ಭದ್ರಾವತಿ | ಹನಿಟ್ರಾಪ್ ಅರೋಪ ; ಐವರ ಬಂಧನ
ಶಿವಮೊಗ್ಗ(ನ.21): ಹನಿಟ್ರಾಪ್ ನಡೆಸುತ್ತಿದ್ದ ಮೈಸೂರು ಮೂಲದ ಐವರು ಅರೋಪಿಗಳನ್ನು ಭದ್ರಾವತಿಯ ಹೊಸಮನೆ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ಮೂಲದ ಶರತ್ ಎನ್ನುವವರು ನೀಡಿದ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಹೊಸಮನೆ ಪೊಲೀಸರು ಮೈಸೂರು ಮೂಲದ ವಿನಾಯಕ, ಮಹೇಶ್, ಅರುಣ್ ಕುಮಾರ್, ಹೇಮಂತ್ ಹಾಗೂ ಶ್ವೇತಾ ಎನ್ನುವವರನ್ನು ಬಂಧಿಸಿ, ಒಂದು ಕಾರು ಹಾಗೂ 7 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಭದ್ರಾವತಿಯ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿರುವ ಶರತ್ ಎನ್ನುವ ವ್ಯಕ್ತಿ ಬಸ್ ನಲ್ಲಿ ಪ್ರಯಾಣಿಸುವಾಗ ಮಹಿಳೆಯೊಬ್ಬಳು ಪರಿಚಯವಾಗಿದ್ದಳು. ಈ ಮಹಿಳೆ ಪರಿಚಯವನ್ನು ಮುಂದುವರೆಸಿ, ಶರತ್ ಗೆ ವಾಟ್ಸಾಪ್ ನಲ್ಲಿ ಬೆತ್ತಲೆಯಾಗಿ ವೀಡಿಯೋ ಕಾಲ್ ಮಾಡಿದ್ದಳು. ಈ ವೀಡಿಯೋ ಕಾಲ್ ನ್ನು ರೆಕಾರ್ಡ್ ಮಾಡಿಕೊಂಡು ಮಹಿಳೆ ಬೆದರಿಕೆ ಹಾಕುತ್ತಿದ್ದಳು ಎಂದು ದೂರಲಾಗಿದೆ.
ರೆಕಾರ್ಡ್ ಮಾಡಿದ್ದ ವೀಡಿಯೋವನ್ನು ಇಟ್ಟುಕೊಂಡು ಗ್ಯಾಂಗ್ ವೊಂದು ಶರತ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿತ್ತು. ರೂ.20 ಲಕ್ಷ ಬೇಡಿಕೆಯಿಟ್ಟು, 1 ಲಕ್ಷ ರೂಪಾಯಿಗಳನ್ನು ಕಿತ್ತುಕೊಳ್ಳಲಾಗಿತ್ತು.
ಅಲ್ಲದೇ, ಶರತ್ ನನ್ನು ಬಲವಂತವಾಗಿ ಮೈಸೂರಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, 25 ಲಕ್ಷ ರೂ. ಸಾಲ ಪಡೆದುಕೊಂಡಿರುವುದಾಗಿ ಬರೆಸಿಕೊಂಡು, ಸಹಿ ಹಾಕಿಸಿಕೊಳ್ಳಲಾಗಿತ್ತು. ಆನಂತರ ಸಮಯ ನೋಡಿ ಅಲ್ಲಿಂದ ತಪ್ಪಿಸಿಕೊಂಡ ಶರತ್, ಹೊಸಮನೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು, ಐವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.