ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಚರಾಸ್ತಿ ಜಪ್ತಿಗೆ ಕೋರ್ಟ್ ಆದೇಶ
ಶಿವಮೊಗ್ಗ: ರಸ್ತೆ ಅಭಿವೃದ್ಧಿಗಾಗಿ ವ್ಯಕ್ತಿಯೊಬ್ಬರ ಭೂಮಿ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯ ಪೀಠೋಪಕರಣ ಜಪ್ತಿ ಮಾಡುವಂತೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಅಗಡಿ ಆಶೋಕ್ ಎಂಬವರಿಗೆ ಸೇರಿದ ನಿವೇಶನದ ಸ್ವಲ್ಪ ಭಾಗವನ್ನು ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಕೆ-ಶಿಪ್) 2011ರಲ್ಲಿ ವಶಪಡಿಸಿಕೊಂಡಿತ್ತು. ನಿವೇಶನಕ್ಕೆ ಸಂಬಂಧಿಸಿ ಕಾನೂನುಬದ್ಧವಾಗಿ ಪರಿಹಾರ ನೀಡಿಲ್ಲ ಎಂದು ನಿವೇಶನದ ಮಾಲೀಕ ಅಗಡಿ ಅಶೋಕ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಹೈಕೋರ್ಟ್ ನಿರ್ದೇಶನದಂತೆ ಅಗಡಿ ಅಶೋಕ್ ಅವರಿಗೆ ಮೂರು ತಿಂಗಳ ಒಳಗೆ 3.93 ಕೋಟಿ ರೂ. ಸೇರಿ ಒಟ್ಟು 4.44 ಕೋಟಿ ರೂ. ಪರಿಹಾರ ನೀಡುವಂತೆ ಸೂಚಿಸಲಾಗಿತ್ತು.
ಆದರೆ ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನೆಲೆ ಜಿಲ್ಲಾ ನ್ಯಾಯಾಲಯವು ಜಿಲ್ಲಾಧಿಕಾರಿ ಕಚೇರಿಯ ಚರಾಸ್ತಿಯಾದ ಪೀಠೋಪಕರಣ ಜಪ್ತಿ ಮಾಡಬೇಕು. ಮುಂದಿನ ಆದೇಶದವರೆಗೆ ವಶಕ್ಕೆ ಪಡೆಯುವಂತೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ದೂರುದಾರರ ಪರವಾಗಿ ಸೊರಬ ವಕೀಲ ಪಿ.ವಿ.ಖರೆ ಹಾಗೂ ದಿನಕರ್ ಭಟ್ ಭಾವೆ ವಾದ ಮಂಡಿಸಿದ್ದರು.