ಪರಿಸರ ಸಂರಕ್ಷಣೆಯು ಸಮಾಜದ ಪ್ರತಿಯೊಬ್ಬರ ಕರ್ತವ್ಯ: ಬಿ.ಸಿ.ಗೀತಾ
ಶಿವಮೊಗ್ಗ(ಅ.29): ಪರಿಸರ ನಾಶದಿಂದ ಮನುಕುಲ ತೊಂದರೆಗೆ ಸಿಲುಕಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ರಕ್ಷಿಸುವ ಕೆಲಸ ಆಗಬೇಕು. ಪರಿಸರ ಸಂರಕ್ಷಣೆಯು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಆಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಹೇಳಿದರು.
ರಾಜೀವ್ ಗಾಂಧಿ ಬಡಾವಣೆಯ ರೋಟರಿ ಚಿತಾಗಾರಕ್ಕೆ ಭೇಟಿ ನೀಡಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ವಾಯುಮಾಲಿನ್ಯ, ಜಲ ಮಾಲಿನ್ಯ ಸೇರಿದಂತೆ ಪರಿಸರ ಮಾಲಿನ್ಯ ಹೆಚ್ಚಾದರೆ ಬದುಕಲು ಒಳ್ಳೆಯ ವಾತಾವರಣ ಇರುವುದಿಲ್ಲ. ಪ್ರತಿಯೊಬ್ಬರು ಸಸಿಗಳನ್ನು ನೆಡುವ ಜತೆಯಲ್ಲಿ ಪೋಷಣೆ ಕಾರ್ಯ ನಡೆಸಿದರೆ ಉತ್ತಮ ಪರಿಸರ ನಮ್ಮದಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಸಹಾಯಕ ಗವರ್ನರ್ ರವಿ ಕೋಟೋಜಿ ಮಾತನಾಡಿ, ರೋಟರಿ ಸಂಸ್ಥೆ ನಿರ್ವಹಿಸುತ್ತಿರುವ ರೋಟರಿ ಚಿತಾಗಾರವು ಉತ್ತಮವಾಗಿ ನಡೆಯುತ್ತಿದೆ. ಸೂಕ್ತ ವ್ಯವಸ್ಥೆಗಳನ್ನು ಒಳಗೊಂಡಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾವ್ ಮಾತನಾಡಿ, ಪರಿಸರ ನಾಶವು ಹೆಚ್ಚಿನ ಸಮಸ್ಯೆಗಳನ್ನು ತಂದೊಡಲಿದ್ದು, ಪರಿಸರ ನಾಶ ಆಗುವುದನ್ನು ತಪ್ಪಿಸಬೇಕಿದೆ. ಬಾಲ್ಯದಿಂದಲೇ ಮಕ್ಕಳಲ್ಲಿ ಪರಿಸರ ಜಾಗೃತಿ ಬೆಳೆಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿ ಚಿತಾಗಾರ ಆವರಣದಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ, ಖಜಾಂಚಿ ಜಿ.ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಪೂರ್ವ ಸಂಸ್ಥೆಯ ಕಾರ್ಯದರ್ಶಿ ಕಿಶೋರ್ ಕುಮಾರ್, ದಿವ್ಯಾ ಪ್ರವೀಣ್, ಶ್ರೀಕಾಂತ್, ಡಾ. ಗುಡದಪ್ಪ ಕಸಬಿ, ನಿವೃತ್ತ ಡಿಎಫ್‌ಒ ಮಂಜುನಾಥ್, ಸಿ.ಕೆ.ವಿಜಯ ಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.