Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಯಡಿಯೂರಪ್ಪ ಪೊಕ್ಸೊ ಪ್ರಕರಣ:...

ಯಡಿಯೂರಪ್ಪ ಪೊಕ್ಸೊ ಪ್ರಕರಣ: ನಿಷ್ಪಕ್ಷಪಾತ ತನಿಖೆ ನಡೆಯಲಿ

ವಾರ್ತಾಭಾರತಿವಾರ್ತಾಭಾರತಿ15 Jun 2024 9:20 AM IST
share
ಯಡಿಯೂರಪ್ಪ ಪೊಕ್ಸೊ ಪ್ರಕರಣ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಭಾರೀ ಹಿನ್ನಡೆ ಅನುಭವಿಸಲಿದೆ ಎನ್ನುವ ಬಿಜೆಪಿಯೊಳಗೇ ಇರುವ ಕೆಲವು ನಾಯಕರ ಲೆಕ್ಕಾಚಾರ ಬುಡಮೇಲಾಗಿದೆ. ಈ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ತೀವ್ರ ಹಿನ್ನಡೆ ಅನುಭವಿಸಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಆರೆಸ್ಸೆಸ್‌ನ ಕೆಲವು ನಾಯಕರಿದ್ದರು. ಇದೇ ಸಂದರ್ಭದಲ್ಲಿ ಈಶ್ವರಪ್ಪ ಸೇರಿದಂತೆ ಹಲವು ಭಿನ್ನಮತೀಯ ನಾಯಕರು ಈ ಚುನಾವಣಾ ಫಲಿತಾಂಶವನ್ನು ಯಡಿಯೂರಪ್ಪ ವಿರುದ್ಧವಾಗಿಸಲು ಸರ್ವ ಪ್ರಯತ್ನ ನಡೆಸಿದ್ದರು. ಆದರೆ ಅವರ ಎಲ್ಲ ಪ್ರಯತ್ನ ವಿಫಲವಾಗಿದೆ. ಹಿಂದಿಗಿಂತ ಕಡಿಮೆ ಸ್ಥಾನಗಳನ್ನು ಬಿಜೆಪಿ ಪಡೆದಿದೆಯಾದರೂ, ಸದ್ಯಕ್ಕೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ಪಡೆದಿರುವ ಸ್ಥಾನಗಳು ಯಡಿಯೂರಪ್ಪರ ಬೇರನ್ನು ಬಿಜೆಪಿಯಲ್ಲಿ ಇನ್ನಷ್ಟು ಇಳಿಸಿದೆ. ಪಕ್ಷದ ಮೇಲೆ ಯಡಿಯೂರಪ್ಪ ಅವರ ಹಿಡಿತ ಇರುವವರೆಗೆ ಆರೆಸ್ಸೆಸ್‌ನೊಳಗಿನ ಬ್ರಾಹ್ಮಣ ಶಕ್ತಿ ಮುನ್ನ್ನೆಲೆಗೆ ಬರಲು ಸಾಧ್ಯವಿಲ್ಲ. ಇದೇ ಹೊತ್ತಿಗೆ ಯಡಿಯೂರಪ್ಪ ಅವರ ವಿರುದ್ಧದ ಪೊಕ್ಸೊ ಪ್ರಕರಣ ಜೀವ ಪಡೆದುಕೊಂಡಿದೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಅವರ ಬಂಧನಕ್ಕೆ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿರುವುದು ಸದ್ಯಕ್ಕೆ ಚರ್ಚೆಯಲ್ಲಿದೆ. ಆದರೆ ಯಡಿಯೂರಪ್ಪ ಬಂಧನಕ್ಕೆ ಹೈಕೋರ್ಟ್ ತಾತ್ಕಾಲಿಕವಾದ ತಡೆಯನ್ನು ನೀಡಿದೆ.

ದೂರೊಂದನ್ನು ಹಿಡಿದುಕೊಂಡು ಬಂದ ಅತ್ಯಾಚಾರ ಸಂತ್ರಸ್ತೆ ಬಾಲಕಿಗೆ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎನ್ನುವ ಆರೋಪ ಯಡಿಯೂರಪ್ಪ ಅವರ ಮೇಲಿದೆ. ಪ್ರಕರಣ ಮೂರು ತಿಂಗಳ ಹಿಂದೆ ನಡೆದಿರುವುದು ಎನ್ನಲಾಗುತ್ತಿದೆ. ಚುನಾವಣೆಗೆ ಮುನ್ನ ಸಂತ್ರಸ್ತೆಯ ತಾಯಿ ಈ ಸಂಬಂಧ ದೂರು ಸಲ್ಲಿಸಿದ್ದರು. ಈ ದೂರು ಚುನಾವಣೆಯ ಮೇಲೂ, ಯಡಿಯೂರಪ್ಪರ ಮೇಲೂ ದುಷ್ಪರಿಣಾಮವನ್ನು ಬೀರಬಹುದು ಎಂದು ಊಹಿಸಲಾಗಿತ್ತು. ಅಚ್ಚರಿಯೆಂಬಂತೆ, ಪ್ರಕರಣದ ಬಗ್ಗೆ ವಿಶೇಷ ತನಿಖೆಯಾಗಲೇ ಇಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರಕಾರ ಗೃಹ ಇಲಾಖೆಗೆ ಒತ್ತಡ ಹೇರಬೇಕಾಗಿತ್ತು. ಸಂತ್ರಸ್ತೆಗೆ ನ್ಯಾಯ ನೀಡುವ ಉದ್ದೇಶದೊಂದಿಗೆ ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸುವುದಕ್ಕಾಗಿಯೂ ಕಾಂಗ್ರೆಸ್ ಇದನ್ನು ಬಳಸಿಕೊಳ್ಳಬಹುದಿತ್ತು. ಆದರೆ ಗೃಹ ಸಚಿವರೇ ಯಡಿಯೂರಪ್ಪ ಅವರ ರಕ್ಷಣೆಗೆ ನಿಂತರು ಎನ್ನುವ ಆರೋಪಗಳಿವೆ. ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಬೇಕಾಗಿದ್ದ ಸಚಿವರು, ಪರೋಕ್ಷವಾಗಿ ಸಂತ್ರಸ್ತೆಯ ದೂರಿನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದರು. ಬಿಜೆಪಿಯೊಳಗಿರುವ ಕೆಲವರಿಗೆ ಈ ಪ್ರಕರಣ ಚರ್ಚೆಗೆ ಬರಬೇಕು ಎನ್ನುವ ಆಸೆ ಇತ್ತಾದರೂ, ರಾಜ್ಯ ಸರಕಾರ ಪರೋಕ್ಷವಾಗಿ ಯಡಿಯೂರಪ್ಪ ಅವರ ರಕ್ಷಣೆಗೆ ನಿಂತ ಪರಿಣಾಮವಾಗಿ ಪೊಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಯಡಿಯೂರಪ್ಪ ವಿಚಾರಣೆ ನಡೆಯಲೇ ಇಲ್ಲ. ವಿಪರ್ಯಾಸವೆಂದರೆ, ಯಾವುದೇ ರಾಜಕೀಯ ಪಕ್ಷಗಳೂ ಸಂತ್ರಸ್ತೆಯ ಜೊತೆಗೆ ನಿಲ್ಲದೇ ಇರುವುದು. ಯಡಿಯೂರಪ್ಪ ಪ್ರಕರಣದಲ್ಲಿ ಬಿಜೆಪಿಯೊಳಗಿರುವ ಕೆಲವು ಶಕ್ತಿಗಳನ್ನು ಹೊರತು ಪಡಿಸಿದರೆ ಕಾಂಗ್ರೆಸ್ ಕೂಡ ಆರೋಪಿಯ ಜೊತೆಗೇ ಗುರುತಿಸಿಕೊಂಡಿತು.

ಅತ್ಯಂತ ಆಘಾತಕಾರಿ ಅಂಶವೆಂದರೆ, ಈ ನಡುವೆ ದೂರು ನೀಡಿದ್ದ ಸಂತ್ರಸ್ತೆಯ ತಾಯಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಆಕೆ ಕ್ಯಾನ್ಸರ್‌ರೋಗಿಯಾಗಿದ್ದರೂ ಅನಿರೀಕ್ಷಿತ ಸಾವಿನ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಆಕೆ ನೀಡಿದ ದೂರಿಗೆ ಮತ್ತೆ ಜೀವ ಬಂದಿದೆ. ಸಂತ್ರಸ್ತೆಯ ಸೋದರ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸುತ್ತಿದ್ದಂತೆಯೇ ಪೊಲೀಸರು ಎಚ್ಚರಗೊಂಡು ಅನಿವಾರ್ಯವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಪರಿಣಾಮವಾಗಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಆದರೆ ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಬೆನ್ನಿಗೆ ರಾಜ್ಯ ಸರಕಾರವೇ ನಿಂತಿದೆ ಎನ್ನುವ ಅನುಮಾನಗಳನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಸಾಧಾರಣವಾಗಿ ಪೊಕ್ಸೊ ಪ್ರಕರಣದಲ್ಲಿ ಆರೋಪಿಗಳು ನುಣುಚಿಕೊಳ್ಳುವುದು ಕಷ್ಟ. ಅಷ್ಟರಮಟ್ಟಿಗೆ ಕಾನೂನು ಬಿಗಿಯಾಗಿದೆ. ಅನೇಕ ಸಂದರ್ಭದಲ್ಲಿ ಪೊಕ್ಸೊವನ್ನು ದುರ್ಬಳಕೆ ಮಾಡಿದ ಉದಾಹರಣೆಗಳೂ ಇವೆ. ಈ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿರುವುದನ್ನು ಯಡಿಯೂರಪ್ಪ ಸ್ವತಃ ಒಪ್ಪಿಕೊಂಡಿದ್ದಾರೆ. ತನ್ನ ಮೇಲೆ ಆದ ಅನ್ಯಾಯದ ಬಗ್ಗೆ ದೂರು ಹೇಳಿಕೊಂಡು ಬಂದವಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ. ಇದು ನಿಜವೇ ಆಗಿದ್ದರೆ ಅತ್ಯಂತ ಅಮಾನವೀಯವಾದದ್ದು. ಇಂತಹ ಆರೋಪವನ್ನು ಹೊತ್ತ ನಾಯಕನೊಬ್ಬ ಬಿಜೆಪಿಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆ ಎನ್ನುವುದು ಆ ಪಕ್ಷದಲ್ಲಿರುವ ಎಲ್ಲರಿಗೂ ಮುಜುಗರ ತರುವಂತಹದ್ದು. ಬೀದಿಯಲ್ಲಿ ನಿಂತು ಬಿಜೆಪಿಯನ್ನು ಕಟ್ಟಿ ಬೆಳೆಸಿದ ಒಬ್ಬ ನಾಯಕ, ಮಾಜಿ ಮುಖ್ಯಮಂತ್ರಿ ಇಂತಹದೊಂದು ಪ್ರಕರಣದಲ್ಲಿ ಗುರುತಿಸಿಕೊಳ್ಳುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ಪ್ರಕರಣದ ತನಿಖೆ ಸುಗಮವಾಗಿ ನಡೆದಾಗ ಮಾತ್ರ ಸತ್ಯಾಸತ್ಯತೆ ಹೊರ ಬೀಳಬಹುದು. ಆದರೆ ಸಂತ್ರಸ್ತರು ರಾಜಕೀಯ ಅತಿರಥ ಮಹಾರಥರನ್ನು ಎದುರಿಸಿ ತಮ್ಮ ನ್ಯಾಯವನ್ನು ಪಡೆದುಕೊಳ್ಳಬೇಕಾಗಿದೆ. ಆದುದರಿಂದಲೇ, ಸಂತ್ರಸ್ತರಿಗೆ ನ್ಯಾಯ ಸಿಗುವುದು ಅನುಮಾನ.

ಯಡಿಯೂರಪ್ಪ ಪ್ರಕರಣದ ಗದ್ದಲದಲ್ಲಿ ಯಾವ ಕಾರಣಕ್ಕೂ ಪ್ರಜ್ವಲ್ ಗೌಡ ಲೈಂಗಿಕ ಹಗರಣ ಮುಚ್ಚಿ ಹೋಗಬಾರದು. ಪ್ರಜ್ವಲ್ ವಿರುದ್ಧ ಹಲವು ಮಹಿಳೆಯರು ವೈಯಕ್ತಿಕವಾಗಿ ದೂರು ಸಲ್ಲಿಸಿದ್ದಾರೆ. ಇದೀಗ ಜೆಡಿಎಸ್‌ನ ಹಿರಿಯ ನಾಯಕರೊಬ್ಬರು ಕೇಂದ್ರದಲ್ಲಿ ಸಚಿವರಾಗುತ್ತಿದ್ದಂತೆಯೇ ಪ್ರಕರಣದ ಬಗ್ಗೆ ಆಸಕ್ತಿ ತಣ್ಣಗಾಗುತ್ತಿದೆ. ಪ್ರಜ್ವಲ್ ಗೌಡ ಅವರ ಪ್ರಕರಣವನ್ನು ತಣ್ಣಗಾಗಿಸುವುದಕ್ಕಾಗಿಯೇ ಕೆಲವರು ಯಡಿಯೂರಪ್ಪ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳೂ ಇವೆ. ಯಡಿಯೂರಪ್ಪ ಪ್ರಕರಣದ ಜೊತೆ ಜೊತೆಗೇ ಪ್ರಜ್ವಲ್ ಪ್ರಕರಣದ ತನಿಖೆಯೂ ವೇಗ ಪಡೆಯಬೇಕು. ಸಾಕ್ಷ್ಯಗಳನ್ನು ನಾಶ ಪಡಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಆರೋಪ ಎರಡು ಪ್ರಕರಣಗಳಲ್ಲೂ ಕೇಳಿ ಬರುತ್ತಿವೆ. ಯಡಿಯೂರಪ್ಪ ಅವರ ಪ್ರಕರಣದಲ್ಲಿ ದೂರು ಕೊಟ್ಟ ತಾಯಿಯೇ ಮೃತಳಾಗಿದ್ದಾಳೆ. ಇದೇ ಸಂದರ್ಭದಲ್ಲಿ ಮೃತಳ ದೂರಿನ ಬಗ್ಗೆ, ಆಕೆಯ ಮಾನಸಿಕ ಸ್ಥಿತಿಯ ಬಗ್ಗೆ ಗೃಹ ಸಚಿವರೇ ಕೇವಲವಾಗಿ ಮಾತನಾಡಿದ್ದಾರೆ. ಇದು ತನಿಖೆಗೆ ಭಾರೀ ಹಿನ್ನಡೆಯಾಗಿದೆ.

ಪ್ರಜ್ವಲ್, ಯಡಿಯೂರಪ್ಪ ಪ್ರಕರಣದ ಗದ್ದಲದ ಜೊತೆಗೆ ನಟ ದರ್ಶನ್ ಪ್ರಕರಣವೂ ಸೇರಿಕೊಂಡಿರುವುದು ವಿಪರ್ಯಾಸವಾಗಿದೆ. ದರ್ಶನ್ ಎದುರಿಸುತ್ತಿರುವುದು ಕೊಲೆ ಆರೋಪ ಆಗಿದ್ದರೂ ಅದರ ಹಿಂದೆಯೂ ‘ಮಹಿಳೆ’ ಕೇಂದ್ರ ಬಿಂದುವಾಗಿದ್ದಾಳೆ. ಮೃತನು ದರ್ಶನ್ ಪ್ರೇಯಸಿಗೆ ಅಶ್ಲೀಲ ಸಂದೇಶಗಳು ಕಳುಹಿಸಿದ್ದೇ ಭಾರೀ ದುರಂತವೊಂದಕ್ಕೆ ಕಾರಣವಾಯಿತು. ಅಂತಿಮವಾಗಿ ಇಡೀ ಪ್ರಕರಣ ಕೊಲೆಯಲ್ಲಿ ಮುಕ್ತಾಯವಾಯಿತು. ಇದೀಗ ದರ್ಶನ್ ಬಂಧನಕ್ಕೊಳಗಾಗಿದ್ದು ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ಈ ಮೂರೂ ಪ್ರಕರಣದಲ್ಲಿ ಹೆಣ್ಣಿನ ಮೇಲೆ ಲೈಂಗಿಕ ಹಲ್ಲೆಗಳನ್ನು ಮಾಡಿದವರು ಸಂಘಪರಿವಾರದೊಂದಿಗೆ ನೇರ ಅಥವಾ ಪರೋಕ್ಷವಾಗಿ ಗುರುತಿಸಿಕೊಂಡಿದ್ದಾರೆ. ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಪ್ರಜ್ವಲ್ ಗೌಡ ಬಿಜೆಪಿಯ ದತ್ತು ಪುತ್ರನಾಗಿ ಗುರುತಿಸಿಕೊಂಡಿದ್ದಾನೆ. ಇದೇ ಸಂದರ್ಭದಲ್ಲಿ, ದರ್ಶನ್ ಕೈಯಲ್ಲಿ ಹತ್ಯೆಯಾಗಿದ್ದಾನೆ ಎಂದು ಹೇಳಲಾಗಿರುವ ಸಂತ್ರಸ್ತನೂ ಸಂಘಪರಿವಾರ ಕಾರ್ಯಕರ್ತನಾಗಿ ಗುರುತಿಸಿಕೊಂಡವನು. ಈ ಹಿನ್ನೆಲೆಯಲ್ಲಿ ಸಂಸ್ಕೃತಿಯ ಗುತ್ತಿಗೆಯನ್ನು ವಹಿಸಿಕೊಂಡಿರುವ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಆತ್ಮವಿಮರ್ಶೆಯನ್ನು ಮಾಡಬೇಕು. ಪದೇ ಪದೇ ಬಿಜೆಪಿಯ ನಾಯಕರೇ ಯಾಕೆ ರಾಷ್ಟ್ರ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಲೈಂಗಿಕ ಹಗರಣಗಳಿಗಾಗಿ ಗುರುತಿಸಿಕೊಳ್ಳುತ್ತಿದ್ದಾರೆ? ಈ ಬಗ್ಗೆ ಆರೆಸ್ಸೆಸ್ ತಮ್ಮ ನಾಯಕರಿಗೂ, ಕಾರ್ಯಕರ್ತರಿಗೆ ಕನಿಷ್ಟ ತಿಂಗಳಿಗೊಮ್ಮೆಯಾದರೂ ‘ನೈತಿಕ ತರಬೇತಿ ಶಿಬಿರ’ವೊಂದನ್ನು ಹಮ್ಮಿಕೊಳ್ಳುವ ಅಗತ್ಯವಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X