ಮಗನಿಗೆ ಪಿಯುಸಿಯಲ್ಲಿ ಶೇ.97 ಅಂಕ; ಸಂಭ್ರಮಾಚರಿಸಲು ಕಾಶ್ಮೀರಕ್ಕೆ ಹೋಗಿದ್ದ ಮಂಜುನಾಥ್ ಕುಟುಂಬ
ಶಿವಮೊಗ್ಗದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ

Photo credit: newindianexpress.com
ಶಿವಮೊಗ್ಗ: ಮಗ ಪಿಯುಸಿಯಲ್ಲಿ ಶೇ.97 ಅಂಕ ಪಡೆದಿದ್ದ ಹಿನ್ನೆಲೆಯಲ್ಲಿ ಸಂಭ್ರಮಾಚರಿಸಲು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದ ಕುಟುಂಬದಲ್ಲೀಗ ನೀರವಮೌನ ಆವರಿಸಿದೆ. ಕಾಶ್ಮೀರದ ಪಹಲ್ಗಾಮ್ ವ್ಯಾಲಿಯಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಕುಟುಂಬದ ಯಾಜಮಾನನ್ನು ಕಳೆದುಕೊಂಡು ದುಃಖದಲ್ಲಿದೆ.
ಶಿವಮೊಗ್ಗ ನಗರದ ವಿಜಯನಗರ ಬಡಾವಣೆಯ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಷೇರು ಮಾರುಕಟ್ಟೆ ತಜ್ಞರಾಗಿದ್ದ ಮಂಜುನಾಥ್ ರಾವ್ ಅವರು ಮಗ ಪಿಯುಸಿಯಲ್ಲಿ ಶೇ.97 ಅಂಕ ಪಡೆದಿದ್ದ. ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸಲು ತಮ್ಮ ಪತ್ನಿ ಪಲ್ಲವಿ, ಪುತ್ರ ಅಭಿಜೇಯ ಜತೆ ಎ.19ರಂದು ಟೂರಿಸ್ಟ್ ಏಜೆನ್ಸಿ ಮೂಲಕ ಶಿವಮೊಗ್ಗದಿಂದ ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದರು.
ಎ.24ರಂದು ವಾಪಾಸ್ ಬರಬೇಕಿತ್ತು. ಆದರೆ, ಪ್ರವಾಸದ ವೇಳೆ ಕಾಶ್ಮೀರದ ಪಹಲ್ಗಾಮ್ ಬಳಿ ಊಟಕ್ಕೆಂದು ಇಳಿದು ಹೊಟೇಲ್ನಲ್ಲಿ ವಿಚಾರಣೆ ನಡೆಸುತ್ತಿರುವ ವೇಳೆ ಭಯೋತ್ಪಾದಕರ ದಾಳಿ ನಡೆದಿದೆ. ಈ ವೇಳೆ ಮಂಜುನಾಥ್ ಅವರ ತಲೆಗೆ ಗುಂಡಿಕ್ಕಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಹೋದರಿ ಕಣ್ಣೀರು: ಮಂಜುನಾಥ್ ನನ್ನ ದೊಡ್ಡಮ್ಮನ ಮಗ. ಅವನಿಗೆ ಗಾಯ ಆಗಿದೆ ಎಂದಷ್ಟೇ ದೊಡ್ಡಮ್ಮನಿಗೆ ಹೇಳಿದ್ದೇನೆ. ಎಲ್ಲರೂ ಬಂದರೆ ಗಾಬರಿ ಆಗುತ್ತಾರೆ ಎಂದು ತಿಳಿದು ಅವರ ಮನೆಗೆ ಬಂದಿದ್ದೇನೆ. ಮಗ ಪಿಯುಸಿಯಲ್ಲಿ ಶೇ.97 ಅಂಕ ಪಡೆದಿದ್ದ ಎಂಬ ಕಾರಣಕ್ಕೆ ಪ್ರವಾಸ ಹೋಗಿದ್ದರು. ಅವರು ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಬಯಸುತ್ತೇನೆ ಎಂದು ಮಂಜುನಾಥ್ ಸಹೋದರಿ ದೀಪಾ ಕಣ್ಣೀರಾದರು.
ಅಂತಿಮ ಸಂಸ್ಕಾರಕ್ಕೆ ಸಿದ್ಧತೆ: ಪಹಲ್ಗಾಮ್ನಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಬಲಿಯಾದ ಶಿವಮೊಗ್ಗದ ಮಂಜುನಾಥ್ ಮೃತದೇಹ ಎ.24ರ ನಸುಕಿನ 1:30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. 2:30ರ ವೇಳೆಗೆ ಮಂಜುನಾಥ್ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ. ಬಳಿಕ ಒಂದು ಬಸ್, ಒಂದು ಆ್ಯಂಬುಲೆನ್ಸ್ ಮೂಲಕ ಪೊಲೀಸ್ ಬಿಗಿ ಭದ್ರತೆಯಲ್ಲಿ ಶಿವಮೊಗ್ಗಕ್ಕೆ ತರಲಾಗುತ್ತದೆ.
ಬೆಳಗ್ಗೆ 7:30-8 ಗಂಟೆಗೆ ಶಿವಮೊಗ್ಗ ತಲಪಲಿದ್ದು, ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಲಾಗುತ್ತದೆ. ಬಳಿಕ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಶಿವಮೊಗ್ಗದ ತುಂಗಾ ನದಿಯ ದಡದಲ್ಲಿರುವ ರೋಟರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.