ಹೊಸನಗರ | ಕಂದಕಕ್ಕೆ ಉರುಳಿ ಬಿದ್ದ ಸಾರಿಗೆ ಬಸ್ : ಪ್ರಯಾಣಿಕರಿಗೆ ಗಾಯ
ಹೊಸನಗರ : ಸಾರಿಗೆ ಬಸ್ ಮತ್ತು ಬ್ಯಾಂಕಿಗೆ ಹಣ ಸಾಗಿಸುತ್ತಿದ್ದ ಸಿಎಂಎಸ್ ವಾಹನದ ನಡುವೆ ಅಪಘಾತ ಸಂಭವಿಸಿ ಬಸ್ಸು ಕಂದಕಕ್ಕೆ ಬಿದ್ದ ಘಟನೆ ಹೊಸನಗರ ತಾಲೂಕಿನ ರಾಣೇಬೆನ್ನೂರು ಬೈಂದೂರು ಹೆದ್ದಾರಿಯ ಗಾಜನೂರು ಕ್ರಾಸ್ ಬಳಿ ಸೋಮವಾರ ನಡೆದಿದೆ.
ಬೆಂಗಳೂರು ನಿಂದ ಭಟ್ಕಳ ಕಡೆ ಸಾಗುತ್ತಿದ್ದ ಬಸ್, ನಿಟ್ಟೂರು ಬ್ಯಾಂಕಿಗೆ ಹಣ ಹಾಕಿ ಬರುತ್ತಿದ್ದ ಬ್ಯಾಂಕ್ ಸಿಎಂಎಸ್ ವಾಹನದ ನಡುವೆ ಬಪ್ಪನಮನೆ ಸಮಗೋಡು ನಡುವಿನ ಗಾಜನೂರು ಕ್ರಾಸ್ ನಲ್ಲಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಹೆದ್ದಾರಿ ಪಕ್ಕಕ್ಕೆ ಉರುಳಿದೆ. ಬಸ್ಸಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ನಗರದ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು ಎಂದು ತಿಳಿದು ಬಂದಿದೆ.
ಬಸ್ ಕೆಳಕ್ಕೆ ಉರುಳುತ್ತಿದ್ದಂತೆ ಮಾವಿನಮರವೊಂದು ತಡೆದಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಸುಮಾರು 50 ಅಡಿ ಕೆಳಗೆ ಉರುಳಿ ಬಸ್ ಹೊಳೆಗೆ ಬೀಳುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ.
ಬಸ್ಸಿನ ಚಾಲಕ ದಯಾನಂದ ಕನ್ನೋಳಿ, ಕಂಡಕ್ಟರ್ ಕಲ್ಲೇಶ್ ಗೆ ಸಣ್ಣಪುಟ್ಟ ಗಾಯವಾಗಿದೆ. ಬ್ಯಾಂಕ್ ಸಿಎಂಎಸ್ ವಾಹನದ ಮುಂಭಾಗ ಜಖಂಗೊಂಡಿದೆ. ವಾಹನದಲ್ಲಿ ಚಾಲಕ ಮಂಜುನಾಥ್, ಗನ್ ಮ್ಯಾನ್ ತಿಪ್ಪೇಶಿ, ನಾಗಪ್ರಸನ್ನ, ಶಿವಕುಮಾರ್ ಇದ್ದು, ಚಾಲಕನ ತಲೆಗೆ ಸ್ವಲ್ಪ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.