ಉತ್ಸವಗಳ ಹೆಸರಿನಲ್ಲಿ ಆನೆಗಳ ದುರ್ಬಳಕೆಗೆ ಕೊನೆ ಎಂದು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಧಾರ್ಮಿಕ ಉತ್ಸವಗಳಲ್ಲಿ ಆನೆಗಳನ್ನು ಬಳಸುವ ಬಗ್ಗೆ ಕೇರಳ ಹೈಕೋರ್ಟ್ ಕಠಿಣ ಶಬ್ದಗಳಲ್ಲಿ ಖಂಡಿಸಿ ಎರಡು ತಿಂಗಳೂ ಆಗಿಲ್ಲ. ಅಷ್ಟರಲ್ಲೇ ಕೇರಳದಲ್ಲಿ ದರ್ಗಾವೊಂದರ ವಾರ್ಷಿಕ ಉತ್ಸವದಲ್ಲಿ ಆನೆಗಳನ್ನು ಬಳಸಲಾಗಿದೆ. ಮಾತ್ರವಲ್ಲ, ನೆರೆದ ಸಾವಿರಾರು ಜನರ ನಡುವೆ ಆನೆ ಹುಚ್ಚೆದ್ದು ದಾಂಧಲೆ ಎಸಗಿದ್ದು 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮಲಪ್ಪುರಂನ ತಿರೂರ್ನ ಪಟ್ಟಾಂಬಿ ಮಸೀದಿಯ ದರ್ಗಾದ ಪುದಿಯಂಗಾಡಿ ಹರಕೆೆಯ ಸಂದರ್ಭ ಮಧ್ಯರಾತ್ರಿ ದುರಂತ ಸಂಭವಿಸಿದೆ. ಸಾಧಾರಣವಾಗಿ ಮುಸ್ಲಿಮರ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಆನೆಗಳನ್ನು ಬಳಸುವ ಪದ್ಧತಿಯಿಲ್ಲ. ಆನೆಯೂ ಸೇರಿದಂತೆ ಯಾವುದೇ ಪ್ರಾಣಿಗಳಿಗೆ ಧಾರ್ಮಿಕವಾದ ವಿಶೇಷ ಮಹತ್ವಗಳೂ ಮುಸ್ಲಿಮ್ ಆಚರಣೆಗಳಲ್ಲಿ ಇಲ್ಲ. ಇಷ್ಟಾದರೂ ಈ ದರ್ಗಾದ ಆಡಳಿತ ಮಂಡಳಿ ಸಾವಿರಾರು ಜನರು ನೆರೆಯುವ ವಾರ್ಷಿಕ ಆಚರಣೆಯಲ್ಲಿ ಆನೆಗಳನ್ನು ಬಳಸಿದೆ. ಅಂದರೆ ಉತ್ಸವವನ್ನು ಅದ್ದೂರಿಗೊಳಿಸುವ ಹಿನ್ನೆಲೆಯಲ್ಲಿ ಶೋಕಿಗಾಗಿ ಆನೆಗಳನ್ನು ಇಲ್ಲಿ ದುರ್ಬಳಕೆ ಮಾಡಲಾಗಿದೆ. ಆನೆಗಳನ್ನು ಮನುಷ್ಯ ಪಳಗಿಸಿ ತನ್ನ ಕೆಲಸ ಕಾರ್ಯಗಳಿಗೆ ಬಳಸುತ್ತಾ ಬರುತ್ತಿದ್ದಾನಾದರೂ, ಅದು ಯಾವಾಗಬೇಕಾದರೂ ಉನ್ಮಾದಕ್ಕೆ ಒಳಗಾಗಿ ಮನುಷ್ಯನ ನಿಯಂತ್ರಣವನ್ನು ಕಳಚಿಕೊಳ್ಳಬಹುದು. ಸಾಧಾರಣವಾಗಿ ಮಾವುತರು ಅಂಕುಶಗಳನ್ನು ಬಳಸಿ ಆನೆಗಳನ್ನು ನಿಯಂತ್ರಿಸುತ್ತಾರೆ. ಆದರೆ ಸಾವಿರಾರು ಜನರು ನೆರೆದಿರುವ ಸ್ಥಳದಲ್ಲಿ ಆನೆಗಳು ಹೆದರುವುದಕ್ಕೆ ಅಥವಾ ವ್ಯಗ್ರಗೊಳ್ಳುವುದಕ್ಕೆ ವಿಶೇಷ ಕಾರಣಗಳು ಬೇಕಾಗಿಲ್ಲ. ಇಂತಹ ಸ್ಥಳದಲ್ಲಿ ಆನೆಗಳ ನೇರ ದಾಳಿಯಿಂದ ನಡೆಯುವ ದುರಂತ ಒಂದೆಡೆಯಾದರೆ, ಸಂಭವಿಸುವ ನೂಕು ನುಗ್ಗಲಿನಿಂದಲೂ ಅಪಾರ ಸಾವು ನೋವುಗಳು ಸಂಭವಿಸಬಹುದು. ಆದುದರಿಂದಲೇ, ಜಾತ್ರೆ ಉತ್ಸವಗಳಲ್ಲಿ ಆನೆಗಳನ್ನು ಬಳಸುವ ಬಗ್ಗೆ ನ್ಯಾಯಾಲಯ ಪದೇ ಪದೇ ಎಚ್ಚರಿಸುತ್ತಿದೆ. ಇದೀಗ ಆ ಎಚ್ಚರಿಕೆಯನ್ನು ಕಡೆಗಣಿಸಿದ ಪರಿಣಾಮವಾಗಿ ಕೇರಳ ಇನ್ನೊಂದು ದುರಂತಕ್ಕೆ ಸಾಕ್ಷಿಯಾಗಿದೆ.
ಪುರಾತನ ಕಾಲದಿಂದಲೂ ಆನೆಗಳನ್ನು ಭಾರತ ಗೌರವದಿಂದ ಕಾಣುತ್ತಾ ಬಂದಿದೆ. ಈ ದೇಶ ಯಾವುದನ್ನೆಲ್ಲ ಪೂಜನೀಯವೆಂದು ಭಾವಿಸಿಕೊಂಡು ಬರಲಾಗಿದೆಯೋ ಅವುಗಳನ್ನೆಲ್ಲ ನಾವು ಹಾಳುಗೆಡವುತ್ತಾ ಬಂದಿದೆ. ಹೆಣ್ಣು ಪೂಜನೀಯಳು ಎನ್ನುತ್ತಲೇ ಅವಳ ಮೇಲೆ ದೌರ್ಜನ್ಯ ನಡೆಸುವ ದೇಶಗಳಲ್ಲಿ ಅಗ್ರಸ್ಥಾನವನ್ನು ಭಾರತ ತನ್ನದಾಗಿಸಿಕೊಂಡಿದೆ. ನದಿಗಳಲ್ಲಿ ದೇವತೆಗಳನ್ನು ಕಂಡಿರುವ ದೇಶ ಭಾರತ. ಗಂಗಾ ನದಿಯನ್ನು ಪುಣ್ಯ ನದಿ ಎಂದು ಕರೆಯುತ್ತಲೇ, ಅದನ್ನು ಕುಡಿಯುವುದಕ್ಕೆ ಅನರ್ಹಗೊಳಿಸಿದ ಹೆಗ್ಗಳಿಕೆ ನಮಗೇ ಸಲ್ಲಬೇಕು. ಈ ದೇಶದ ನದಿಗಳು ಅತಿ ಹೆಚ್ಚು ಮಾಲಿನ್ಯಗೊಳ್ಳುವುದು ಧಾರ್ಮಿಕ ಉತ್ಸವ, ಹಬ್ಬಗಳ ಸಂದರ್ಭಗಳಲ್ಲಿ. ಹಾವುಗಳನ್ನು ಪೂಜನೀಯವೆಂದು ಕರೆಯುತ್ತಲೇ ಹಾವುಗಳಿರುವ ಹುತ್ತಕ್ಕೆ ಹಾಲನ್ನು ಸುರಿದು ಭಕ್ತರೇ ಅದರ ಸಾವಿಗೆ ಕಾರಣರಾಗುತ್ತಾರೆ. ದುರದೃಷ್ಟಕ್ಕೆ ಆನೆಯೂ ಈ ದೇಶದಲ್ಲಿ ಪೂಜನೀಯವಾಗಿರುವುದರಿಂದ, ಅವುಗಳ ಜೀವವೂ ಅಪಾಯದಲ್ಲಿದೆ. ಭಾರತದಲ್ಲಿ ದೇವಸ್ಥಾನ, ಜಾತ್ರೆ, ಉತ್ಸವಗಳಲ್ಲಿ ಆನೆಗಳನ್ನು ಬಳಸುವ ಸಂದರ್ಭದಲ್ಲಿ ಅದಕ್ಕೆ ನೀಡಲಾಗುತ್ತಿರುವ ಚಿತ್ರಹಿಂಸೆಯ ಬಗ್ಗೆ ಈಗಾಗಲೇ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಾಣಿ ದಯಾ ಸಂಘದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಕುವ, ಪಳಗಿಸುವ ಹೆಸರಿನಲ್ಲಿ ಭಾರತದಲ್ಲಿ ಆನೆಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಹಲವು ಸಾಕ್ಷ್ಯಚಿತ್ರಗಳು ಕೂಡ ಬಂದಿವೆ. ಹೆಚ್ಚಿನ ದೇವಸ್ಥಾನಗಳು ಆನೆಗಳನ್ನು ಸಾಕುವುದು ತಮ್ಮ ಕ್ಷೇತ್ರದ ಪ್ರತಿಷ್ಠೆಗಳನ್ನು ಮೆರೆಯುವುದಕ್ಕೆ. ಜಾತ್ರೆಗಳಲ್ಲಿ ವಿಶೇಷ ಆಕರ್ಷಣೆಯಾಗಿ ಆನೆಗಳನ್ನು ಬಳಸುತ್ತಾರೆ. ಸರ್ಕಸ್ಗಳಲ್ಲಿ ಆನೆಗಳನ್ನು ಬಳಸುವ ಬಗ್ಗೆ ಸರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ, ಮಸೀದಿಗಳಲ್ಲಿ ಉತ್ಸವ, ಜಾತ್ರೆಗಳಿಗೆ ಆನೆಗಳನ್ನು ಬಳಸುವುದನ್ನು ಕಂಡೂ ಕಾಣದಂತೆ ವರ್ತಿಸುತ್ತಿದೆ.
ಇವೆಲ್ಲದರ ನಡುವೆ, ಕಳೆದ ನವೆಂಬರ್ ತಿಂಗಳಲ್ಲಿ ಕೇರಳ ಹೈಕೋರ್ಟ್
ಆನೆಗಳನ್ನು ಸಾಕುವ ಹೆಸರಿನಲ್ಲಿ ಅವುಗಳಿಗೆ ನೀಡುವ ಚಿತ್ರಹಿಂಸೆಯನ್ನು ಗಂಭೀರವಾಗಿ ತೆಗೆದುಕೊಂಡಿತ್ತು. ಪ್ರಾಣಿಗಳ ಹಕ್ಕುಗಳ ರಕ್ಷಣೆಯಲ್ಲಿ ಸರಕಾರದ ನಿಷ್ಕ್ರಿಯತೆಗೆ ಸಂಬಂಧಿಸಿದ ಸ್ವಯಂಪ್ರೇರಿತ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ‘‘ಯಾವುದೇ ಹಬ್ಬ, ಉತ್ಸವಗಳಲ್ಲಿ ಆನೆಗಳನ್ನು ಬಳಸುವುದನ್ನು ಯಾವ ಧರ್ಮವೂ ಕಡ್ಡಾಯಗೊಳಿಸಿಲ್ಲ’’ ಎನ್ನುವುದನ್ನು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತ್ತು. ಉತ್ಸವಗಳಲ್ಲಿ ಬಳಸುವುದಕ್ಕಾಗಿ ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುವುದನ್ನು, ಪಳಗಿಸುವುದಕ್ಕಾಗಿ ಹಿಂಸೆ ನೀಡುವುದನ್ನು ‘ನಾಝಿ ನಿರ್ನಾಮ ಶಿಬಿರಗಳಿಗೆ’’ ನ್ಯಾಯಾಲಯ ಹೋಲಿಸಿತ್ತು. ಕಳೆದ ಏಳು ವರ್ಷಗಳಲ್ಲಿ ಕೇರಳ ರಾಜ್ಯದಲ್ಲಿ ಸೆರೆಯಲ್ಲಿದ್ದ ಶೇ. ೩೩ರಷ್ಟು ಆನೆಗಳು ಸತ್ತಿವೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಕಳವಳ ವ್ಯಕ್ತಪಡಿಸಿತ್ತು. ಹೈಕೋರ್ಟ್ನ
ಈ ಕಳವಳದ ಬಳಿಕವೂ ದರ್ಗಾ, ದೇವಸ್ಥಾನಗಳು ತಮ್ಮ ಉತ್ಸವಗಳಲ್ಲಿ ಆನೆಗಳನ್ನು ಬಳಸುತ್ತವೆ ಎಂದಾದರೆ ಆ ಸಂಸ್ಥೆಗಳಿಗೆ ಆನೆಗಳ ಮೇಲೆ ಮಾತ್ರವಲ್ಲ, ನೆರೆದಿರುವ ಮನುಷ್ಯರ ಮೇಲೆಯೂ ಎಳ್ಳಷ್ಟು ಕಾಳಜಿಯಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಆದುದರಿಂದ, ಇಂತಹ ಸಂದರ್ಭದಲ್ಲಿ ಆನೆಗಳೇನಾದರೂ ದಾಂಧಲೆೆಗಳನ್ನು ಎಸಗಿದರೆ, ಅದಕ್ಕೆ ಸಂಪೂರ್ಣವಾಗಿ ಆಯಾ ದೇವಸ್ಥಾನ, ಮಸೀದಿಯ ಆಡಳಿತ ಮಂಡಳಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು. ಮಾತ್ರವಲ್ಲ, ಸಂತ್ರಸ್ತರಿಗೆ ಪರಿಹಾರವನ್ನು ಕೂಡ ಅವರಿಂದಲೇ ಕೊಡಿಸಬೇಕು. ಕೇರಳದಲ್ಲಿ ಎಂದಲ್ಲ, ದೇಶದ ಹಲವು ರಾಜ್ಯಗಳ ದೇವಸ್ಥಾನಗಳು ಆನೆಗಳನ್ನು ಪ್ರತಿಷ್ಠೆಯ ರೂಪದಲ್ಲಿ ಸಾಕುತ್ತಿವೆ ಮತ್ತು ಉತ್ಸವಗಳ ಸಂದರ್ಭದಲ್ಲಿ ಅವುಗಳನ್ನು ಮೆರವಣಿಗೆಗಳಲ್ಲಿ ಬಳಸುತ್ತಿವೆ. ಎರಡು ತಿಂಗಳ ಹಿಂದೆ, ತಮಿಳು ನಾಡಿನ ತಿರುಚೆಂಡೂರು ಮುರುಗನ್ ದೇವಸ್ಥಾನದಲ್ಲಿ ತನ್ನ ಇಬ್ಬರು ಮಾವುತರನ್ನೇ ಆನೆ ಕೊಂದು ಹಾಕಿತ್ತು. ಉಡುಪಿಯ ಮಠವೊಂದರ ಆನೆ ಸಾರ್ವಜನಿಕವಾಗಿ ನಡೆಸಿದ ದಾಂಧಲೆ ಒಮ್ಮೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಕರ್ನಾಟಕದ ಮೈಸೂರಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ದಸರಾದ ಹೆಗ್ಗಳಿಕೆಯೇ ಜಂಬೂಸವಾರಿ. ಈ ಸಂದರ್ಭದಲ್ಲಿ ಅದನ್ನು ವೀಕ್ಷಿಸಲೆಂದೇ ಲಕ್ಷಾಂತರ ಜನರು ನೆರೆಯುತ್ತಾರೆ. ಅದ್ದೂರಿ ಮೆರವಣಿಗೆಯಲ್ಲಿ ಆಕರ್ಷಣೆಯ ಕೇಂದ್ರ ಆನೆಗಳಾಗಿವೆ. ಒಂದು ವೇಳೆ ಈ ಸಂದರ್ಭದಲ್ಲಿ ಆನೆಗಳೇನಾದರೂ ರೊಚ್ಚಿಗೆದ್ದರೆ ಸಂಭವಿಸುವ ಸಾವು ನೋವುಗಳನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಜಂಬೂಸವಾರಿಯ ಹೆಸರಿನಲ್ಲಿ ಆನೆಗಳನ್ನು ಬಳಸುವುದರ ವಿರುದ್ಧ ಈಗಾಗಲೇ ನಾಡಿನ ಹಲವು ಗಣ್ಯರು ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಆನೆಗಳ ದುರ್ಬಳಕೆ ಮಾತ್ರವಲ್ಲ, ರಾಜಪ್ರಭುತ್ವದ ವೈಭವೀಕರಣವೂ ಹೌದು. ಜಂಬೂಸವಾರಿಯನ್ನು ನಿಲ್ಲಿಸಬೇಕು ಎನ್ನುವ ಒತ್ತಾಯಗಳಿಗೆ ಸರಕಾರ ಜಾಣ ಕಿವುಡುತನವನ್ನು ಪ್ರದರ್ಶಿಸುತ್ತಾ ಬಂದಿದೆ. ಈ ದೇಶದಲ್ಲಿ ಹೊಟ್ಟೆ ಪಾಡಿಗಾಗಿ ಕರಡಿ ಆಡಿಸುವವರಿಗೆ, ಕೋತಿ ಆಡಿಸುವವರಿಗೆ, ಹಾವು ಆಡಿಸುವವರಿಗೆ, ಸರ್ಕಸ್ ಕಂಪೆನಿ ನಡೆಸುವವರಿಗೆ ವನ್ಯ ಜೀವಿ ಕಾಯ್ದೆ ಅನ್ವಯವಾಗುತ್ತದೆ. ಆದರೆ, ಆಚರಣೆಯ ಹೆಸರಿನಲ್ಲಿ, ಉತ್ಸವದ ಹೆಸರಿನಲ್ಲಿ ಆನೆ ಆಡಿಸಿ ದುಡ್ಡು ಮಾಡುವ ಧಾರ್ಮಿಕ ಸಂಸ್ಥೆಗಳಿಗೆ ಈ ಕಾಯ್ದೆ ಯಾಕೆ ಅನ್ವಯವಾಗುವುದಿಲ್ಲ ಎನ್ನುವ ಪ್ರಶ್ನೆಗೆ ಎಲ್ಲ ಸರಕಾರ ಇನ್ನಾದರೂ ಉತ್ತರಿಸಲೇಬೇಕಾಗಿದೆ.