ಸರಕಾರ ಶರಾವತಿ ಮುಳುಗಡೆ ಸಂತ್ರಸ್ಥರ ಪರವಾಗಿದೆ, ತಾಳ್ಮೆಯಿಂದ ಸಹಕರಿಸಿ : ಮಧು ಬಂಗಾರಪ್ಪ
ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ಥರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾಗರದಲ್ಲಿ ಅ.21ರಂದು ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ರಾಜಕೀಯ ಪ್ರೇರಿತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಪ್ರತಿಭಟನೆಯಲ್ಲಿ ವಿರೋಧ ಪಕ್ಷದವರು ಗುರುತಿಸಿಕೊಂಡಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ಥರ ಬಗ್ಗೆ ವಿರೋಧ ಪಕ್ಷದವರು ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಮುಳುಗಡೆ ಸಂತ್ರಸ್ಥರಿಗೆ ಗುಡ್ ನ್ಯೂಸ್ ಕೊಡುತ್ತೇವೆ ಎಂದು ಅರಣ್ಯ ಸಚಿವರು ಹೇಳಿದ್ದಾರೆ. ಈ ನಡುವೆ ಅ.21ನೇ ತಾರೀಕು ಪ್ರತಿಭಟನೆ ಮಾಡುವುದಕ್ಕೆ ನನ್ನ ಅಭ್ಯಂತರ ಇಲ್ಲ ಎಂದರು.
ಯಾವುದಕ್ಕೆ ಕಾರಣಕ್ಕೂ ರೈತರಿಗೆ ನೋಟಿಸ್ ನೀಡದಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದೇವೆ. ರೈತರಿಗೆ ಯಾವುದೇ ಆತಂಕ ಬೇಡ, ನಾವು ಯಾರನ್ನು ಒಕ್ಕಲೆಬ್ಬಿಸುವುದಿಲ್ಲ. ಸಣ್ಣ ಹಿಡುವಳಿದಾರರು ಆತಂಕ ಪಡುವುದು ಬೇಡ, ಸರ್ಕಾರ ನಿಮ್ಮೊಂದಿಗಿದೆ ಎಂದು ಹೇಳದರು.
ಶರಾವತಿ ಮುಳುಗಡೆ ಸಂತ್ರಸ್ಥರ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಲು ವಕೀಲರನ್ನು ನೇಮಿಸಿದ್ದೇವೆ. ರೈತರು ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ಮೂರು ಎಕರೆ ಒಳಗಡೆ ಸಾಗುವಳಿ ಮಾಡಿದ ರೈತರನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಭಾನು, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಪ್ರಮುಖರಾದ ಜಿ.ಡಿ.ಮಂಜುನಾಥ್, ಚಂದ್ರಭೂಪಾಲ್, ಶಾಂತವೀರ್ ನಾಯ್ಕ್ ಸೇರಿದಂತೆ ಹಲವರಿದ್ದರು.