ಸಿಎಂ ಬದಲಾವಣೆ ವಿಚಾರದಲ್ಲಿ ಬಿಜೆಪಿ ಹೇಳಿಕೆಗೆ ಅರ್ಥವಿಲ್ಲ: ಸಚಿವ ಸಂತೋಷ್ ಲಾಡ್
ಶಿವಮೊಗ್ಗ: ಮಕರ ಸಂಕ್ರಾಂತಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಆಗುತ್ತಾರೆ ಎಂದು ಬಿಜೆಪಿಯವರು ಹೇಳಲಿ ಬಿಡಿ. ನಾನು ಕೂಡ ಮಕರ ಸಂಕ್ರಾಂತಿಗೆ ಮೋದಿ ಬದಲಾವಣೆ ಆಗುತ್ತಾರೆ ಎಂದು ಹೇಳುವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಇಂತಹ ಹೇಳಿಕೆಗಳಿಗೆಲ್ಲ ಅರ್ಥವಿರುತ್ತದೆಯೇ ಎಂದು ಮರು ಪ್ರಶ್ನಿಸಿದರು.
ಬಸ್ ಪ್ರಯಾಣ ದರ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಆರೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, 2020ರಲ್ಲಿ ಬಿಜೆಪಿ ಸರಕಾರ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಹೆಚ್ಚಿಸಿತ್ತು. ಈಗ ನಾವು ಅಷ್ಟೇ ಹೆಚ್ಚಿಸಿದ್ದೇವೆ. ಇದು ಹೇಗೆ ಹೆಚ್ಚಳ ಆಗುತ್ತದೆ. ಅವರು ಹೆಚ್ಚಳ ಮಾಡಿದರೆ ನ್ಯಾಯ. ನಾವು ಹೆಚ್ಚಳ ಮಾಡಿದರೆ ಅನ್ಯಾಯವೇ? ಶಕ್ತಿ ಯೋಜನೆಗೂ ಬಸ್ ದರ ಏರಿಕೆಗೂ ಸಂಬಂಧವೇ ಇಲ್ಲ ಎಂದರು.
ಬೇರೆ ಯಾವುದೇ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚು ಬಸ್ಗಳಿವೆ. ಅಲ್ಲದೇ, ಬಸ್ ಪ್ರಯಾಣದರ ಏರಿಕೆಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯೂ ಕಾರಣವಾಗುತ್ತದೆ. ಕೇಂದ್ರ ಸರಕಾರ ಮನಸು ಮಾಡಿದರೆ ಲೀಟರ್ಗೆ 40 ರೂ.ಗೆ ನೀಡಬಹುದಲ್ಲವೇ? ಏಕೆ ನೀಡುತ್ತಿಲ್ಲ. ಯಾವುದೇ ದರ ಏರಿಕೆಗೆ ಕೇಂದ್ರವೇ ಕಾರಣ ಎಂದರು.
ನಕಲಿ ಕಾರ್ಡ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾರ್ಡ್ಗಳನ್ನು ಕೊಡುವ ಏಜೆನ್ಸಿಗಳೇ ಹುಟ್ಟಿಕೊಂಡಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಕಲಿ ಕಾರ್ಡ್ಗಳನ್ನು ಗುರುತಿಸಲು ಈಗಾಗಲೇ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕಾರ್ಮಿಕರ ಕಾರ್ಡ್ಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಈ ಬಗ್ಗೆ ದೂರುಗಳು ಕೂಡ ಬಂದಿವೆ ಎಂದರು.
ಇದಕ್ಕಾಗಿ ಅಂಬೇಡ್ಕರ್ ಸೇವಾ ಕೇಂದ್ರವನ್ನು ತೆರೆಯಲಾಗುವುದು. ಸುಮಾರು 43 ಕೇಂದ್ರಗಳ ಮೂಲಕ ಸಂಚಾರ ವ್ಯಾನ್ಗಳ ಮೂಲಕವೇ ಕಟ್ಟಡ ನಿರ್ಮಾಣಗಳ ಸ್ಥಳಕ್ಕೆ ಹೋಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಒಂದು ಪಕ್ಷ ಅಲ್ಲಿ ಕೆಲಸ ಮಾಡುವವರಿಗೆ ಕಾರ್ಡ್ ಇಲ್ಲದಿದ್ದರೆ ಕಾರ್ಡ್ ಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ನಕಲಿ ಕಾರ್ಡ್ ಮಾಡಿಕೊಡುವ ಏಜೆನ್ಸಿಗಳ ಮೇಲೆ ಸೂಕ್ತ ಕೈಗೊಳ್ಳಲಾಗುವುದು. ಏನೇ ಆದರೂ ಕಾರ್ಮಿಕರಿಗೆ ನೀಡುವ ಕಾರ್ಡ್ಗಳು ಸರಕಾರದಲ್ಲಿ ನೋಂದಣಿಯಾಗಿರಲೇ ಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಪ್ರಮುಖರಾದ ಎಸ್.ಟಿ. ಹಾಲಪ್ಪ, ಚಂದ್ರಭೂಪಾಲ್, ಎಸ್.ಟಿ. ಚಂದ್ರಶೇಖರ್, ಇಸ್ಮಾಯಿಲ್ ಖಾನ್, ಎಚ್.ಸಿ. ಯೋಗೀಶ್, ಕಲೀಂ ಪಾಷ, ಶಿವಕುಮಾರ್, ಕಲಗೋಡು ರತ್ನಾಕರ, ಎಂ.ಪಿ. ದಿನೇಶ್ ಪಾಟೀಲ್, ಪಿ.ಎಸ್. ಗಿರೀಶ್ ರಾವ್, ಮಂಜುನಾಥಬಾಬು, ಶಿವಣ್ಣ, ವೈ.ಬಿ. ಚಂದ್ರಕಾಂತ್, ಕಾಶಿ ವಿಶ್ವನಾಥ್ ಮೊದಲಾದವರಿದ್ದರು.