ನದಾಗಿಸಿರುವುದು ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡಿತ್ತು. ಭಾರತ ಸರಕಾರ ಹೆಚ್ಚುವರಿ ಪಾವತಿ ಮಾಡುವ ಮೂಲಕ ಜನರ ತೆರಿಗೆ ಹಣವನ್ನು ಅದಾನಿಯ ಖಜಾನೆಗೆ ತುಂಬಿಸುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದರು. ಆದರೆ ಈ ಆರೋಪವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಈ ಎಲ್ಲಾ ಕಾರಣಗಳಿಂದ ಅದಾನಿ ಅಮೆರಿಕದಲ್ಲಿ ಎದುರಿಸುತ್ತಿರುವ ಆರೋಪ ಭವಿಷ್ಯದಲ್ಲಿ ಭಾರತದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಭಾರತದಲ್ಲಿ 2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರ ಹಿಡಿಯುವುದಕ್ಕೂ, ಅದಾನಿ ಉದ್ಯಮಸಂಸ್ಥೆಗಳ ಬೆಳವಣಿಗೆಗಳಿಗೂ ಅಂತರ್ ಸಂಬಂಧವೊಂದಿದೆ. ಮುಂಬೈನಲ್ಲಿ ಜವೇರಿ ಬಜಾರ್‌ನಲ್ಲಿ ವಜ್ರದ ವ್ಯಾಪಾರಿಯಾಗಿದ್ದ ಗೌತಮ್ ಅದಾನಿ, ಪ್ಲಾಸಿಕ್ ಉತ್ಪನ್ನಗಳ ಸಣ್ಣ ಫ್ಯಾಕ್ಟರಿಯೊಂದನ್ನಷ್ಟೇ ಇಟ್ಟುಕೊಂಡಿದ್ದರು. ಕಳೆದ ಒಂದು ದಶಕದಲ್ಲಿ ಅವರು ಬೆಳೆದ ವೇಗ ಮಾತ್ರ ಅಸಾಮಾನ್ಯವಾಗಿದೆ. ಮೋದಿಯ ರಾಜಕೀಯ ಬೆಳವಣಿಗೆಗೆ ಅದಾನಿಯ ಉದ್ಯಮ ಸಂಸ್ಥೆಗಳ ಬೆಳವಣಿಗೆ ಸರಿ ಸಾಟಿಯಾಗಿ ಸಾಗುತ್ತದೆ. ಟಾಟಾ, ಬಿರ್ಲಾರಂತಹ ಬೃಹತ್ ಉದ್ಯಮಿಗಳಿಗಿಂತ ಅದಾನಿ ಭಿನ್ನವಾಗುವುದು ಈ ಕಾರಣಕ್ಕಾಗಿ. ಟಾಟಾ, ಬಿರ್ಲಾ ಅವರ ಸಾಧನೆಯ ಹಾದಿಗೆ ಶತಮಾನಗಳ ಇತಿಹಾಸವಿದೆ. ಅಂಬಾನಿ ಕುಟುಂಬ ಕೂಡ ಈ ಸ್ಥಿತಿಗೆ ಬರಲು ಸುದೀರ್ಘ ಸಮಯವನ್ನು ತೆಗೆದುಕೊಂಡಿದೆ. ಆದರೆ ಅದಾನಿಯ ಹೆಸರನ್ನು 20-25 ವರ್ಷಗಳ ಹಿಂದೆ ಯಾರೂ ಕೇಳಿರಲಿಲ್ಲ. ಒಬ್ಬ ವಜ್ರದ ವ್ಯಾಪಾರಿ ಬರೇ ಹತ್ತು ವರ್ಷಗಳಲ್ಲಿ ಏಶ್ಯದ ಶ್ರೀಮಂತ ವ್ಯಕ್ತಿಯಾಗಿ, ಆ ಬಳಿಕ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಬೆಳೆದಿರುವುದು ಅತ್ಯಂತ ನಿಗೂಢವಾಗಿದೆ. ಅದಾನಿ ಸಂಸ್ಥೆಗಳೆನ್ನುವುದು ಅಸಹಜ ರೀತಿಯಲ್ಲಿ ವೇಗವಾಗಿ ಬೆಳೆದ ಮಗುವಿನಂತಿದೆ. ದೇಶದ ವಿವಿಧ ಬಂದರುಗಳ ಮೇಲೆ ಹಿಡಿತ ಸಾಧಿಸಿದ್ದಲ್ಲದೆ, ವಿಶೇಷ ಆರ್ಥಿಕ ವಲಯ, ವಿಮಾನ ನಿಲ್ದಾಣಗಳ ಕಾರ್ಯನಿರ್ವಹಣೆ, ವಿದ್ಯುತ್ ಯೋಜನೆಗಳು, ಕಲ್ಲಿದ್ದಲು ಗಣಿಗಾರಿಕೆ ಹೀಗೆ ಅದಾನಿ ಸಂಸ್ಥೆಗಳು ತಮ್ಮ ವ್ಯಾಪ್ತಿಯನ್ನು ಕಳೆದ ಹತ್ತು ವರ್ಷಗಳಲ್ಲಿ ಹಿಗ್ಗಿಸುತ್ತಾ ಹೋದವು. ಭಾರತದ ಅತಿ ದೊಡ್ಡ ಕಲ್ಲಿದ್ದಲು ಆಮದುದಾರರಾಗಿ ಅದಾನಿ ಗುರುತಿಸಲ್ಪಡುತ್ತಿದ್ದಾರೆ. ಖಾಸಗಿ ವಲಯದಲ್ಲಿ ಭಾರತದ ಅತಿ ದೊಡ್ಡ ಗಣಿ ನಿರ್ವಹಣೆಯ ಸಂಸ್ಥೆ ಕೂಡ ಅದಾನಿಯದ್ದೇ ಆಗಿದೆ. ರಕ್ಷಣಾ ಉಪಕರಣಗಳು, ರಸ್ತೆ ಯೋಜನೆಗಳು, ಬೃಹತ್ ರಿಯಲ್ ಎಸ್ಟೇಟ್...ಹೀಗೆ 2014ಕ್ಕೆ ಮುಂಚೆ ಬರೇ ವಜ್ರದ ವ್ಯಾಪಾರಿಯಾಗಿ ಗುರುತಿಸಲ್ಪಟ್ಟಿದ್ದ ಅದಾನಿ ಇಂದು ಉದ್ಯಮದ ನಾಲ್ಕೂ ದಿಕ್ಕುಗಳಲ್ಲೂ ತನ್ನ ವಿಕ್ರಮ ಹೆಜ್ಜೆಗಳನ್ನು ಇರಿಸಿದ್ದಾರೆ. ಈ ಅಸಹಜ ಬೆಳವಣಿಗೆ ಭಾರತದ ಆರ್ಥಿಕತೆಯ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಲಿದೆ ಎನ್ನುವ ಕೆಲವು ಆರ್ಥಿಕ ತಜ್ಞರ ಆತಂಕಗಳು ಇದೀಗ ನಿಜವಾಗುವ ಹಂತಕ್ಕೆ ಬಂದು ನಿಂತಿದೆ. ಭಾರತದ ಮೈಕ್ರೋ ಇಕಾನಮಿಯನ್ನು ಹಂತಹಂತವಾಗಿ ನಾಶ ಮಾಡುತ್ತಾ, ಅದಾನಿ,ಅಂಬಾನಿ ಕೇಂದ್ರಿತವಾಗಿ ಭಾರತದ ಆರ್ಥಿಕತೆಯನ್ನು ಕಟ್ಟಲು ಮುಂದಾದ ಮೋದಿ ಆರ್ಥಿಕ ನೀತಿಗೆ ಭಾರತ ಬೆಲೆ ತೆರಬೇಕಾದ ಸಮಯ ಇದು. ಈ ಕಾರಣಕ್ಕಾಗಿಯೇ ಅದಾನಿಯ ಮೇಲಿರುವ ಆರೋಪಗಳು, ಭಾರತವನ್ನು ಒಟ್ಟಾರೆಯಾಗಿ ಕಳವಳಕ್ಕೀಡು ಮಾಡಿದೆ.
ಭಾರತದ ಸಾರ್ವಜನಿಕ ವಲಯಗಳನ್ನೆಲ್ಲ ಹಂತ ಹಂತವಾಗಿ ಅದಾನಿ ಸಂಸ್ಥೆಗೆ ಮಾರಲಾಗಿದೆ. ಇದೇ ಸಂದರ್ಭದಲ್ಲಿ ಎಲ್‌ಐಸಿ ಸೇರಿದಂತೆ ವಿವಿಧ ಸಾರ್ವಜನಿಕ ಸಂಸ್ಥೆಯಲ್ಲಿ ಜನಸಾಮಾನ್ಯರು ಇಟ್ಟಿರುವ ಸಾವಿರಾರು ಕೋಟಿ ರೂಪಾಯಿಗಳನ್ನು ಅದಾನಿ ಸಂಸ್ಥೆಗಳಲ್ಲಿ ಸ್ವತಃ ಕೇಂದ್ರ ಸರಕಾರ ಹೂಡಿಕೆ ಮಾಡಿದೆ. ಅದಾನಿ ಸಂಸ್ಥೆಗಳು ಸುಳ್ಳುಗಳ ಮೇಲೆ ಕಟ್ಟಿ ನಿಲ್ಲಿಸಿದ ಸಂಸ್ಥೆಗಳಿಗೆ ನಮ್ಮ ಬ್ಯಾಂಕುಗಳು ಸಾವಿರಾರು ಕೋಟಿ ರೂಪಾಯಿ ಸಾಲಗಳನ್ನು ನೀಡಿವೆ. ಇದೀಗ ಅದಾನಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಕುಖ್ಯಾತರಾಗುತ್ತಿದ್ದಾರೆ. ಇದು ಅವರ ಸಂಸ್ಥೆಗಳ ಮೇಲಿನ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತಿದೆ. ಸೌರಶಕ್ತಿಯ ಗುತ್ತಿಗೆಗಳ ಮೇಲೆ ಹಿಡಿತ ಸಾಧಿಸುವ ಅವರ ಪ್ರಯತ್ನಗಳಿಗೆ ಅಮೆರಿಕದ ನ್ಯಾಯಾಲಯ ಭಾರೀ ಹಿನ್ನಡೆಯನ್ನು ಕೊಟ್ಟಿದೆ. ಇವೆಲ್ಲವೂ, ಅತಿ ವೇಗವಾಗಿ ಬೆಳೆದ ಅದಾನಿ ಸಂಸ್ಥೆಗಳು, ಅದೇ ವೇಗದಲ್ಲಿ ಹಿನ್ನಡೆ ಅನುಭವಿಸುವ ಸೂಚನೆಗಳಾಗಿವೆ. ಅದಾನಿ ಸಂಸ್ಥೆ ಮತ್ತು ಕೇಂದ್ರ ಸರಕಾರಗಳ ನಡುವಿನ ಸಂಬಂಧಗಳ ಬಗ್ಗೆ ಈಗಾಗಲೇ ವಿರೋಧ ಪಕ್ಷಗಳ ನಾಯಕರು ಭಾರೀ ಅನುಮಾನಗಳನ್ನು ವ್ಯಕ್ತ ಪಡಿಸಿದ್ದಾರೆ. ಅದಾನಿ ಸಂಸ್ಥೆಯ ಮೇಲಿನ ಆರೋಪಗಳ ತನಿಖೆಗೆ ಒತ್ತಾಯಿಸಿದ ಕಾರಣಕ್ಕಾಗಿಯೇ ರಾಹುಲ್‌ಗಾಂಧಿಯವರನ್ನು ಸಂಸತ್‌ನಿಂದ ಅಸಾಂವಿಧಾನಿಕವಾಗಿ ಹೊರ ಹಾಕುವ ಪ್ರಯತ್ನವೂ ನಡೆಯಿತು. ಇದೀಗ ಮತ್ತೆ ಅದಾನಿಯ ಬಂಧನವಾಗಬೇಕು ಎಂಬ ಆಗ್ರಹಗಳು ಭಾರತದಲ್ಲೇ ಎದ್ದಿವೆ. ಅದಾನಿ ಬಂಧನವಾದರೆ, ಅದು ಪರೋಕ್ಷವಾಗಿ ಪ್ರಧಾನಿ ಮೋದಿಯ ಬುಡವನ್ನೂ ಅಲುಗಾಡಿಸಲಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ-ಅದಾನಿ ಸಂಬಂಧ ಕಟ್ಟಕಡೆಗೆ ಭಾರತದ ಆರ್ಥಿಕತೆಯ ಮೇಲೆ ಏನೆಲ್ಲ ಅವಾಂತರಗಳನ್ನು ಸೃಷ್ಟಿಸಲಿದೆ ಮತ್ತು ಅದನ್ನು ಎದುರಿಸಲು ಭಾರತ ಯಾವ ರೀತಿಯಲ್ಲಿ ಸಜ್ಜಾಗಬೇಕು ಎನ್ನುವುದರ ಬಗ್ಗೆ ಯೋಚಿಸುವುದಕ್ಕೆ ಇದು ಸೂಕ್ತ ಸಮಯವಾಗಿದೆ.