ಶಿವಮೊಗ್ಗದ ಏರ್ ಪೋರ್ಟ್ ಕಾಮಗಾರಿ ಹಾಗೂ ಸ್ಮಾರ್ಟ್‌ಸಿಟಿ ಯೋಜನೆಗಳಲ್ಲಿ ಕೆಲವು ನ್ಯೂನತೆ ಇದ್ದು, ತನಿಖೆಯಾಗಬೇಕು: ಸಚಿವ ಮಧುಬಂಗಾರಪ್ಪ
ಶಿವಮೊಗ್ಗ: ನಗರದ ವಿಮಾನ ನಿಲ್ದಾಣ ಕಾಮಗಾರಿ ಹಾಗೂ ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆಗಳಲ್ಲಿ ಕೆಲವು ನ್ಯೂನತೆ ಇದ್ದು, ತನಿಖೆಯಾಗಬೇಕು ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲವು ನ್ಯೂನ್ಯತೆ ಇದೆ. ಕಾಮಗಾರಿ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿದೆ. 200 ಕೋಟಿ ವೆಚ್ಚದ ವಿಮಾನ ನಿಲ್ದಾಣಕ್ಕೆ 449 ಕೋಟಿ ವೆಚ್ಚ ಮಾಡಲಾಗಿದೆ. ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸಲಾಗಿದೆ. ಹಾಗಂತ ಮೂರು ಪಟ್ಟು ಹೆಚ್ಚು ಮಾಡಿರುವುದೇಕೆ ಎಂದು ಪ್ರಶ್ನಿಸಿದರು.
ತುಮಕೂರು - ಹೊನ್ನಾವರ ಹೈವೆ ಕಾಮಗಾರಿ ವಿಳಂಬ ಆಗುತ್ತಿದೆ. ಕಾಮಗಾರಿ ವೇಗ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮದಲ್ಲಿ ಬಹಳ ಹಿಂದೆ ಇದ್ದೇವೆ. ಪ್ರವಾಸೋದ್ಯಮ ಮುಂಚೂಣಿಗೆ ತರುವ ಕೆಲಸ ಮಾಡುತ್ತೇವೆ. ಶಿವಮೊಗ್ಗದ ಫ್ರೀಡಂ ಪಾರ್ಕ್ ಗೆ ಅಲ್ಲಮ ಪ್ರಭು ಹೆಸರು ಇಡುವ ವಿಚಾರ ಕ್ಯಾಬಿನೆಟ್ ನಲ್ಲಿ ಪಾಸ್ ಆಗಿದೆ.
ಶರಾವತಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸ್ಥಳೀಯರ ವಿಶ್ವಾಸಕ್ಕೆ ಪಡೆದು ಚಿಂತನೆ ನಡೆಸಲಾಗುವುದು. ಶರಾವತಿ ಮೊದಲ ಆದ್ಯತೆ ವಿದ್ಯುತ್ ಉತ್ಪಾದನೆ. ನಂತರ ಕುಡಿಯುವ ನೀರಿನ ಯೋಜನೆ ಬಗ್ಗೆ ಚಿಂತನೆ ಮಾಡಲಾಗುವುದು ಎಂದರು.
ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲ್ಲ ಅಂತೇಳಿ ಹಲವು ಯೋಜನೆ ಘೋಷಣೆ ಮಾಡಿ ಹೋಗಿದ್ದರು.ಆದರೆ ದುಡ್ಡು ಇಟ್ಟಿಲ್ಲ, ನಾವು ದುಡ್ಡು ಇಟ್ಟು ಕೆಲಸ ಮಾಡುತ್ತೇವೆ.ಬರ ಪರಿಸ್ಥಿತಿ ನಿರ್ವಹಣೆಗೆ ಯಾವುದೇ ತೊಂದರೆ ಇಲ್ಲ.ಬರ ನಿರ್ವಹಣೆಗೆ ಸಾಕಷ್ಟು ಹಣ ಇದೆ ಯಾವುದೇ ಸಮಸ್ಯೆ ಇಲ್ಲ ಎಂದರು.
ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಮುಂಜಾಗೃತೆ ವಹಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಹರಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.