ಹಾವೇರಿ ಅಪಘಾತ ಪ್ರಕರಣ: ಭಾರತೀಯ ಅಂಧರ ಫುಟ್ಬಾಲ್ ತಂಡದ ನಾಯಕಿ ಮಾನಸ ಮೃತ್ಯು
ಅಂಧತ್ವಕ್ಕೆ ಸೆಡ್ಡು ಹೊಡೆದು ಐಎಎಸ್ ಗಾಗಿ ಓದುತ್ತಿದ್ದ ಎಂಎಸ್ಸಿ ಸ್ನಾತಕೋತ್ತರ ಪದವೀಧರೆ
ಶಿವಮೊಗ್ಗ, ಜೂ.28: ಹಾವೇರಿ ಜಿಲ್ಲೆಯ ಬ್ಯಾಡಗಿ ಬಳಿ ಇಂದು ಮುಂಜಾನೆ 13 ಜನರನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತದ ಅಂಧರ ಪುಟ್ಬಾಲ್ ತಂಡದ ನಾಯಕಿ ಮಾನಸ(24) ಕೂಡಾ ಮೃತಪಟ್ಟಿದ್ದಾರೆ.
ಬ್ಯಾಡಗಿ ಬಳಿಯ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡೇನಹಳ್ಳಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದ 13 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಮಾನಸ ಕೂಡ ಒಬ್ಬರಾಗಿದ್ದಾರೆ.
ಐಎಎಸ್ ಕನಸು ಕಂಡಿದ್ದ ಮಾನಸ, ಅಂಧತ್ವಕ್ಕೆ ಸೆಡ್ಡು ಹೊಡೆದು ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಭಾರತ ತಂಡದ ಅಂಧರ ಪುಟ್ಬಾಲ್ ತಂಡದ ನಾಯಕಿಯಾಗಿದ್ದ ಅವರು, ಈ ನಡುವೆ ಬೆಂಗಳೂರಿನಲ್ಲಿ ಐಎಎಸ್ ಗಾಗಿ ಓದುತ್ತಿದ್ದರು. ದೇವಸ್ಥಾನಕ್ಕೆಂದು ತೆರಳಲು ಮಾನಸ ರವಿವಾರ ಗ್ರಾಮಕ್ಕೆ ಆಗಮಿಸಿದ್ದರು.
17 ಮಂದಿ ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಭದ್ರಾವತಿಗೆ ಮರಳುತ್ತಿದ್ದ ವೇಳೆ ಇಂದು ಮುಂಜಾನೆ 3:30ರ ಸುಮಾರಿಗೆ ಇವರಿದ್ದ ಟಿಟಿ ವಾಹನ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಮಾನಸ ಸೇರಿದಂತೆ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಎಮ್ಮಿಹಟ್ಟಿ ಗ್ರಾಮದಲ್ಲೀಗ ನೀರವ ಮೌನ ಆವರಿಸಿದೆ.