ದಿಲ್ಲಿಗೆ ತೆರಳಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗುತ್ತೇನೆ : ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ : ಇಂದು ಮಧ್ಯಾಹ್ನ ದಿಲ್ಲಿಗೆ ತೆರಳಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಬಿಜೆಪಿ ಬಂಡಾಯ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾತ್ರಿಯೇ ಗೃಹ ಸಚಿವರ ನಿವಾಸದಲ್ಲಿ ಅವರನ್ನು ಭೇಟಿಯಾಗುತ್ತೇನೆ. ಅಪ್ಪ ಮಕ್ಕಳಿಂದ ಈ ಪಕ್ಷ ಮುಕ್ತವಾಗಬೇಕು. ಹಿಂದುತ್ವವಾದಿಗಳನ್ನು ಪಕ್ಕಕ್ಕೆ ಸರಿಸಿದ್ದಾರೆ. ಅವರನ್ನೆಲ್ಲಾ ಏಕೆ ಪಕ್ಕಕ್ಕೆ ಸರಿಸಿದ್ದಾರೆ ಎನ್ನುವುದನ್ನ ಅಮಿತ್ ಶಾ ಬಳಿ ಕೇಳುತ್ತೇನೆ. ಅಮಿತ್ ಶಾ ಬೇರೆ ಕಡೆ ಮನವೊಲಿಸುದಕ್ಕೂ, ನನ್ನನ್ನು ಮನವೊಲಿಸುವುದಕ್ಕೂ ವ್ಯತ್ಯಾಸ ಇದೆ. ರಾಘವೇಂದ್ರ ಸೋಲಬಹುದು ಎಂಬ ಕಾರಣದಿಂದ ಅಮಿತ್ ಶಾ ಅವರಿಗೆ ಒತ್ತಡ ಹಾಕಿಸಿ ನನಗೆ ಕರೆ ಮಾಡಿರಬಹುದು ಎಂದರು.
ಅಮಿತ್ ಶಾ ಅವರು ದೊಡ್ಡವರು ಇದ್ದಾರೆ ಅವರಿಗೆ ಗೌರವ ಕೊಟ್ಟು ಹೋಗುತ್ತಿದ್ದೇನೆ. ನೂರಕ್ಕೆ ನೂರು ನಾನು ಗೆಲ್ಲುವ ವಿಶ್ವಾಸ ಇದೆ. ನಾನು ಕೇವಲ ಸಂಸದ ಆಗಬೇಕು ಎಂದು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಪಕ್ಷ ಶುದ್ದೀಕರಣ ಆಗಬೇಕು ಅದಕ್ಕಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದರು
ನಾನು ಸ್ಪರ್ಧೆ ನಿರ್ಧಾರ ಮಾಡಿದ ಮೇಲೆ ಅನೇಕರು ನನಗೆ ಪೋನ್ ಮಾಡಿದ್ದಾರೆ.ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ ಅಂತಿದ್ದಾರೆ. ಪಕ್ಷದ ಉಳಿವಿಗಾಗಿ ನನ್ನ ಸ್ಪರ್ಧೆ. ಅಮಿತ್ ಶಾ ಅವರನ್ನು ನಾನೇ ಮನವೊಲಿಸಿ ಬರುತ್ತೇನೆ.ನನ್ನ ಸ್ಪರ್ಧೆ ಯಾವ ಕಾರಣಕ್ಕಾಗಿ ಎಂದು ತಿಳಿಸಿ ಬರುತ್ತೇನೆ ಎಂದು ಹೇಳಿದರು.