ಬಂಗಾರಪ್ಪರ ಆದರ್ಶ ಚಿಂತನೆಗಳು ಎಂದಿಗೂ ಜೀವಂತ: ಸಭಾಪತಿ ಬಸವರಾಜ ಹೊರಟ್ಟಿ
ಸೊರಬ: ಬಂಗಾರಧಾಮದಲ್ಲಿ 'ಬಂಗಾರಪ್ಪ ಸವಿ ನೆನಪು' ಕಾರ್ಯಕ್ರಮ
ಸೊರಬ, ಡಿ.27: ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಆದರ್ಶವಾದ ಚಿಂತನೆಗಳು ಎಂದಿಗೂ ಜೀವಂತವಾಗಿರುತ್ತವೆ. ಅವರ ಒಡನಾಟ, ಮಾರ್ಗದರ್ಶನ ನಮಗೆ ಆದರ್ಶಪ್ರಾಯ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಾವು ನಡೆಯುತ್ತಿದ್ದೇವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸೊರಬದ ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ ಅವರ 12ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಬಂಗಾರಪ್ಪ ವಿಚಾರ ವೇದಿಕೆ, ಬಂಗಾರಪ್ಪ ಅಭಿಮಾನಿ ಬಳಗ ಹಾಗೂ ಬಂಗಾರಪ್ಪ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ 'ಬಂಗಾರಪ್ಪ ಸವಿನೆನಪು' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಬಂಗಾರಪ್ಪನವರು ಸಮಾಜವಾದಿ ಹೋರಾಟಗಳಲ್ಲಿ ರೈತರಿಗೆ ನ್ಯಾಯ ದೊರಕಿಸಿಕೊಡಲು ದುಡಿದು ರಾಜಕೀಯವಾಗಿ ಎತ್ತರಕ್ಕೆ ಬೆಳೆದವರು. ಅವರು ನಮ್ಮ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.ವರ್ಣಮಯ ವ್ಯಕ್ತಿತ್ವ ಹೊಂದಿದ್ದ ಅವರು, ಬಡವರ, ಕೂಲಿ ಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.ಬಂಗಾರಪ್ಪನವರ ಈ ಬಂಗಾರಧಾಮ ಅಧ್ಯಯನ ಪೀಠವಾಗಬೇಕು ಎಂದರು.
ಆಶ್ರಯ, ಆರಾಧನಾ, ಆಕ್ಷಯ ಕಾರ್ಯಕ್ರಮಗಳನ್ನು ಬಡವರಿಗಾಗಿ ಜಾರಿಗೊಳಿಸಿದರು. ಅಧಿಕಾರದಲ್ಲಿದ್ದಾಗ
ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿರಲಿಲ್ಲ. ಒಬ್ಬ ನಾಯಕ ಎಷ್ಟು ಕಾಲ ಇರ್ತಾನೆ ಅನ್ನುವುದು ಮುಖ್ಯವಲ್ಲ, ಆ ವ್ಯಕ್ತಿ ಎಷ್ಟು ವರ್ಷಗಳ ಕಾಲ ಪ್ರಭಾವ ಬೀರುತ್ತಾನೆ ಎಂಬುದು ಮುಖ್ಯ. ಆ ರೀತಿಯ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಬಂಗಾರಪ್ಪ ಎಂದು ಬಣ್ಣಿಸಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಬಂಗಾರಪ್ಪ ಸಕ್ರಿಯ ರಾಜಕಾರಣ ಮಾಡಿದವರು. ಅವರು ಬಿಜೆಪಿಗೆ ಬಂದಾಗ ಬಿಜೆಪಿ-ಜೆಡಿಯು ಸೇರಿ 84 ಸ್ಥಾನ ಗೆದ್ದಿದ್ದೇವೆ. ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರಕಿತ್ತು. ಅವರು ಯಾವಾಗಲೂ ಜನರ ಮಧ್ಯೆ ಇರುವ ನಾಯಕರಾಗಿದ್ದರು. ಜನರ ಭಾವನೆಗಳಿಗೆ ಸ್ಪಂದಿಸುವ ಗುಣ ಅವರಲ್ಲಿತ್ತು. ಕೆಳವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಗುಣ ಹೊಂದಿದ್ದರು. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ತಮ್ಮದೇ ರಾಜಕೀಯ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದರು. ದಲಿತರು- ಹಿಂದುಳಿದವರ ಪರವಾದ ಆಡಳಿತವನ್ನು ನೀಡಿ ಬಡ ಮಕ್ಕಳಿಗೆ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಶಾಲಾ ಮಕ್ಕಳಿಗೆ ದಿನಕ್ಕೆ ಒಂದು ರೂಪಾಯಿ ನೀಡುವ ಯೋಜನೆ ಜಾರಿಗೆ ತಂದಿದ್ದರು. ಕಾವೇರಿ ವಿಷಯದಲ್ಲಿ ಎದೆಗಾರಿಕೆ ನಿರ್ಣಯ ಕೈಗೊಂಡ ದೀಮಂತ ನಾಯಕರಾಗಿದ್ದರು ಎಂದರು.
ಸರಕಾರದ ಅನುದಾನವಿಲ್ಲದೇ ಸ್ವಂತ ಹಣದಿಂದ ಮಧು ಬಂಗಾರಪ್ಪ ತಂದೆ-ತಾಯಿಯ ಸ್ಮಾರಕ ನಿರ್ಮಿಸಿದ್ದಾರೆ. ಈ ಜಾಗವನ್ನು ಅವರು ವಾಣಿಜ್ಯೋದ್ಯಮಕ್ಕೆ ಬಳಕೆ ಮಾಡಬಹುದಿತ್ತು. ಆದರೆ ಅವರು ಆ ರೀತಿ ಮಾಡಿಲ್ಲ. ತಂದೆತಾಯಿ ಋಣ ತೀರಿಸುವ ಕಾರ್ಯ ಮಾಡಿದ್ದಾರೆ. ಶಿವಮೊಗ್ಗ ಮಾರ್ಗದಲ್ಲಿ ಹೋದರೆ ರಸ್ತೆ ಎಡ-ಬಲಕ್ಕೆ ಯಾರ ಆಸ್ತಿ ಇದೆ ಎಂಬುದನ್ನು ಜನರು ನೆನಪು ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಕುಕ್ಕಿದರು.
ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಗಾರಪ್ಪನವರ ಚಿಂತನೆ-ವಿಚಾರಗಳು ನಾಡಿನ ಜನತೆಗೆ ತಲುಪಬೇಕು. ಈ ಬಂಗಾರಧಾಮವು ಸ್ಫೂರ್ತಿಯ ನೆಲೆಯಾಗಬೇಕು. ಬಂಗಾರಪ್ಪರ ಹೆಸರನ್ನು ಉಳಿಸಿಕೊಂಡು ಹೋಗುತ್ತೇನೆ. ಬಂಗಾರಪ್ಪನವರ ಚಿಂತನೆ ಅಧ್ಯಯನ ಪೀಠವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಬಂಗಾರಪ್ಪ ಸ್ಮಾರಕ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದವರಿಗೆ ಸಚಿವ ಮಧು ಬಂಗಾರಪ್ಪ ಸನ್ಮಾನಿಸಿದರು.
ಸಮಾರಂಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾಜಿ ಶಾಸಕ ಆರ್.ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಕಲಗೋಡು ರತ್ನಾಕರ, ರಮೇಶ್, ವೆಂಕಟೇಶ್, ವೇಣುಗೋಪಾಲ್ ನಾಯಕ್, ಜಿ.ಡಿ ಮಂಜುನಾಥ್, ಅಣ್ಣಪ್ಪ ಡಿ.ಬಿ., ಯಲ್ಲಪ್ಪ ಕೆ.ವಿ.ಗೌಡ, ಕೆ.ಪಿ.ರುದ್ರಗೌಡ, ಆರ್.ಸಿ.ಪಾಟೀಲ್, ಸುರೇಶ್ ಬಿಳವಾಣಿ, ಪ್ರಭಾಕರ್, ರವಿ ಬರಗಿ ಮತ್ತಿತರರು ಉಪಸ್ಥಿತರಿದ್ದರು.
ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.
--------------------------------
ಅರವಿಂದ ಲಿಂಬಾವಳಿ ಪಕ್ಷದ ವಿರುದ್ಧವೇ ಮಾತನಾಡುತ್ತಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆಂದು ಕಾಣುತ್ತದೆ. ಹಾಗೇನಾದರೂ ಹೊರಗೆ ಕಾಲಿಟ್ಟಿದ್ದರೆ ಅವರಿಗೆ ಒಳ್ಳೆಯದಾಗಲಿ.
- ಬಸವರಾಜ್ ಹೊರಟ್ಟಿ
ಸಭಾಪತಿ, ವಿಧಾನ ಪರಿಷತ್