ಬಿಜೆಪಿಯ ಮನೆಯಲ್ಲಿ ಗಜ ಪ್ರಸವ!
Photo: twitter
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಿಜೆಪಿ ಎನ್ನುವ ಮುದಿ ಹೆಣ್ಣಾನೆ ವಾರದೊಳಗೆ ಕೊನೆಗೂ ಎರಡು ಮರಿಗಳನ್ನು ಇಟ್ಟಿದೆ. ಹಲವು ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡ ರಾಜ್ಯಾಧ್ಯಕ್ಷನೆಂಬ ಮರಿ ಹೊರಗೆ ಬಿದ್ದ ನಾಲ್ಕು ದಿನಗಳಲ್ಲಿ ವಿರೋಧ ಪಕ್ಷ ನಾಯಕನೆಂಬ ಮರಿಯೂ ಹೊರ ಬಂದಿದೆ. ವರಿಷ್ಠರು ಹಲವು ತಿಂಗಳು ಹಗಲು ರಾತ್ರಿಯೆನ್ನದೆ ನಡೆಸಿದ ಸಿಸೇರಿಯನ್ ಹೆರಿಗೆ ಇದು. ಮಗು ಹುಟ್ಟಿದರೆ ತಾಯಿಯ ಜೀವಕ್ಕೆ ಆಪತ್ತು ಎನ್ನುವ ಕಾರಣದಿಂದ ಹೆರಿಗೆಯನ್ನು ಅವರು ಮುಂದೂಡುತ್ತಲೇ ಬಂದಿದ್ದರು. ಇದೀಗ ಮಗುವನ್ನು ಹೊರಗೆ ತೆಗೆಯದೇ ಇದ್ದರೆ ತಾಯಿ ಮತ್ತು ಮಗು ಎರಡೂ ಒಟ್ಟೊಟ್ಟಿಗೆ ಕಣ್ಣು ಮುಚ್ಚಬಹುದು ಎನ್ನುವ ಹಂತದಲ್ಲಿ ಸಿಸೇರಿಯನ್ ಮೂಲಕ ಮಗುವನ್ನು ಹೊರಗೆ ತೆಗೆದಿದ್ದಾರೆ. ಮೊದಲ ಮಗುವಿನ ಹೆರಿಗೆಯ ಪರಿಣಾಮಗಳನ್ನು ನೋಡಿ ಬಳಿಕ ನಿಧಾನಕ್ಕೆ ಎರಡನೆಯ ಹೆರಿಗೆಯನ್ನು ಮಾಡಿಸಿದ್ದಾರೆ ಬಿಜೆಪಿ ವರಿಷ್ಠರು. ಮೊದಲನೇ ಹೆರಿಗೆಯ ಗಾಯಗಳು ತಾಯಿಯ ಜೀವಕ್ಕೆ ಅಪಾಯ ತರುವಷ್ಟು ರಕ್ತಸ್ರಾವವನ್ನು ಉಂಟು ಮಾಡಿಲ್ಲ ಎನ್ನುವ ಸಮಾಧಾನದೊಂದಿಗೆ ಎರಡನೆಯ ಹೆರಿಗೆಯನ್ನು ಮಾಡಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯಾಧ್ಯಕ್ಷರಾಗಿ ಲಿಂಗಾಯತ ಸಮುದಾಯದ ವಿಜಯೇಂದ್ರ ಆಯ್ಕೆಯಾದ ಬೆನ್ನಿಗೇ ಒಕ್ಕಲಿಗ ಸಮುದಾಯದ ಆರ್. ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಎರಡು ಬಲಾಢ್ಯ ಸಮುದಾಯಗಳ ಮೂಲಕ ಬಿಜೆಪಿಯನ್ನು ರಾಜ್ಯದಲ್ಲಿ ಹೊಸದಾಗಿ ಕಟ್ಟುವ ಕೆಲಸವನ್ನು ಮಾಡಲು ವರಿಷ್ಠರು ಮುಂದಾಗಿದ್ದಾರೆ. ಎರಡು ಮಕ್ಕಳು ತಾಯಿಯ ಹೊಟ್ಟೆಯಿಂದ ಹೊರ ಬಂದಿವೆಯಾದರೂ, ತಾಯಿ ಮಾತ್ರ ಮಗುವಿಗೆ ಹಾಲೂಡಿಸಲು ಇನ್ನೂ ಸಮರ್ಥಳಾಗಿಲ್ಲ.
ಮಗು ಆರೋಗ್ಯವಾಗಿದೆಯಾದರೂ ತಾಯಿಯ ದೇಹ ಇನ್ನೂ ಚೇತರಿಸಿಕೊಂಡಿಲ್ಲ ಎನ್ನುವುದಕ್ಕೆ ಬಿಜೆಪಿಯೊಳಗಿಂದ ಹೊರಬೀಳುತ್ತಿರುವ ಹೇಳಿಕೆಗಳೇ ಸಾಕ್ಷಿಯಾಗಿವೆ.
ಮುಖ್ಯವಾಗಿ ರಾಜ್ಯಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಆರೆಸ್ಸೆಸ್ ಮುಖಂಡರು ಸೇರಿದಂತೆ ಹಲವು ಹಿರಿಯರು ಭಾಗವಹಿಸಿಲ್ಲ. ಈ ಮೂಲಕ ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪುವುದು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ವರಿಷ್ಠರಿಗೆ ತಲುಪಿಸಿದ್ದಾರೆ. ಯಡಿಯೂರಪ್ಪ ಅವರ ಪ್ರತಿಸ್ಪರ್ಧಿಗಳು ಎಂದು ಗುರುತಿಸಲ್ಪಟ್ಟಿರುವ ಈಶ್ವರಪ್ಪ, ಸಿ.ಟಿ. ರವಿ ಮತ್ತು ಯತ್ನಾಳ್ ನೀಡಿರುವ ಹೇಳಿಕೆಗಳು ಪಕ್ಷದ ಚಿಂತಾಜನಕ ಭವಿಷ್ಯವನ್ನು ಹೇಳುತ್ತಿವೆ. ‘‘ವಿಜಯೇಂದ್ರರಿಂದಲೇ ಪಕ್ಷ ಅಲ್ಲ. ಎಲ್ಲರೂ ಸೇರಿದರೆ ಮಾತ್ರ ಪಕ್ಷ’’ ಎನ್ನುವ ಮೂಲಕ, ನಾವು ಕೈ ಜೋಡಿಸದೇ ಇದ್ದರೆ ನೀವು ಪಕ್ಷ ಸಂಘಟಿಸುವುದು ಸಾಧ್ಯವಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಒಕ್ಕಲಿಗ-ಲಿಂಗಾಯತರ ಕೈಗೆ ಪಕ್ಷದ ಚುಕ್ಕಾಣಿ ನೀಡಿದ ಸಂದರ್ಭದಲ್ಲೇ, ಅದೇ ಸಮುದಾಯಗಳಿಗೆ ಸೇರಿದ ಉಳಿದ ನಾಯಕರಿಂದ ಭಿನ್ನಮತಗಳು ಕೇಳಿ ಬಂದಿರುವುದು ಬಿಜೆಪಿಯ ಪಾಲಿಗೆ ಒಳ್ಳೆಯ ಸೂಚನೆಯಲ್ಲ.
ವಿರೋಧ ಪಕ್ಷ ಸ್ಥಾನಾಕಾಂಕ್ಷಿಯಾಗಿದ್ದ ಬಸನ ಗೌಡ ಪಾಟೀಲ್ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನು ‘ಚಿಂದಿ ಚೋರ್’ ಎಂದು ಕರೆದಿದ್ದಾರೆ. ಯತ್ನಾಳ್ ಅವರು ವಿಜಯೇಂದ್ರ ಅವರ ಪದಗ್ರಹಣಕ್ಕೆ ಗೈರು ಹಾಜರಾಗಿದ್ದರು. ಈ ಬಗ್ಗೆ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ‘‘ಯಾವನೋ ಒಬ್ಬ ಚಿಂದಿಚೋರ್ನನ್ನು ತಂದು ಹುಲಿ ಹುಲಿ ಎಂದು ಕರೆಯುವುದನ್ನು ಮೊದಲು ನಿಲ್ಲಿಸಿ. ಜನರಿಗೆ ಎಲ್ಲವೂ ಅರ್ಥವಾಗಲಿದೆ’’ ಎಂದು ಕಿಡಿಕಾರಿದ್ದಾರೆ. ಈಗಾಗಲೇ ಬಿಜೆಪಿಯೊಳಗೆ ವಿರೋಧ ಪಕ್ಷ ನಾಯಕ ಅಭ್ಯರ್ಥಿಯೆಂದು ಗುರುತಿಸಲ್ಪಟ್ಟ ಯತ್ನಾಳ್ ಅವರೇ ಪಕ್ಷದ ರಾಜ್ಯಾಧ್ಯಕ್ಷನನ್ನು ‘ಚಿಂದಿಚೋರ್’ ಎಂದು ಕರೆದ ಮೇಲೆ, ಉಳಿದ ಪಕ್ಷಗಳ ನಾಯಕರು ಇವರನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಂಡಾರು? ರಾಜ್ಯಾಧ್ಯಕ್ಷ ಸ್ಥಾನ ಯಡಿಯೂರಪ್ಪ ಪುತ್ರನ ಪಾಲಾದ ಬೆನ್ನಿಗೇ ‘ವಿರೋಧ ಪಕ್ಷ ನಾಯಕನ ಸ್ಥಾನ’ ದಕ್ಕುವುದಿಲ್ಲ ಎನ್ನುವುದು ಯತ್ನಾಳ್ ಅವರಿಗೆ ಖಚಿತವಾಗಿತ್ತು. ಲಿಂಗಾಯತ ಶಕ್ತಿಯನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ ಮತ್ತೆ ಪಕ್ಷದಲ್ಲಿ ಬೇರೂರುವುದನ್ನು ತಪ್ಪಿಸಲು ಅವರ ಜಾಗಕ್ಕೆ ಯತ್ನಾಳ್ರನ್ನು ತರಲು ಆರೆಸ್ಸೆಸ್ ಗರಿಷ್ಠ ಪ್ರಯತ್ನವನ್ನು ನಡೆಸಿತ್ತು. ಆರೆಸ್ಸೆಸನ್ನು ಮೆಚ್ಚಿಸುವುದಕ್ಕಾಗಿ ಯತ್ನಾಳ್ ಕೂಡ ಕೋಮುಪ್ರಚೋದನಾ ಹೇಳಿಕೆಯನ್ನು ಮೇಲಿಂದ ಮೇಲೆ ನೀಡಿ ತನ್ನ ಅರ್ಹತೆಯನ್ನು ಆರೆಸ್ಸೆಸ್ಗೆ ಸಾಬೀತು ಪಡಿಸಿದ್ದರು. ಆದರೆ ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಂಡು ರಾಜ್ಯದಲ್ಲಿ ಪಕ್ಷವನ್ನು ಪುನರ್ ಸಂಘಟಿಸಲು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿ ಅಮಿತ್ ಶಾ ಅವರು ವಿಜಯೇಂದ್ರನಿಗೆ ಮಣೆ ಹಾಕಿದ್ದಾರೆ. ಸಹಜವಾಗಿಯೇ ವಿರೋಧ ಪಕ್ಷದ ನಾಯಕ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ಹೋಗಿದೆ. ಅಶೋಕ್ ಅವರು ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುತ್ತಾರಾದರೂ, ಸದಾ ಆರೆಸ್ಸೆಸ್ನ ಗೇಟ್ಕೀಪರ್ ಎಂದೇ ಕುಖ್ಯಾತರಾದವರು. ಅಶೋಕ್ರನ್ನು ವಿರೋಧ ಪಕ್ಷದ ನಾಯಕನನ್ನಾಗಿಸುವ ಮೂಲಕ ಒಕ್ಕಲಿಗ ಸಮುದಾಯವನ್ನು ಮತ್ತು ಆರೆಸ್ಸೆಸನ್ನು ಏಕಕಾಲದಲ್ಲಿಸಮಾಧಾನ ಮಾಡುವ ಪ್ರಯತ್ನವನ್ನು ವರಿಷ್ಠರು ನಡೆಸಿದ್ದಾರೆ. ಇದು ಎಷ್ಟರಮಟ್ಟಿಗೆ ಫಲಕೊಡುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯೊಳಗೆ ಇದರ ಹಿಂದುಳಿದ ವರ್ಗಗಗಳ ಸ್ಥಾನ ಏನು ಎನ್ನುವುದು ಕೂಡ ಸಾಬೀತಾಗಿದ್ದು ಈಶ್ವರಪ್ಪಾದಿ ದುರ್ಬಲ ಸಮುದಾಯದ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
ಈ ಹಿಂದೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅವರನ್ನು ಪಕ್ಷದಲ್ಲಿ ಮೂಲೆಗುಂಪಾಗಿಸುವುದರಲ್ಲಿ ಅಶೋಕ್ ಅವರ ಪಾತ್ರವೂ ಇತ್ತು. ವಿರೋಧ ಪಕ್ಷದ ನಾಯಕರಾಗಿ ಅಶೋಕ್ ಮತ್ತು ರಾಜಾಧ್ಯಕ್ಷರಾಗಿ ವಿಜಯೇಂದ್ರ ಎಷ್ಟರಮಟ್ಟಿಗೆ ಜೊತೆಗೂಡಿ ಕೆಲಸ ಮಾಡಬಲ್ಲರು ಎನ್ನುವುದರಲ್ಲಿ ಬಿಜೆಪಿಯ ಭವಿಷ್ಯ ನಿಂತಿದೆ. ವಿರೋಧ ಪಕ್ಷದ ನಾಯಕರಾಗಿರುವ ಅಶೋಕ್ ಮೊದಲು ಬಿಜೆಪಿಯೊಳಗಿರುವ ವಿರೋಧಿಗಳನ್ನು ಎದುರಿಸಿ ಗೆಲ್ಲಬೇಕಾಗಿದೆ. ಆ ಮೂಲಕ ಅವರು ಆಡಳಿತ ಪಕ್ಷವನ್ನು ಎದುರಿಸುವ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಆದರೆ ಇದು ಅಷ್ಟು ಸುಲಭವಿಲ್ಲ. ಎತ್ತು ಏರಿಗೆ, ಕೋಣ ನೀರಿಗೆ ಎಂಬಂತೆ ಅಶೋಕ್ ಪಕ್ಷವನ್ನು ಆರೆಸ್ಸೆಸ್ ಕಡೆ ಎಳೆದರೆ, ವಿಜಯೇಂದ್ರ ಯಡಿಯೂರಪ್ಪ ಕಡೆಗೆ ಎಳೆಯುವ ಸಾಧ್ಯತೆಗಳು ಕಾಣುತ್ತಿವೆ. ಶಾಸಕಾಂಗ ಪಕ್ಷದ ಸಭೆಯನ್ನು ಬಹಿಷ್ಕರಿಸಿದವರಲ್ಲಿ ಬಸನ ಗೌಡ ಪಾಟೀಲ್ ಮಾತ್ರವಲ್ಲ, ಎಸ್. ಟಿ. ಸೋಮಶೇಖರ್, ಬಾಲಚಂದ್ರ ಜಾರಕಿಹೊಳಿ, ಶಿವರಾಮ್ ಹೆಬ್ಬಾರ್ ಮೊದಲಾದವರೂ ಸೇರಿದ್ದಾರೆ. ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವುದು ಪಕ್ಕಕ್ಕಿರಲಿ, ನಾಯಕ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವುದೇ ವಿಜಯೇಂದ್ರ ಅವರಿಗೆ ಅತಿದೊಡ್ಡ ಸವಾಲಾಗಿದೆ. ನಳಿನ್ ಕುಮಾರ್ ಕಟೀಲು ರಾಜ್ಯಾಧ್ಯಾಕ್ಷರಾಗಿದ್ದಾಗ ಅವರೊಂದು ಸೂತ್ರದ ಗೊಂಬೆ ಮಾತ್ರವಾಗಿದ್ದರು. ಇರುವಷ್ಟು ಕಾಲ ತಮ್ಮ ಭಾಷಣಗಳ ಮೂಲಕ ನಾಡಿನ ಜನರನ್ನು ಮನರಂಜಿಸುವ ಕೆಲಸವನ್ನಷ್ಟೇ ಮಾಡಿದರು. ಪಕ್ಷದ ನಿಯಂತ್ರಣ ಆರೆಸ್ಸೆಸ್ ಕೈಯಲ್ಲಿತ್ತು. ಆದರೆ ವಿಜಯೇಂದ್ರ ವಿಷಯದಲ್ಲಿ ಅದಾಗುವುದಿಲ್ಲ. ವಿಜಯೇಂದ್ರ ಅವರನ್ನು ಯಡಿಯೂರಪ್ಪರನ್ನು ಪ್ರತಿನಿಧಿಸುತ್ತಿರುವುದು ಮಾತ್ರವಲ್ಲ, ಮುಂದಿನ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಪ್ರಯತ್ನದಲ್ಲಿದ್ದಾರೆ. ವಿಜಯೇಂದ್ರ ಮೂಲಕ ಬಿಜೆಪಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಆಳುವುದು ಯಡಿಯೂರಪ್ಪ ಅವರ ಸದ್ಯದ ರಾಜಕೀಯ ತಂತ್ರ. ಇದು ಯಶಸ್ವಿಯಾಗಲು ಬಿಜೆಪಿಯೊಳಗಿರುವ ಇತರ ಹಿರಿಯ ನಾಯಕರು ಅವಕಾಶ ಮಾಡಿಕೊಡುತ್ತಾರೆಯೋ ಎನ್ನುವುದರ ಬಗ್ಗೆ ಅನುಮಾನಗಳಿವೆ. ಒಟ್ಟಿನಲ್ಲಿ, ಒಟ್ಟಿನಲ್ಲಿ ಬಿಜೆಪಿ ತಾಯಿ ಹೆತ್ತ ನವಜಾತ ಕೂಸುಗಳನ್ನು ಸದ್ಯಕ್ಕಂತೂ ಜೆಡಿಎಸ್ನ ಕುಮಾರಸ್ವಾಮಿಯವರೇ ಮೊಲೆ ಊಡಿಸಿ ಸಾಕಬೇಕಾದ ಹೃದಯವಿದ್ರಾವಕ ಸ್ಥಿತಿ ನಿರ್ಮಾಣವಾಗಿದೆ.