ಮೌನ ಮುರಿದ ಯಡಿಯೂರಪ್ಪ

PC: fb.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊನೆಗೂ ಯಡಿಯೂರಪ್ಪ ಮೌನ ಮುರಿದಿದ್ದಾರೆ. ‘‘ಯಡಿಯೂರಪ್ಪ ವಿರುದ್ಧ ಅತ್ಯಂತ ಕೀಳುಮಟ್ಟದಲ್ಲಿ ನಿಂದನೆ ಮಾಡುತ್ತಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ನಾನು ಮೌನವಹಿಸಿದ್ದೇನೆ ಎಂದರೆ ಅದು ನನ್ನ ದೌರ್ಬಲ್ಯವಲ್ಲ. ಸೂಕ್ತ ಸಂದರ್ಭದಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ’’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ. ಹೇಳಿಕೆ ವಿಜಯೇಂದ್ರ ಅವರದ್ದಾದರೂ, ಈ ಎಚ್ಚರಿಕೆಯ ಹಿಂದಿನ ಶಕ್ತಿ ಯಡಿಯೂರಪ್ಪ ಅವರೇ ಆಗಿದ್ದಾರೆ. ರಾಜ್ಯದ ಭಿನ್ನಮತೀಯರಿಗೆ ಮಾತ್ರವಲ್ಲ, ಭಿನ್ನಮತೀಯರಿಂದ ಯಡಿಯೂರಪ್ಪ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿರುವ ಬಿಜೆಪಿಯ ವರಿಷ್ಠರಿಗೂ ನೀಡಿದ ಎಚ್ಚರಿಕೆ ಇದಾಗಿದೆ. ಯತ್ನಾಳ್ ಅವರು ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಬರೇ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿಯಷ್ಟೇ ಹೇಳಿಕೆಗಳನ್ನು ನೀಡುತ್ತಾ ಬಂದಿಲ್ಲ. ತೀರಾ ಮೂರನೇ ದರ್ಜೆಯ ಭಾಷೆಯಲ್ಲಿ ವಿಜಯೇಂದ್ರ ಅವರ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದಾರೆ. ರಾಜಕೀಯವಾಗಿ ಅನನುಭವಿ ಎಂದು ಅವರನ್ನು ನಿಂದಿಸಿರುವುದಷ್ಟೇ ಅಲ್ಲ, ಅವರ ವಿರುದ್ಧ ಅವಾಚ್ಯ ಪದಗಳನ್ನು ಕೂಡ ಹಲವು ಬಾರಿ ಬಳಸಿದ್ದಾರೆ. ಆದರೆ ವಿಜಯೇಂದ್ರ ಮಾತ್ರ ಇವೆಲ್ಲವನ್ನು ಅತ್ಯಂತ ಮುತ್ಸದ್ದಿತನದಿಂದ, ಪ್ರಬುದ್ಧತೆಯಿಂದ ಎದುರಿಸಿದ್ದಾರೆ. ಮುಖ್ಯವಾಗಿ ಟೀಕೆಗೆ ಪ್ರತಿಯಾಗಿ ಟೀಕೆಗಳನ್ನು ಮಾಡದೆ ಬಹಳಷ್ಟು ಸಂದರ್ಭದಲ್ಲಿ ಮೌನವನ್ನು ಕಾಪಾಡಿಕೊಂಡಿದ್ದಾರೆ. ಯತ್ನಾಳ್ ಕೆಣಕಿದಷ್ಟು ವಿಜಯೇಂದ್ರ ತಾಳ್ಮೆವಹಿಸಿದ್ದಾರೆ. ಯತ್ನಾಳ್ ಗುಂಪುಗಳು ಮಾಧ್ಯಮಗಳ ಮೂಲಕ ಗದ್ದಲ ಎಬ್ಬಿಸುತ್ತಿರುವ ಹೊತ್ತಿನಲ್ಲಿ, ವಿಜಯೇಂದ್ರ ಅವರು ತನ್ನ ಜಾತಿ ಮತ್ತು ಹಣ ಬಲವನ್ನು ಬಳಸಿಕೊಂಡು ತಳಸ್ತರದಲ್ಲಿರುವ ಬಿಜೆಪಿ ನಾಯಕರನ್ನು ತನ್ನವರನ್ನಾಗಿಸುವಲ್ಲಿ ಭಾಗಶಃ ಯಶಸ್ವಿಯಾದರು. ತನ್ನ ಬಣದವರನ್ನು ವಿವಿಧ ಜಿಲ್ಲೆಗಳಲ್ಲಿ ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡಿ ವರಿಷ್ಠರಿಗೆ ತನ್ನ ಅರ್ಹತೆಯನ್ನು ಸಾಬೀತು ಪಡಿಸಿದರು. ಚುನಾವಣೆಗಳಲ್ಲಿ ವಿಜಯೇಂದ್ರ ಬಣ ಮೇಲುಗೈ ಆಗುತ್ತಿರುವುದು ಕಂಡು, ‘ಹಣ ಬಲದಿಂದ ಚುನಾವಣೆಯನ್ನು ಗೆಲ್ಲುತ್ತಿದ್ದಾರೆ. ಇಂತಹ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಪ್ರಯೋಜನವೇನು?’ ಎಂದು ಯತ್ನಾಳ್ ಚುನಾವಣೆಯಿಂದ ಹಿಂದೆ ಸರಿಯುವ ಮಾತುಗಳನ್ನಾಡಿದರು.
ರಾಜ್ಯಾಧ್ಯಕ್ಷ ಚುನಾವಣೆಗೆ ತನ್ನ ಪರವಾಗಿ ನಿರೀಕ್ಷಿತ ಬೆಂಬಲ ಸಿಗದೇ ಇರುವುದರಿಂದ ಯತ್ನಾಳ್ ಬಣ, ಎರಡು ದಿನಗಳ ಹಿಂದೆ ವಿಜಯೇಂದ್ರ ವಿರುದ್ಧ ದೂರನ್ನು ಹೊತ್ತುಕೊಂಡು ದಿಲ್ಲಿಗೆ ತೆರಳಿತು. ಆದರೆ ಅವರಿಗೆ ವರಿಷ್ಠರ ಭೇಟಿ ಸಾಧ್ಯವಾಗಲಿಲ್ಲ. ಇದು ಯತ್ನಾಳ್ ಬಣಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಅವರು ಖಾಲಿ ಕೈಯೊಂದಿಗೆ ವಾಪಸಾದ ಬೆನ್ನಿಗೇ ವಿಜಯೇಂದ್ರ ಅವರು ಮೌನವನ್ನು ಮುರಿದಿದ್ದಾರೆ. ‘‘ಕೆಲವು ನಾಯಕರ ವರ್ತನೆಯಿಂದಾಗಿ ಪಕ್ಷದ ಕಾರ್ಯಕರ್ತರು ತಲೆ ಎತ್ತಿಕೊಂಡು ತಿರುಗಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಡಿಯೂರಪ್ಪ ಅವರ ತೇಜೋವಧೆ ನಡೆಯುತ್ತಿದ್ದರೂ ಅದಕ್ಕೆ ಅಂಕುಶ ಹಾಕುವ ಕೆಲಸವನ್ನು ಹಿರಿಯ ನಾಯಕರು ಮಾಡಿಲ್ಲ ಎಂಬ ನೋವು ನನಗಿದೆ’’ ಎಂದು ಬಹಿರಂಗವಾಗಿ ವರಿಷ್ಠರ ವಿರುದ್ಧವೇ ಅವರು ಹರಿಹಾಯ್ದ್ದಿದ್ದಾರೆ. ಈ ನೋವನ್ನು ಹಿಂದೆ ಹಲವು ಬಾರಿ ಯಡಿಯೂರಪ್ಪ ಅವರು ವ್ಯಕ್ತಪಡಿಸಿದ್ದರು. ಇದೀಗ ಅವರ ಪುತ್ರನೂ ಅದೇ ನೋವನ್ನು ಅನುಭವಿಸುವ ಸ್ಥಿತಿ ಬಿಜೆಪಿಯೊಳಗೆ ನಿರ್ಮಾಣವಾಗಿದೆ.
ಭಿನ್ನಮತ ತೀವ್ರವಾದಾಗ ಅಂತಿಮ ಪರಿಹಾರವಾಗಿ ‘ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ’ಯನ್ನು ವರಿಷ್ಠರು ಘೋಷಿಸಿದ್ದರು. ಕನಿಷ್ಠ ಚುನಾವಣೆ ಮುಗಿಯುವವರೆಗೆ ಯಾರೂ ಬಾಯಿ ತೆರೆಯಬಾರದು ಎಂದು ರಾಜ್ಯದ ಬಿಜೆಪಿ ಮುಖಂಡರಿಗೆ ಕಡಿವಾಣ ಹಾಕುವುದು ವರಿಷ್ಠರ ಹೊಣೆಗಾರಿಕೆಯಾಗಿತ್ತು. ಚುನಾವಣೆ ನಡೆಯುವ ಮುನ್ನವೇ, ಚುನಾವಣೆಯನ್ನು ಹಣ ಬಲದ ಮೂಲಕ ವಿಜಯೇಂದ್ರ ಗೆಲ್ಲಲು ಹೊರಟಿದ್ದಾರೆ ಎಂದು ಯತ್ನಾಳ್ ಬಣ ಆರೋಪಿಸಿತು. ಅಷ್ಟೇ ಅಲ್ಲ, ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧದ ಟೀಕೆಯನ್ನು ಮುಂದುವರಿಸಿತು. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ವಿಜಯೇಂದ್ರ ಅವರ ಹಸ್ತಕ್ಷೇಪ ಬಿಜೆಪಿಯೊಳಗೆ ಅಸಮಾಧಾನವನ್ನು ಹೆಚ್ಚಿಸಿತು. ಇದು ಎಷ್ಟು ಬಿಗಡಾಯಿಸಿದೆಯೆಂದರೆ, ಚುನಾವಣೆ ನಡೆದು ಆ ಮೂಲಕ ರಾಜ್ಯಾಧ್ಯಕ್ಷರ ಆಯ್ಕೆಯಾದರೂ, ಆ ಆಯ್ಕೆಯನ್ನು ಪರಸ್ಪರ ಒಪ್ಪಿಕೊಳ್ಳುವ ಸ್ಥಿತಿ ರಾಜ್ಯ ಬಿಜೆಪಿಯೊಳಗಿಲ್ಲ. ವಿಜಯೇಂದ್ರ ಅವರು ಗೆದ್ದರೆ ಅವರಿಗೆ ಯತ್ನಾಳ್, ಈಶ್ವರಪ್ಪ, ಜಾರಕಿಹೊಳಿ ಮೊದಲಾದ ನಾಯಕರು ತಮ್ಮ ಸಹಕಾರವನ್ನು ನೀಡುತ್ತಾರೆಯೆ? ಇದೇ ಸಂದರ್ಭದಲ್ಲಿ ಯತ್ನಾಳ್ ಬಣ ಗೆದ್ದರೆ ಅವರನ್ನು ಯಡಿಯೂರಪ್ಪ ಅವರು ಎಷ್ಟರಮಟ್ಟಿಗೆ ಒಪ್ಪಿಕೊಳ್ಳುತ್ತಾರೆ? ಎನ್ನುವುದೂ ಪ್ರಶ್ನೆಯಾಗಿಯೇ ಉಳಿಯುತ್ತದೆ. ಒಟ್ಟಿನಲ್ಲಿ ಚುನಾವಣೆಯೂ ಬಿಜೆಪಿಯೊಳಗಿರುವ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಸಾಧ್ಯತೆಗಳು ಕಾಣುತ್ತಿಲ್ಲ.
ಬಿಜೆಪಿ ವರಿಷ್ಠರು ಬಿಜೆಪಿಯೊಳಗಿರುವ ಬಣ ತಿಕ್ಕಾಟವನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿಯೇ ಇಲ್ಲ. ಪರಿಹರಿಸುವವರಂತೆ ನಟನೆ ಮಾಡುತ್ತಿದ್ದಾರೆ ಅಷ್ಟೇ. ಒಂದೆಡೆ ತಾನೇ ಚಿವುಟಿ ಮಗುವನ್ನು ಅಳುವಂತೆ ಮಾಡಿ, ಮಗದೊಂದೆಡೆ ಸಮಾಧಾನ ಮಾಡುವ ನಾಟಕವನ್ನು ಮೊದಲು ಬಿಜೆಪಿ ವರಿಷ್ಠರು ನಿಲ್ಲಿಸಬೇಕು. ಯಡಿಯೂರಪ್ಪ ಅವರಿಂದ ಪಕ್ಷದ ಚುಕ್ಕಾಣಿಯನ್ನು ಕಿತ್ತು ಅದನ್ನು ರಾಜ್ಯದ ಕೇಶವಕೃಪದ ಕೈಗೆ ಕೊಡುವ ಉದ್ದೇಶವಿದ್ದರೆ ಅದನ್ನು ನೇರವಾಗಿಯೇ ಪಕ್ಷದ ವರಿಷ್ಠರು ಮಾಡಬೇಕು. ಅದಕ್ಕಾಗಿ ಲಿಂಗಾಯತರು ಮತ್ತು ಶೂದ್ರ ನಾಯಕರನ್ನು ಯಡಿಯೂರಪ್ಪ ವಿರುದ್ಧ ಬಂಡೇಳಲು ಕುಮ್ಮಕ್ಕು ಕೊಟ್ಟು ತನ್ನ ಕಾರ್ಯವನ್ನು ಸಾಧಿಸಲು ಮುಂದಾದರೆ ಬಿಜೆಪಿಗೆ ಇನ್ನಷ್ಟು ನಷ್ಟವುಂಟು ಮಾಡಬಹುದು. ರಾಜ್ಯಬಿಜೆಪಿಯ ನಿಯಂತ್ರಣವನ್ನು ಕೈಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಲಿಂಗಾಯತ ಮತ್ತು ಬ್ರಾಹ್ಮಣ ಶಕ್ತಿಗಳ ನಡುವೆ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಲಿಂಗಾಯತರ ಬೆಂಬಲ ಬೇಕು, ಆದರೆ ಲಿಂಗಾಯತರನ್ನು ಬಿಜೆಪಿಗೆ ಪೂರಕವಾಗಿ ಸಂಘಟಿಸಿದ ಯಡಿಯೂರಪ್ಪ ಬೇಡ ಎಂದಾದರೆ, ಯಡಿಯೂರಪ್ಪರಿಗೆ ಸರಿಸಮಾನವಾದ ಪರ್ಯಾಯ ಲಿಂಗಾಯತ ನಾಯಕನನ್ನು ಬೆಳೆಸುವುದು ವರಿಷ್ಠರ ಕರ್ತವ್ಯವಾಗಿತ್ತು. ಆದರೆ ಆರೆಸ್ಸೆಸ್ ಮೂಗಿನ ನೇರಕ್ಕಿರುವ ಯತ್ನಾಳ್ನಂತಹ ಅಪ್ರಬುದ್ಧ ಲಿಂಗಾಯತ ನಾಯಕನನ್ನು ಮುಂದಿಟ್ಟು ವರಿಷ್ಠರು ಯಡಿಯೂರಪ್ಪ ವಿರುದ್ಧ ಬಿಟ್ಟ ಬಾಣಗಳೆಲ್ಲವೂ ತಿರುಗು ಬಾಣವಾಗಿವೆ. ‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎಂಬಂತೆ, ಯಡಿಯೂರಪ್ವ ಬೇಡ ಆದರೆ, ಅವರ ಹಿಂದಿರುವ ಲಿಂಗಾಯತ ಜಾತಿಯ ಶಕ್ತಿ ಬೇಕು ಎಂಬ ವರಿಷ್ಠರ ನಿಲುವೇ ಬಿಜೆಪಿಯ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ.
ವಿಜಯೇಂದ್ರ ಅಸಮರ್ಥನಾಗಿದ್ದರೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ವರಿಷ್ಠರು ಆಯ್ಕೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ತಾನು ನೇಮಕ ಮಾಡಿದ ಅಭ್ಯರ್ಥಿಯ ವಿರುದ್ಧ ಯತ್ನಾಳ್ ಬಣ ಮೂರನೇ ದರ್ಜೆಯ ಭಾಷೆಯನ್ನು ಬಳಸುವಾಗ ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುವ ಧೈರ್ಯವನ್ನು ಪ್ರದರ್ಶಿಸಬೇಕಾಗುತ್ತದೆ. ಅದನ್ನೂ ವರಿಷ್ಟರು ಪ್ರದರ್ಶಿಸುತ್ತಿಲ್ಲ. ಅಶಿಸ್ತನ್ನು ಪ್ರದರ್ಶಿಸುತ್ತಿರುವವರ ವಿರುದ್ಧ ವರಿಷ್ಟರ ಮೌನವೇ ಇಂದು ಬಿಜೆಪಿಯ ಅತಿ ದೊಡ್ಡ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ವರಿಷ್ಠರ ಕುರಿತಂತೆ ವ್ಯಕ್ತಪಡಿಸಿದ ನೋವು ಸಮರ್ಥನೀಯವಾಗಿದೆ.