ಪುತ್ರ ಕಾಂತೇಶ್ಗೆ ಹಾವೇರಿ ಟಿಕೆಟ್ ತಪ್ಪುವ ಭೀತಿ: ಶಿವಮೊಗ್ಗದಿಂದ ಈಶ್ವರಪ್ಪ ಪಕ್ಷೇತರ ಸ್ಪರ್ಧೆಗೆ ನಿರ್ಧಾರ?
ಯಡಿಯೂರಪ್ಪ ಕುಟುಂಬಕ್ಕೆ ಸೆಡ್ಡು ಹೊಡೆಯಲು ಈಶ್ವರಪ್ಪ ಸಜ್ಜು
ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿ ಹೈಕಮಾಂಡ್ ಟಿಕೆಟ್ ಹಂಚಿಕೆಯ ಸರ್ಕಸ್ನಲ್ಲಿದ್ದರೆ, ಇತ್ತ ಬಿಜೆಪಿಯಿಂದ ಕೆ.ಎಸ್. ಈಶ್ವರಪ್ಪ ಅವರ ಪುತ್ರನಿಗೆ ಹಾವೇರಿ ಲೋಕಸಭೆ ಟಿಕೆಟ್ ಸಿಗುವುದು ಅನುಮಾನವೆನ್ನಲಾಗಿದೆ. ಇದರಿಂದ ಮಾಜಿ ಸಿಎಂ ಯಡಿಯೂರಪ್ಪ ಕುಟಂಬದ ವಿರುದ್ದ ಮುನಿಸಿಕೊಂಡಿರುವ ಈಶ್ವರಪ್ಪನರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಇದೇ ವಿಚಾರಕ್ಕೆ ಈಶ್ವರಪ್ಪ ಅವರು ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ. ಹಾವೇರಿಯಲ್ಲಿ ಪುತ್ರ ಕೆ.ಇ. ಕಾಂತೇಶನಿಗೆ ಟಿಕೆಟ್ ಕೈತಪ್ಪಿದ್ರೆ, ಖುದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈಶ್ವರಪ್ಪ ಕಣಕ್ಕೆ ಇಳಿಯುವುದಾಗಿ ಆಪ್ತ ವಲಯದಲ್ಲಿ ಚರ್ಚೆ ನಡೆಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಯಡಿಯೂರಪ್ಪ ಪುತ್ರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸಡ್ಡು ಹೊಡೆಯಲು ನಿರ್ಧರಿಸಿದ್ದಾರೆನ್ನಲಾಗಿದೆ.
ಸದ್ಯದ ಮಾಹಿತಿ ಪ್ರಕಾರ, ಹಾವೇರಿ ಟಿಕೆಟ್ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಪುತ್ರನಿಗೆ ಟಿಕೆಟ್ ಸಿಗುವ ಸಾಧ್ಯತೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಆಪ್ತ ವಲಯದಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರೂ ಸಹ ತಮ್ಮ ಪುತ್ರನಿಗೆ ಟಿಕೆಟ್ ತಪ್ಪಲು ಬಿ.ಎಸ್ ಯಡಿಯೂರಪ್ಪ ಕುಟುಂಬ ಕಾರಣ. ಹೀಗಾಗಿ ಯಡಿಯೂರಪ್ಪ ಕುಟುಂಬವನ್ನು ರಾಜಕೀಯವಾಗಿ ಹಣಿಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ತಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದಾ. ಕಾರ್ಯಕರ್ತರ ಅಭಿಪ್ರಾಯ ಏನಾಗಿರುತ್ತದೆ ಎಂದು ತಿಳಿದುಕೊಳ್ಳಲು ಈಶ್ವರಪ್ಪ ಮುಂದಾಗಿದ್ದು, ಶಿಕಾರಿಪುರ, ಸಾಗರ, ಭದ್ರಾವತಿ, ಶಿವಮೊಗ್ಗ ಮತ್ತಿತರ ಕಡೆ ಪ್ರಮುಖರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆನ್ನಲಾಗಿದೆ.
ವಿವಿಧ ಸಮಾಜದ ಪ್ರಮುಖರು ಹಾಗೂ ಪಕ್ಷದ ಮುಖಂಡರ ಸಭೆ ನಡೆಸಲು ಈಶ್ವರಪ್ಪ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಹಾಗೂ ತಮ್ಮ ಆಪ್ತ ಯಡಿಯೂರಪ್ಪನವರಿಗೆ ತಿರುಗೇಟು ನೀಡಲು ಈಶ್ವರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.
"ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ": ಕಾಂತೇಶ್ ಅಭಿಮಾನಿಗಳ ಆಕ್ರೋಶ
ಹಾವೇರಿ ಲೋಕಸಭಾ ಕ್ಷೇತ್ರದಿಂದ ಕೆ.ಇ. ಕಾಂತೇಶ್ಗೆ ಟಿಕೆಟ್ ತಪ್ಪುವ ಭೀತಿಯಲ್ಲಿರುವ ಅವರ ಅಭಿಮಾನಿಗಳು ಬಿ.ಎಸ್ ಯಡಿಯೂರಪ್ಪ ಕುಟುಂಬದ ವಿರುದ್ದ ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ವರಿಷ್ಠ ಯಡಿಯೂರಪ್ಪನವರ ಪುತ್ರರಿಗೆ ಸಕಲ ರಾಜಕೀಯ ಸ್ಥಾನಮಾನ ನೀಡಲಾಗುತ್ತಿದೆ, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಪೋಸ್ಟ್ ಹಾಕಲಾಗುತ್ತಿದೆ. ಪಕ್ಷ ನಿಷ್ಠ ಈಶ್ವರಪ್ಪನವರ ಪುತ್ರನ ರಾಜಕೀಯ ಭವಿಷ್ಯ ಡೋಲಾಯಮಾನವಾಗಿದ್ದು, ಈ ನೀತಿಗೆ ನಮ್ಮ ಧಿಕ್ಕಾರ ಎಂದು ಕಾಂತೇಶ್ ಬೆಂಬಲಿಗರು ಪೋಸ್ಟ್ ಮಾಡಿದ್ದಾರೆ.