ಗೌತಮ್ ಗಂಭೀರ್ ಹಣೆಗೆ ಮುತ್ತಿಕ್ಕಿದ ಶಾರೂಕ್ ಖಾನ್!
PC: x.com/cricketnext
ಚೆನ್ನೈ: ಇಡೀ ಐಪಿಎಲ್ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದ ಕೊಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿ ಟ್ರೋಫಿಯನ್ನು ಎತ್ತಿ ಹಿಡಿಯುತ್ತಿದ್ದಂತೆ ಭಾವಪರವಶರಾದ ತಂಡದ ಸಹ-ಮಾಲೀಕ ಹಾಗೂ ಚಿತ್ರನಟ ಶಾರೂಕ್ ಖಾನ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರ ಹಣೆಗೆ ಮುತ್ತಿಕ್ಕಿದ ಘಟನೆ ನಡೆಯಿತು.
ಏಕಪಕ್ಷೀಯ ಫೈನಲ್ ನಲ್ಲಿ ಇನ್ನೂ 57 ಎಸೆತಗಳು ಇರುವಂತೆಯೇ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಕೆಕೆಆರ್ 8 ವಿಕೆಟ್ ಗಳಿಂದ ಹೊಸಕಿ ಹಾಕಿತು. ಕೇವಲ 18.3 ಓವರ್ ಗಳಲ್ಲಿ 113 ರನ್ ಗಳಿಗೆ ಆಲೌಟ್ ಆದ ಎಸ್ ಆರ್ ಎಚ್ ಐಪಿಎಲ್ ಫೈನಲ್ ನಲ್ಲಿ ಕನಿಷ್ಠ ಮೊತ್ತದ ದಾಖಲೆ ನಿರ್ಮಿಸಿತು.
ಅಲ್ಪ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (26 ಎಸೆತಗಳಲ್ಲಿ 52), ಕೇವಲ 10.3 ಓವರ್ ಗಳಲ್ಲಿ ಗುರಿ ತಲುಪಲು ನೆರವಾದರು. ಮೂರು ಸಿಕ್ಸ್ ಹಾಗೂ ನಾಲ್ಕು ಬೌಂಡರಿಗಳನ್ನೊಳಗೊಂಡ ಅವರ ಇನಿಂಗ್ಸ್, ಅವರಿಗೆ ಸ್ಮರಣೀಯ ಎನಿಸಿತು. ಕೆಲ ತಿಂಗಳಿನಿಂದ ಸವಾಲಿನ ಸ್ಥಿತಿ ಎದುರಿಸುತ್ತಿದ್ದ ವೆಂಕಟೇಶ್ ಅಯ್ಯರ್ ಅವರಿಗೂ ಈ ಪ್ರಶಸ್ತಿ ನಿರಾಳತೆಯನ್ನು ತಂದುಕೊಟ್ಟಿತು.
2012ರಲ್ಲಿ ತಂಡಕ್ಕೆ ಮೊದಲ ಬಾರಿಗೆ ಕಪ್ ಗೆದ್ದುಕೊಂಡ ಗಂಭೀರ್ ಇದೀಗ ಹನ್ನೆರಡು ವರ್ಷದ ಬಳಿಕ ತೆರೆಯ ಹಿಂದಿದ್ದುಕೊಂಡು ತಂಡದ ಗೆಲುವಿನ ರೂವಾರಿ ಎನಿಸಿದ್ದಾರೆ. 2012ರಲ್ಲಿ ನಾಯಕನಾಗಿ 2024ರಲ್ಲಿ ಮೆಂಟರ್ ಅಗಿ ತಂಡಕ್ಕೆ ಗಂಭೀರ್ ಕಪ್ ಗೆದ್ದುಕೊಟ್ಟರು. ಈ ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಸಹ-ಮಾಲೀಕ ಶಾರೂಕ್ ಖಾನ್, ಗಂಭೀರ್ ಜತೆ ಸ್ಮರಣೀಯ ಕ್ಷಣಗಳನ್ನು ಕಳೆದರು. ತಂಡ ಸುಲಭ ಜಯ ಸಾಧಿಸುತ್ತಿದ್ದಂತೆ ಮೈದಾನಕ್ಕೆ ಧುಮುಕಿದ ಶಾರೂಕ್ ಖಾನ್, ಗಂಭೀರ್ ಅವರ ಹಣೆಗೆ ಮುತ್ತಿಕ್ಕಿ, ಮಾಜಿ ನಾಯಕನನ್ನು ಆಲಂಗಿಸಿಕೊಂಡರು. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
2021ರಲ್ಲಿ ಫೈನಲ್ ತಲುಪಿದ್ದ ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಕಳೆದ ಬಾರಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿತ್ತು. ಆದರೆ ರಿಂಕು ಸಿಂಗ್ ಅವರಂಥ ಆಟಗಾರರು 2024ನ್ನು ಸ್ಮರಣೀಯವಾಗಿಸಲು ಭದ್ರ ಬುನಾದಿ ಹಾಕಿದ್ದರು. ರಿಂಕು ಈ ಬಾರಿ ಅಷ್ಟೊಂದು ಮಿಂಚದಿದ್ದರೂ, ಗಂಭೀರ್ ಮಾರ್ಗದರ್ಶನದಲ್ಲಿ ಸುನೀಲ್ ನರೇನ್ ಅವರನ್ನು ಆರಂಭಿಕನಾಗಿ ಕಳುಹಿಸುವ ನಿರ್ಧಾರ ಫಲ ನೀಡಿತು. ನರೇನ್ 15 ಪಂದ್ಯಗಳಿಂದ 488 ರನ್ ಕಲೆ ಹಾಕಿದ್ದಾರೆ.