ಶಿವಮೊಗ್ಗ ಮೈದಾನ ವಿವಾದ ಪ್ರಕರಣ | ʼಪಾವಿತ್ರ್ಯ ಕಾಪಾಡುವುದು ಸಮಿತಿಯ ಉದ್ದೇಶʼ : ಮರ್ಕಝಿ ಸುನ್ನಿ ಜಾಮಿಯಾ ಮಸೀದಿ ಸ್ಪಷ್ಟನೆ

ಶಿವಮೊಗ್ಗ: ಈದ್ಗಾ ಮೈದಾನ ಮುಸ್ಲಿಮ್ ಸಮುದಾಯದ ಪವಿತ್ರ ಸ್ಥಳ. ಇದು ನಿರಂತರವಾಗಿ ಅಪವಿತ್ರವಾಗುವುದನ್ನು ತಪ್ಪಿಸುವ ಉದ್ದೇಶವನ್ನು ಮರ್ಕಝಿ ಸುನ್ನಿ ಜಾಮಿಯಾ ಸಮಿತಿ ಹೊಂದಿದೆ. ಅಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವುದಿಲ್ಲ. ಪ್ರಾರ್ಥನೆ ಸಲ್ಲಿಸುವ ಜಾಗವಾಗಿಯೇ ಅದು ಇರುತ್ತದೆ. ನಿಬಂಧನೆಗಳಿಗೆ ಒಳಪಟ್ಟು ನಮಾಜು ಇಲ್ಲದ ದಿನಗಳಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಿಡುತ್ತೇವೆ ಎಂದು ಮರ್ಕಝಿ ಸುನ್ನಿ ಜಾಮಿಯಾ ಮಸೀದಿಯ ಪ್ರಮುಖರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಕೀಲ ನಯಾಝ್ ಅಹ್ಮದ್ ಮಾತನಾಡಿ, ತಿಲಕ್ ನಗರದಲ್ಲಿರುವ ಸುನ್ನಿ ಈದ್ಗಾ ಮೈದಾನ ಮುಸ್ಲಿಮ್ ಸಮುದಾಯದ ವಕ್ಫ್ ಆಸ್ತಿಗೆ ಸೇರಿದೆ. ಇದು ಈಗಾಗಲೇ ಮುನ್ಸಿಪಾಲ್ ಖಾತೆಯನ್ನು ಹೊಂದಿದೆ. ಇದರ ನಿರ್ವಹಣೆಯನ್ನು ಸುನ್ನಿ ಜಾಮೀಯಾ ಮಸೀದಿ ವತಿಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಈದ್ಗಾ ಮೈದಾನದ ಮೂಲ ಎಲ್ಲಿಯದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಜಾಗವನ್ನು ವಕ್ಫ್ ಆಸ್ತಿಗೆ ಸೇರಿಸಿಕೊಳ್ಳುವ ಮುನ್ನ ಗೆಜೆಟ್ ನೋಟಿಫಿಕೇಷನ್ ಆಗುತ್ತದೆ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ಈ ಎಲ್ಲ ವಿವರಗಳು ಲಭ್ಯವಿದೆ. ಸಂಪೂರ್ಣ ವಿವರವನ್ನು ನಾವು ವಕ್ಫ್ ಬೋರ್ಡ್‌ನಿಂದ ಪಡೆದು ಕೊಳ್ಳುತ್ತೇವೆ. ಆದರೆ ಸದ್ಯಕ್ಕೆ ಈ ಜಾಗ ನಮ್ಮದು ಎನ್ನುವುದಕ್ಕೆ ನಮ್ಮಲ್ಲಿ ಮಹಾನಗರ ಪಾಲಿಕೆ ಮಾಡಿಕೊಟ್ಟ ಖಾತೆಯಿದೆ. ಪ್ರತಿ ವರ್ಷ ಕಂದಾಯ ಕಟ್ಟುತ್ತಿದ್ದೇವೆ ಎಂದರು.
ಈದ್ಗಾ ಮೈದಾನದಲ್ಲಿ ಮದ್ಯ ಸೇವನೆ, ಗಾಂಜಾ ಸೇವನೆ ಮಾಡಲಾಗುತ್ತದೆ. ಎಲ್ಲ ಕಡೆ ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ. ಇಲ್ಲಿ ಸ್ವಚ್ಛತೆ ಕಾಪಾಡಬೇಕೆಂಬುದು ನಮ್ಮ ಅಭಿಲಾಸೆ ಎಂದು ಹೇಳಿದರು.
ಮರ್ಕಝಿ ಸುನ್ನಿ ಮಸೀದಿಯಾ ಅಧ್ಯಕ್ಷ ಮುನಾವರ ಪಾಶಾ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸತ್ತಾರ್ ಬೇಗ್, ನಿಸಾರ್ ಅಹ್ಮದ್, ಪೈರೋಝ್, ಫಿರ್ದೋಸ್, ಪರ್ವೀಝ್ ಅಹ್ಮದ್, ಸಿರಾಜ್ ಅಹ್ಮದ್ ಮತ್ತಿತರರು ಹಾಜರಿದ್ದರು.