ಹಸೆ ಚಿತ್ತಾರ ಕಲಾವಿದ ಚಂದ್ರಶೇಖರ್ಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ
ಚಂದ್ರಶೇಖರ್
ಶಿವಮೊಗ್ಗ: ಹಸೆ ಚಿತ್ತಾರ ಕಲಾವಿದ ಸಾಗರ ತಾಲೂಕಿನ ಸಿರಿವಂತೆಯ ಚಂದ್ರಶೇಖರ್ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಸಿರಿವಂತೆ ಚಂದ್ರಶೇಖರ್ ಅವರು ಕಳೆದ ಎರಡೂವರೆ ದಶಕದಿಂದ ಹಸೆ ಚಿತ್ತಾರಗಳನ್ನು ರಚಿಸಿ ರಾಜ್ಯಾದ್ಯಂತ ಜನಪ್ರಿಯರಾಗಿದ್ದಾರೆ. ವಿದ್ಯಾರ್ಥಿಗಳು, ಕಲೆಯ ಆಸಕ್ತರು ಇವರಿಂದ ಹಸೆ ಚಿತ್ತಾರ ಕಲಿತು ಮತ್ತಷ್ಟು ಕಡೆ ಪ್ರಚುರಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸಿರಿವಂತೆ ಚಂದ್ರಶೇಖರ್ ಅವರ ಮನೆಯನ್ನು ಹಸೆ ಚಿತ್ತಾರದ ವಿಶ್ವವಿದ್ಯಾಲಯ ಎಂದೂ ಬಣ್ಣಿಸಲಾಗುತ್ತದೆ. ರಾಜ್ಯ ಸರಕಾರ ಈ ಬಾರಿಯ ಕರಕುಶಲ ವಿಭಾಗದಲ್ಲಿ ಚಂದ್ರಶೇಖರ್ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.
ಚಂದ್ರಶೇಖರ್ ಅವರು ಗಾಜು, ಗೋಡೆ, ಹ್ಯಾಂಡ್ ಮೇಡ್ ಪೇಪರ್ ಮೇಲೆ ಹಸೆ ಚಿತ್ತಾರ ರೂಪಿಸಿದ್ದಾರೆ. ಸಿರಿವಂತೆ ಚಂದ್ರಶೇಖರ್ ಅವರ ರಚನೆಯ ಕಲಾಕೃತಿಗಳಿಗೆ ರೈತಾಪಿ ವರ್ಗದಲ್ಲಿ ಬಹಳ ಬೇಡಿಕೆಯೂ ಇದೆ.
"ರಾಜ್ಯೋತ್ಸವ ಪ್ರಶಸ್ತಿ ಬಂದಿರುವ ವಿಷಯ ತಿಳಿದು ಖುಷಿಯಾಗುತ್ತಿದೆ. ಕಳೆದ 25 ವರ್ಷದಿಂದ ತಪಸ್ಸಿನಂತೆ ಹಸೆ ಚಿತ್ತಾರ ಬಿಡಿಸಿದ್ದೇನೆ. ಅರ್ಹತೆ ಗುರುತಿಸಿ ಸರಕಾರ ಪ್ರಶಸ್ತಿ ಘೋಷಿಸಿರುವುದು ಖುಷಿ ತಂದಿದೆ"
-ಸಿರಿವಂತೆ ಚಂದ್ರಶೇಖರ್, ಹಸೆ ಚಿತ್ತಾರ ಕಲಾವಿದ