ಪರಿವರ್ತನೆಯ ಬೀಗದಕೈ ರಾಜಕಾರಣಿಗಳ ಬಳಿಯಿದೆ : ದಿನೇಶ್ ಅಮಿನ್ ಮಟ್ಟು
ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ

ಶಿವಮೊಗ್ಗ : ಸಮ್ಮೇಳನಗಳಲ್ಲಿ ರಾಜಕಾರಣಿಗಳು, ಪತ್ರಕರ್ತರು, ಸಾಹಿತಿಗಳನ್ನು ಒಂದೆಡೆ ಸೇರಿಸುವ ಕಾರ್ಯ ಆಗಬೇಕಿದ್ದು, ಪರಿವರ್ತನೆಯ ನಿಜವಾದ ಬೀಗದ ಕೈ ರಾಜಕಾರಣಿಗಳ ಬಳಿಯಿದೆ ಎಂದು ಖ್ಯಾತ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಸಾಹಿತಿಗಳಿಗಿಂತ ಪತ್ರಕರ್ತರಿಗೆ ಸವಾಲುಗಳು ಹೆಚ್ಚು. ಪತ್ರಕರ್ತ ವಾಸ್ತವತೆಯನ್ನು ಹೇಳುವ ಧೈರ್ಯ ದಿಟ್ಟತನವನ್ನು ತೋರುತ್ತಾನೆ. ಯುದ್ದ ಭೂಮಿಯ ಬಗ್ಗೆ ಸಾಹಿತಿ ಕಾಲ್ಪನಿಕವಾಗಿ ಹೇಳಬಹುದು ಆದರೆ ಪತ್ರಕರ್ತ ವಾಸ್ತವವಾಗಿ ಮಾತನಾಡಬೇಕು. ಕನ್ನಡವೆಂದರೆ ಕೇವಲ ಸಾಹಿತಿ ಅಲ್ಲ, ಭಾಷೆಯೆಂದರೆ ವರ್ಣಮಾಲೆ ಅಷ್ಟೆ ಅಲ್ಲ. ಕನ್ನಡ, ಕನ್ನಡಿಗ, ಕರ್ನಾಟಕ ಮೂರು ಇದ್ದಾಗ ಮಾತ್ರ ಕನ್ನಡ ಎಂಬ ಭಾಷೆ ಸಂಪೂರ್ಣವಾಗುತ್ತದೆ.
ಸಮ್ಮೇಳನಗಳಲ್ಲಿ ವಾಸ್ತವತೆಯ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಗಳಾಗಬೇಕು. ಕರ್ನಾಟಕ ಬಿಕ್ಕಟ್ಟಿನ ಕಾಲದಲ್ಲಿದೆ. ಈ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವ ದಾರಿ ಸರಿಯಾಗಿಲ್ಲ. ಭಾಷೆ ಜಲ ನೆಲದ ಸಮಸ್ಯೆಯಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಹೋರಾಟ ಮಾಡುತ್ತವೆ. ಸರ್ವಪಕ್ಷಗಳ ಸಭೆ ನಡೆಸಿ ರಾಜ್ಯದಿಂದ ಕೇಂದ್ರಕ್ಕೆ ನಿಯೋಗ ಹೋಗುವ ಪದ್ಧತಿಯಿತ್ತು. ಆದರೆ ಇಂದು ಅಂತಹ ವಾತಾವರಣ ಕರ್ನಾಟಕದಲ್ಲಿ ಇಲ್ಲ. ಒಂದೇ ಪಕ್ಷದೊಳಗೆ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ. ಸಾಮರಸ್ಯದ ರಾಜಕೀಯ ಸಂಸ್ಕೃತಿ ನಮಗೆ ಬೇಕಿದೆ. ಕೃಷ್ಣಾ ನದಿಯ ಸಮಸ್ಯೆ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳು ಸಮಸ್ಯೆಗಳಿಂದ ಮುಕ್ತಿಗಾಗಿ ಕಾಯುತ್ತಿದೆ.
ಕೇಂದ್ರ ಸರಕಾರಕ್ಕೆ ಕರ್ನಾಟಕ ನೀಡುವ ತೆರಿಗೆ ದೊಡ್ಡ ಮೊತ್ತದ್ದಾದರೂ, ಬಜೆಟ್ ಮೂಲಕ ಕರ್ನಾಟಕಕ್ಕೆ ಸಿಗುವ ಅನುದಾನಗಳು ಕಡಿಮೆ. ಇದಕ್ಕೆ ಮೂಲ ಕಾರಣ ಕರ್ನಾಟಕ ಅಭಿವೃದ್ಧಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದು, ಹಿಂದುಳಿದ ರಾಜ್ಯಗಳಿಗೆ ನೀಡಿ ಅಲ್ಲಿ ಹೆಚ್ಚು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂಬ ವಾದವಿದೆ. ಆದರೆ ಹಿಂದುಳಿದ ರಾಜ್ಯಗಳು ಮೊದಲಿನಂತಿಲ್ಲ, ಅಲ್ಲಿ ಅದ್ಭುತ ಅಭಿವೃದ್ಧಿ ಕಂಡಿದೆ. ಹಾಗಾಗಿ ಕರ್ನಾಟಕಕ್ಕೆ ಸಿಗಬೇಕಾದ ಅನುದಾನಗಳು ಹೆಚ್ಚಾಗಬೇಕು. ದಿಲ್ಲಿಯಲ್ಲಿ ಕರ್ನಾಟಕದ ಧ್ವನಿ ಕ್ಷೀಣವಾಗುತ್ತಿರುವುದು ಇದಕ್ಕೆಲ್ಲ ಕಾರಣ ಎಂದು ಹೇಳಿದರು.
ತೆರಿಗೆ ಹಂಚಿಕೆಯಲ್ಲಿ, ಕ್ಷೇತ್ರದ ವಿಂಗಡನೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಇಂತಹ ಸವಾಲುಗಳನ್ನು ಎದುರಿಸಲು ಎಲ್ಲರೂ ಒಟ್ಟಾಗಬೇಕು. ಆಳುವವರು ಸರಿ ಮಾಡುತ್ತಾರೆ ಎಂಬ ಭ್ರಮೆ ಬೇಡ. ಓಟು ಹಾಕುವ ಮತದಾರನಿಗೆ ತನ್ನದೆ ಆದ ಜವಾಬ್ದಾರಿಯಿದೆ. ಎಲ್ಲವನ್ನೂ ರಾಜಕಾರಣಿಗಳ ಮೇಲೆ ಹೇರುವುದು, ನಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುವಂತಹ ಪ್ರಯತ್ನ ಮಾಡುತ್ತಿದ್ದೇವೆ.
ನಾರಾಯಣಮೂರ್ತಿ ಅವರು ಕೆಲಸದ ವೇಳೆಯ ಬಗ್ಗೆ ಮಾತನಾಡುವಾಗ, ಬೆಂಗಳೂರಿನ ಜನಕ್ಕೆ ಕುಡಿಯುವ ನೀರಿಗಾಗಿ ಕೇಂದ್ರದಲ್ಲಿ ಯಾಕೆ ಹೋರಾಟ ಮಾಡಬಾರದು. ರಾಜ್ಯದ ಹೆಸರಾಂತ ಉದ್ಯಮಿಗಳು, ಕನ್ನಡ ನಟರು, ಲೇಖಕರು ಒಂದು ನಿಯೋಗದ ಮೂಲಕ ಕರ್ನಾಟಕದಲ್ಲಿರುವ ಸಮಸ್ಯೆಗಳ ಕುರಿತು ಬಗೆಹರಿಸುವಂತೆ ಏಕೆ ಪ್ರಧಾನಿಯವರ ಬಳಿ ಮನವಿ ಮಾಡಬಾರದು. ಹೊಸ ತಲೆಮಾರಿನ ಸಾಹಿತಿಗಳು ಯಾರೂ ಬೀದಿಗೆ ಬಂದು ಹೋರಾಟ ಮಾಡುತ್ತಿಲ್ಲ. ಸಾಹಿತಿಗಳ ಮೇಲೆ ಓದುಗರ ಋಣವಿದೆ, ಸಂಗೀತಗಾರನ ಮೇಲೆ ಕೇಳುಗರ ಋಣವಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೆ ಋಣ ಜವಾಬ್ದಾರಿಯನ್ನು ಹೊಂದಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ವಿಚಾರಗಳು ಹೆಚ್ಚೆಚ್ಚು ಚರ್ಚೆಯಾಗಬೇಕು. ಆ ಮೂಲಕ ಆತ್ಮವಿಮರ್ಶೆ ಮಾಡಿಕೊಳ್ಳುವಂತಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಸಮ್ಮೇಳನದ ಸರ್ವಾಧ್ಯಕ್ಷ ಜಿ.ಕೆ.ರಮೇಶ್, ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ಇದ್ದರು.