ಶಿವಮೊಗ್ಗ: ಗಂಡು ಮಗು ಹೆತ್ತಿಲ್ಲ ಅಂತ ಪತ್ನಿಗೆ ಕಿರುಕುಳ ಆರೋಪ: ಪತಿ, ಅತ್ತೆ, ನಾದಿನಿ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗ: ಗಂಡು ಮಗು ಹೆತ್ತಿಲ್ಲ ಎಂದು ಪತ್ನಿಯ ಮೇಲೆ ಪತಿಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಅರಸಾಳು ಗ್ರಾಮದಲ್ಲಿ ನಡೆರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಅರಸಾಳು ಗ್ರಾಮದ ಕಿರಣ್ ಡಿಸೋಜ ಎಂಬವರು ಹಲ್ಲೆ ಆರೋಪಿಯಾಗಿದ್ದು, ಈ ಬಗ್ಗೆ ಅವರ ಪತ್ನಿ ಸುನೀತಾ ಡಿಸೋಜ ನೀಡಿರುವ ದೂರಿನಂತೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಗೆ ಗಂಡು ಮಗುವಾಗಿಲ್ಲ ಎಂಬ ಕಾರಣಕ್ಕೆ ಶನಿವಾರ ಅರಸಾಳು ಗ್ರಾಮದಲ್ಲಿರುವ ಚರ್ಚಿನಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ತನ್ನ ಮೇಳೆ ಅತ್ತೆ ಮತ್ತು ಪತಿ ಕಿರಣ್ ಡಿಸೋಜ ರಸ್ತೆಮಧ್ಯೆ ಹಲ್ಲೆ ನಡೆಸಿದ್ದಾರೆ ಎಂದು ಸುನೀತಾ ಡಿಸೋಜ ದೂರಿನಲ್ಲಿ ಆರೋಪಿಸಿದ್ದಾರೆ.
ತನಗೆ ಈಗಾಗಲೇ ಹೆಣ್ಣು ಮಗುವೊಂದಿದೆ. ಆದರೆ ಗಂಡು ಮಗು ಆಗಿಲ್ಲ ಎಂಬ ಕಾರಣಕ್ಕೆ ಅತ್ತೆ ಸೂರಿನ್ ಡಿಸೋಜ, ನಾದಿನಿ ನಿರ್ಮಲಾರ ಕುಮ್ಮಕ್ಕಿನಿಂದ ಪತಿ ಕಿರಣ್ ಡಿಸೋಜ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತನಗೆ ಪತಿ ಮನೆಯವರು ಹಲವು ಬಾರಿ ಮನಸ್ಸೋ ಇಚ್ಚೆ ಥಳಿಸಿದ್ದಲ್ಲದೆ, ಮಗುವಿಗೂ ಹಲ್ಲೆ ನಡೆಸಿ ಸಾಯಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಸುನೀತಾ ಡಿಸೋಜ ರಿಪ್ಪನ್ಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸುನೀತಾರ ಪತಿ ಕಿರಣ್ ಡಿಸೋಜ, ಅತ್ತೆ ಸೂರಿನ್ ಡಿಸೋಜ, ನಾದಿನಿ ನಿರ್ಮಲಾ ವಿರುದ್ಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.