ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆ: ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ತುಂಗಾ ನದಿ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾದ ಹಿನ್ನಲೆಯಲ್ಲಿ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಮತ್ತೆ ಮೈದುಂಬಿದೆ. ಜೊತೆಗೆ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಆಗುಂಬೆ, ತೀರ್ಥಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ತುಂಗಾಡ್ಯಾಂಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ನಿರಂತರವಾಗಿ ಏರಿಕೆ ಕಂಡುಬರುತ್ತಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ನದಿಗೆ ಹರಿಸಲಾಗುತ್ತಿದೆ. ಡ್ಯಾಂನಿಂದ ಹೊರಬಿಡುವ ನೀರಿನ ಪ್ರಮಾಣ ಹೆಚ್ಚಾದಂತೆ, ಶಿವಮೊಗ್ಗದಲ್ಲಿ ತುಂಗಾ ನದಿಯ ಹರಿವು ಕೂಡ ಹೆಚ್ಚಾಗುತ್ತದೆ. ಮಂಗಳವಾರ ಬೆಳಿಗ್ಗೆ ಅಪಾಯದ ಮಟ್ಟ ಸೂಚಿಸುವ ನಗರದ ಕೋರ್ಪಳಯ್ಯನ ಛತ್ರದ ಬಳಿ ನದಿಯಲ್ಲಿರುವ ಮಂಟಪ ಮುಳುಗಿತ್ತು. ಮಂಟಪದ ಮೇಲೆ ನೀರು ಹರಿಯುತ್ತಿದ್ದುದು ಕಂಡುಬಂದಿತು.ಮತ್ತೊಂದೆಡೆ, ತುಂಗೆಯ ಹರಿವು ಹೆಚ್ಚಾಗಿರುವುದರಿಂದ ನದಿಯಂಚಿನ ತಗ್ಗು ಪ್ರದೇಶಗಳಲ್ಲಿ ಜಲಾವೃತದ ಭೀತಿ ಎದುರಾಗಿದೆ. ಈಗಾಗಲೇ ಪಾಲಿಕೆ ಆಡಳಿತವು ತಗ್ಗು ಪ್ರದೇಶಗಳ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಹಾಗೆಯೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಆಡಳಿತ ಮಾಡಿಕೊಂಡಿದೆ.
ಒಳಹರಿವು ಹೆಚ್ಚಳ:
ಶಿವಮೊಗ್ಗ ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿರುವುದರಿಂದ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರ ಲಿಂಗನಮಕ್ಕಿ ಡ್ಯಾಂ ಒಳಹರಿವಿನಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಂನ ಒಳಹರಿವು 77,911 ಕ್ಯೂಸೆಕ್ ಗೆ ಹೆಚ್ಚಳವಾಗಿದೆ. ಡ್ಯಾಂನ ನೀರಿನ ಮಟ್ಟ 1782. 15 (ಗರಿಷ್ಠ ಮಟ್ಟ : 1819) ಅಡಿ ಇದೆ. ಕಳೆದ 24 ಗಂಟೆಯಲ್ಲಿ 4 ಅಡಿ ನೀರು ಸಂಗ್ರಹವಾಗಿದೆ.ಮಧ್ಯ ಕರ್ನಾಟಕದ ಪ್ರಮುಖ ಜಲಾಶಯ ಭದ್ರಾ ಒಳಹರಿವಿನಲ್ಲಿಯೂ ಗಣನೀಯ ಏರಿಕೆಯಾಗಿದ್ದು, 27,839 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 166 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 144 ಅಡಿ 7 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಡ್ಯಾಂನಲ್ಲಿ ಸರಿಸುಮಾರು ಮೂರುವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಭದ್ರಾ ಡ್ಯಾಂನಲ್ಲಿ 141. 3 ಅಡಿಯಷ್ಟು ನೀರು ಸಂಗ್ರಹವಾಗಿತ್ತು.ಉಳಿದಂತೆ ತುಂಗಾ ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವಾದ 588. 24 ಮೀಟರ್ ತಲುಪಿದೆ. ಮಂಗಳವಾರ ಡ್ಯಾಂಗೆ 42,683 ಕ್ಯೂಸೆಕ್ ಒಳಹರಿವಿದೆ. 41,583 ಕ್ಯೂಸೆಕ್ ನೀರನ್ನು ಹೊಸಪೇಟೆಯ ತುಂಗಾಭದ್ರಾ ಜಲಾಶಯಕ್ಕೆ ಹೊರಬಿಡಲಾಗುತ್ತಿದೆ.