ಮಗನಿಗೆ ಟಿಕೆಟ್ ಕೊಟ್ಟಿಲ್ಲ ಎಂದರೆ, ಈಶ್ವರಪ್ಪ ಎರಡನೇ ಯತ್ನಾಳ್ ಆಗ್ತಾರೆ: ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ: ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಜ.12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯುವನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ಮಧುಬಂಗಾರಪ್ಪ, ಡಾ.ಎಂ.ಸಿ ಸುಧಾಕರ್ ಸೇರಿದಂತೆ ಸಚಿವ ಸಂಪುಟದ ಸಚಿವರು ಭಾಗವಹಿಸಲಿದ್ದಾರೆ ಎಂದರು.
ಮೂವರು ಡಿಸಿಎಂ ಬಗ್ಗೆ ಕೆ.ಎಸ್.ಈಶ್ವರಪ್ಪ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಈಶ್ವರಪ್ಪ ದಿನನಿತ್ಯ ಒಂದಿಷ್ಟು ʼಬೊಗಳುತ್ತಾʼ ಇದ್ದಾರೆ. ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳೋ ಹಾಗೆ ಈಶ್ವರಪ್ಪ ಎಲ್ಲೂ ಕೇಸ್ ಹಾಕಿಸಿಕೊಂಡವರಲ್ಲ. ಈಗ ಡಿಸಿಎಂ ವಿಚಾರಕ್ಕೆ ಜಿಲ್ಲೆಗೊಂದು ಡಿಸಿಎಂ ಮಾಡಿ ಎಂದು ಹೇಳಿದ್ದಾರೆ. ನಿಮ್ಮ ಕಾಲದಲ್ಲಿ ಮೂವರು ಡಿಸಿಎಂ ಇರಲಿಲ್ಲವಾ. ನೀವು ಡಿಸಿಎಂ ಮಾಡಬಹುದು ನಾವು ಮಾಡುವ ಹಾಗಿಲ್ವಾ.ಸುಮ್ಮನೆ ಮಾತಾಡೋದು ಅವರಿಗೆ ಚಟ. ಹಾಗಾಗೀ ಗೊಂದಲ ಸೃಷ್ಟಿಸುತ್ತಿದ್ದಾರೆ" ಎಂದರು.
"ಯಡಿಯೂರಪ್ಪ ಮಗ ರಾಜ್ಯಾಧ್ಯಕ್ಷರಾಗಿದ್ದಕ್ಕೆ ಈಶ್ವರಪ್ಪ ಒಲಿಯುತ್ತಿದ್ದಾರೆ. ಮಗನ ಹಾವೇರಿ ಟಿಕೆಟ್ ಗಾಗಿ ಹೀಗೆ ಮಾಡ್ತಿದ್ದಾರೆ. ಮಗನಿಗೆ ಟಿಕೆಟ್ ಕೊಟ್ಟಿಲ್ಲ ಎಂದರೇ ನಾಳೆನೇ ʼಬುಶ್ ನಾಗಪ್ಪʼ ಆಗ್ತಾರೆ. ಈಶ್ವರಪ್ಪ ಸೆಕೆಂಡ್ ಯತ್ನಾಳ್ ಆಗ್ತಾರೆ. ಈಗ ಟಿಕೆಟ್ ಸಿಗುತ್ತೇ ಅನ್ನೊ ಕಾರಣಕ್ಕೆ ಹತ್ರಾ ಹೋಗ್ತಿದ್ದಾರೆ. ಹಿರಿಯರಾದ ಈಶ್ವರಪ್ಪ ಸರ್ಕಾರದ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಲಿ "ಎಂದರು.
ಬಿ.ಕೆ.ಹರಿಪ್ರಸಾದ್ ಗೆ ಮಂಪರು ಪರೀಕ್ಷೆ ಮಾಡಬೇಕು ಅಂತಾ ಹೇಳ್ತಾ ಇದ್ದಾರೆ. ಕೋವಿಡ್ ಹಗರಣದಲ್ಲಿ ವಿಜಯೇಂದ್ರ ಗೆ ಮೊದಲು ಮಂಪರು ಪರೀಕ್ಷೆ ಮಾಡಿಸಬೇಕು.ಇವರು ಎಷ್ಟು ಹಣ ತಿಂದಿದ್ದಾರೆ ಎಂದು ಮಂಪರು ಪರೀಕ್ಷೆ ಮಾಡಬೇಕು. ನಾವು ಹರಿಪ್ರಸಾದ್ ಗೆ ಮಂಪರು ಪರೀಕ್ಷೆ ಮಾಡಿಸುತ್ತೀವಿ ನೀವು ರೆಡಿ ಇದ್ದೀರಾ. 40 ಸಾವಿರ ಕೋಟಿ ಹಣ ಸಂಬಂಧ ಇವರು ಪರೀಕ್ಷೆ ಮಾಡಿಸಿಕೊಳ್ತಾರಾ. ಅವರದ್ದೇ ಶಾಸಕರು ವಿಜಯೇಂದ್ರ ಬಗ್ಗೆ ಮಾತನಾಡ್ತಿದ್ದಾರೆ. ಇವರು ನಮ್ ಬಗ್ಗೆ ಮಾತಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಬಿ.ಕೆ. ಸಂಗಮೇಶ್ವರ ಮಾತನಾಡಿ, ಮೋದಿ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಕೇವಲ ಕೋಮು ಭಾವನೆಗಳನ್ನು ಕೆರಳಿಸಿ ಅಧಿಕಾರದಲ್ಲಿದೆ. ರಾಜ್ಯ ಸರ್ಕಾರ 5 ಗ್ಯಾರಂಟಿಗಳಲ್ಲಿ ಜನರಿಗೆ ತಲುಪಿಸಿ ಉತ್ತಮ ಆಡಳಿತ ನೀಡಿದೆ ಎಂದರು.
ಜಾತ್ಯತೀತ ಪ್ರಸ್ತಾಪ ಮಾಡುತ್ತಿದ್ದ ಜೆಡಿಎಸ್ ನವರು ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಜೆಡಿಎಸ್ ನವರು ದೊಡ್ಡ ಕೋಮುವಾದಿಗಳು ಎಂದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಪ್ರಮುಖರಾದ ಎಂ.ಶ್ರೀಕಾಂತ್, ಎನ್ ರಮೇಶ್ ಸೇರಿದಂತೆ ಹಲವರಿದ್ದರು.