ಕೈ ಮುಗಿದು ಕೇಳಿಕೊಳ್ಳುತ್ತೇನೆ, ಏನಾದರೂ ನೋವಾಗಿದ್ದರೆ ದಯವಿಟ್ಟು ಮರೆತು ಸಹಕಾರ ನೀಡಿ : ಕೆ.ಎಸ್ ಈಶ್ವರಪ್ಪಗೆ ವಿಜಯೇಂದ್ರ ಮನವಿ
ಬಿ.ವೈ. ವಿಜಯೇಂದ್ರ/ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: "ಏನಾದರೂ ನೋವಾಗಿದ್ದರೆ ದಯವಿಟ್ಟು ಮರೆತು ಪಕ್ಷಕ್ಕೆ ಸಹಕಾರ ನೀಡಬೇಕು" ಎಂದು ಕೆ.ಎಸ್. ಈಶ್ವರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮನವಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಏನಾದರೂ ನೋವಾಗಿದ್ದರೆ ದಯವಿಟ್ಟು ಮರೆತು ಪಕ್ಷಕ್ಕೆ ಸಹಕಾರ ನೀಡಿ, ಬಿಜೆಪಿ ಹಿತದೃಷ್ಟಿಯಿಂದ ನಮ್ಮೊಂದಿಗೆ ಕೈ ಜೋಡಿಸಿ" ಎಂದು ಮನವಿ ಮಾಡಿದ್ದಾರೆ.
ನರೇಂದ್ರ ಮೋದಿಯರು ಮತ್ತೆ ಪ್ರಧಾನಿಯಾಗಬೇಕು ಎಂಬುದು ನಮ್ಮ ಆಶಯ, ಈಶ್ವರಪ್ಪ ಅವರು ಬೆಂಬಲ ನೀಡಿ ರಾಘವೇಂದ್ರನನ್ನು ಗೆಲ್ಲಿಸಬೇಕು. ಈ ಮೊದಲು ಒಂದೆರಡು ದಿನಗಳ ಹಿಂದೆ ಮಾತನಾಡುವಾಗ ಕೇಂದ್ರ ವರಿಷ್ಠರು ಕೆ.ಎಸ್ ಈಶ್ವರಪ್ಪ ಅವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಿದ್ದರು.
ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ಬಿಜೆಪಿ ಪರ ಒಲವು ಕಾಣುತ್ತಿದೆ. ಮೋದಿ ಜನಪ್ರಿಯತೆ ದಿನೇ ದಿನೆ ಹೆಚ್ಚಾಗುತ್ತಿದ್ದು,ಕಾಂಗ್ರೆಸ್ ಪಕ್ಷವನ್ನ ನಿದ್ದೆಗೆಡಿಸಿದೆ. ಮೋದಿ ಐದು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಕೇಂದ್ರ ಸರಕಾರ ಕಿಸಾನ್ ಸಮ್ಮಾನ್ ಕೊಡುತ್ತಿದೆ. ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಬರುತ್ತವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಪ್ರಪಂಚದಲ್ಲಿ 8 ನೇ ಅದ್ಬುತವಾಗಲಿದೆ ಎಂದರು.
ಹಾಸನ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರೀತಂಗೌಡ ಜೊತೆ ಮಾತನಾಡಿದ್ದೇನೆ. ಮೈಸೂರು ಚಾಮರಾಜನಗರ ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲವೂ ಸರಿ ಹೋಗುತ್ತದೆ. ಪ್ರಜ್ವಲ್ ರೇವಣ್ಣ ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ ಎಂದರು.
ಕೇಂದ್ರ ಸರಕಾರದ ಯೋಜನೆ ರಾಜ್ಯದ ಜನರಿಗೆ ಸಿಗಬಾರದು ಅಂತಾ ರಾಜ್ಯ ಸರಕಾರ ದುರುದ್ದೇಶದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.