ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಮೀಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ
ಶಿವಮೊಗ್ಗ, ಅ.2: ಮೀಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ರಾಗಿಗುಡ್ಡಕ್ಕೆ ಸೀಮಿತವಾಗಿ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ವಿಸ್ತರಿಸಲಾಗಿದೆ.
ಶಿವಮೊಗ್ಗ ನಗರದಾದ್ಯಂತ ಸಿಆರ್ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದಾರೆ.
ಶಿವಮೊಗ್ಗ ನಗರದ ಇತರ ಪ್ರದೇಶಗಳಲ್ಲೂ ಕಿಡಿಗೇಡಿಗಳು ಗಲಭೆ ಉಂಟು ಮಾಡುವ ಸಂಭವ ಇದೆ. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾತ್ರಿ 1 ಗಂಟೆಯಿಂದಲೆ ನಿಷೇಧಾಜ್ಞೆ ಜಾರಿಯಲ್ಲಿದೆ.
ನಿಷೇಧಾಜ್ಞೆ ಸಂದರ್ಭ ಐದು ಜನರಿಗಿಂತಲು ಹೆಚ್ಚು ಜನರು ಗುಂಪುಗೂಡುವುದು ಮತ್ತು ಓಡಾಡುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಯಾವುದೆ ಮೆರವಣಿಗೆ, ಪ್ರತಿಭಟನೆ, ಸಭೆ, ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಘೋಷಣೆಗಳನ್ನು ಕೂಗುವುದು, ಪ್ರಚೋದನಕಾರಿ ಹೇಳಿಕೆ ನೀಡುವುದು, ಪ್ರಚೋದನಕಾರಿ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ ಕಟ್ಟುವುದನ್ನು ನಿಷೇಧಿಸಲಾಗಿದೆ. ಮಾರಕಾಸ್ತ್ರ, ಸ್ಫೋಟಕ ಹೊಂದುವುದು, ಅವುಗಳನ್ನು ಹಿಡಿದು ಓಡಾಡುವುದನ್ನು ಕೂಡ ನಿಷೇಧಿಸಲಾಗಿದೆ. ಈ ಹಿಂದೆ ಅನುಮತಿ ಪಡೆದಿರುವ ಕಾರ್ಯಕ್ರಮಗಳನ್ನು ಮಾತ್ರ ನಡೆಸಲು ಅನುಮತಿ ಇದೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ನಿಷೇಧಾಜ್ಞೆ ಸಂದರ್ಭ ವ್ಯಾಪಾರ, ವಹಿವಾಟು ನಡೆಸಲು ಯಾವುದೆ ತೊಂದರೆ ಇಲ್ಲ. ಇಂದು ಬೆಳಗ್ಗೆ ನಗರದಾದ್ಯಂತ ಅಂಗಡಿ ಮುಂಗಟ್ಟು ಎಂದಿನಂತೆ ತೆರೆದಿದ್ದು ವ್ಯಾಪಾರ ನಡೆಯುತ್ತಿದೆ. ಶಿವಮೊಗ್ಗ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸದ್ಯ ನಗರ ಶಾಂತವಾಗಿದೆ.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.