ಬಿಜೆಪಿ ವರಿಷ್ಠರ ಜೊತೆ ನನ್ನ ಮಾತುಕತೆ ಮುಗಿದಿದ್ದು, ಇನ್ನು ಯಾರ ಜೊತೆಗೂ ಮಾತುಕತೆಗೆ ಕೂರುವುದಿಲ್ಲ : ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ: ಬಿಜೆಪಿ ವರಿಷ್ಠರ ಜೊತೆ ನನ್ನ ಮಾತುಕತೆ ಮುಗಿದಿದೆ. ಇನ್ನು ಯಾರ ಜೊತೆಗೂ ಮಾತುಕತೆಗೆ ಕೂರುವುದಿಲ್ಲ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಮೋದಿ ಪೋಟೋ ಬಳಸದಂತೆ ಬಿಜೆಪಿ ನಾಯಕರ ಹೇಳಿಕೆ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು ಮೋದಿ ಫೋಟೋ ಬಳಸದೆ ಎಡಭಾಗದಲ್ಲಿ ವಿಜಯೇಂದ್ರ, ಬಲಭಾಗದಲ್ಲಿ ರಾಘವೇಂದ್ರ ಮತ್ತು ನಡುವೆ ತಾವಿರುವ ಫೋಟೋ ಬಳಸಿ ಚುನಾವಣಾ ಪ್ರಚಾರ ನಡೆಸುವಂತೆ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಮಾಜಿ ಮುಖ್ಯಮಂತ್ರಿಗೆ ಸವಾಲು ಎಸೆದಿದ್ದಾರೆ.
ಮೋದಿ ಫೋಟೋ ಬಳಸದಂತೆ ತಡೆಯಲು ಅವರು ಯಾರು. ಅವರೊಬ್ಬ ವಿಶ್ವನಾಯಕ ಮತ್ತು ಅವರನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ, ತನ್ನನ್ನು ಯಾರೂ ತಡೆಯಲಾರರು. ಯಡಿಯೂರಪ್ಪನವರು ಮೋದಿ ಫೋಟೋ ಬಳಸದೆ ಶಿವಮೊಗ್ಗದಲ್ಲಿ ತಮ್ಮ ಮಗನನ್ನು ಗೆಲ್ಲಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ನನ್ನನ್ನು ಇನ್ನೂ ಪಕ್ಷದಿಂದ ಯಾಕೆ ಉಚ್ಚಾಟಿಸಿಲ್ಲ ಎಂದು ನನಗೆ ಗೊತ್ತಾಗುತ್ತಿಲ್ಲ. ಉಚ್ಚಾಟಿಸಿದರೆ ಇನ್ನಷ್ಟು ಕಟುವಾಗಿ ಮಾತನಾಡಲು ಸಾಧ್ಯ ಎಂದರು.
ಎ.12ರಂದು ನಾಮಪತ್ರ ಸಲ್ಲಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮುನ್ನ ಬೆಳಗ್ಗೆ 10 ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಗಾಂಧಿ ಬಜಾರ್, ನೆಹರು ರಸ್ತೆಯ ಮೂಲಕ ಶೀನಪ್ಪ ಶೆಟ್ಟಿ (ಗೋಪಿ ವೃತ್ತ)ವೃತ್ತಕ್ಕೆ ಬರಲಾಗುವುದು. ಅಲ್ಲಿ ಸಭೆ ನಡೆಸಿ ಬಳಿಕ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದರು.
ನಾಮಪತ್ರದ ಸಲ್ಲಿಸುವ ಠೇವಣಿ ಹಣವಾಗಿ ನಗರದ ಮಹಿಳೆಯರು ಮತ್ತು ಮುತ್ತೈದೆಯರು ಸೇರಿ 24 ಸಾವಿರ ರೂ. ಮತ್ತು ತೀರ್ಥಹಳ್ಳಿಯ ಭೀಮನಕಟ್ಟೆ ಮಠದ ಶ್ರೀಗಳು 1 ಸಾವಿರ ರೂ. ನೀಡಿದ್ದು, ನನ್ನ ಗೆಲುವಿಗೆ ಈ ನೆಲದ ಶ್ರೇಷ್ಠರಾದ ಸಾಧು ಸಂತರು ಮತ್ತು ತಾಯಂದಿರು ಹರಸಿ ಒಟ್ಟು 25 ಸಾವಿರ ರೂ. ನೀಡಿದ್ದಾರೆ. ಇದು ನನ್ನ ಗೆಲುವಿನ ಸಂಕೇತ ಎಂದರು.
ಪ್ರಚಾರಕ್ಕೆಂದು ಬೇರೆ ಯಾವ ದೊಡ್ಡ ನಾಯಕರೂ ನನಗಿಲ್ಲ. ಇನ್ನು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅಂತಹವರು ಹಲವರಿದ್ದಾರೆ. ನನಗೆ ಸಾಮಾನ್ಯ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು ಎಂದರು.
ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ರಾಘವೇಂದ್ರ ಅವರ ಸೋಲಿನ ಭಯವೇ ಇದಕ್ಕೆ ಕಾರಣ. ಆದರೆ ನನ್ನ ಉದ್ದೇಶದಿಂದ ನಾನು ಹಿಂದೆ ಸರಿಯುವುದಿಲ್ಲ. ನನ್ನ ಕಾರ್ಯಕರ್ತರು ಇಂತಹ ಯಾವುದೇ ಸುದ್ದಿಯನ್ನು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ನಾನೊಬ್ಬ ಹಿಂದುತ್ವವಾದಿ, ಬಿಜೆಪಿ ಪಕ್ಷದ ಶುದ್ಧೀಕರಣಕ್ಕಾಗಿ, ಕುಟುಂಬ ರಾಜಕಾರಣ ವಿರೋಧಿಸಿ ಸ್ಪರ್ಧೆ ಮಾಡುತ್ತಿದ್ದೇನೆ. ಈಗಾಗಲೇ ಎಲ್ಲಾ ಸಮಾಜದವರು ಮತ್ತು ಬಿಜೆಪಿ ಸೇರಿದಂತೆ ವಿವಿಧ ಪಕ್ಷದವರು ಜೊತೆಗೆ ರಾಷ್ಟ್ರ ಭಕ್ತ ಮುಸ್ಲಿಂರು ಕೂಡ ನನಗೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಇವರ ಪ್ರೀತಿ ವಿಶ್ವಾಸಕ್ಕೆ ನಾನು ಅತ್ಯಂತ ಋಣಿಯಾಗಿದ್ದೇನೆ. ನನಗೆ ಹೆಚ್ಚಿನ ಶಕ್ತಿ ಬಂದಿದೆ. ನಾಮಪತ್ರ ಸಲ್ಲಿಸಿದ ಮೇಲೆ ಮತ್ತಷ್ಟು ಶಕ್ತಿ ಬರುತ್ತದೆ. ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಪ್ರಮುಖರಾದ ಎನ್.ಜಿ. ವೀರಪ್ಪ, ಇ.ವಿಶ್ವಾಸ್, ಶಂಕರ್ ಗನ್ನಿ, ಮಹಾಲಿಂಗಶಾಸ್ತ್ರಿ, ಸತ್ಯನಾರಾಯಣ, ಸುವರ್ಣ ಶಂಕರ್, ಆರತಿ ಆ.ಮಾ. ಪ್ರಕಾಶ್, ಸೀತಾ ಲಕ್ಷ್ಮೀ, ವೆಂಕಟೇಶ್, ಮಹಾದೇವಪ್ಪ, ಬಾಲು, ಆಶಾ ಚನ್ನಬಸಪ್ಪ, ಅನಿತಾ ಸೇರಿದಂತೆ ಹಲವರಿದ್ದರು.