ಶಿವಮೊಗ್ಗ | ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಆನ್ಲೈನ್ ವಂಚನೆ : ಉತ್ತರ ಪ್ರದೇಶ ಮೂಲದ ಇಬ್ಬರ ಬಂಧನ, 23.89 ಲಕ್ಷ ರೂ.ವಶ
ಬಂಧಿತ ಆರೋಪಿಗಳು
ಶಿವಮೊಗ್ಗ: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ನಗರದ ಗೋಪಾಳ ಮೂಲದ ವ್ಯಕ್ತಿಯೊಬ್ಬರಿಗೆ (ಹೆಸರು ಗೌಪ್ಯ) 41 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ, 23.89 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಸೆ.27ರಂದು ಗೋಪಾಳದ 72 ವರ್ಷದ ವ್ಯಕ್ತಿಯೊಬ್ಬರಿಗೆ ವಿಡಿಯೋ ಕರೆ ಮಾಡಿ ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣವು ಅಕ್ರಮವಾಗಿ ವರ್ಗಾವಣೆಯಾಗಿದ್ದರಿಂದ ದೂರು ದಾಖಲಾಗಿದೆ. ಬಂಧನಕ್ಕೆ ವಾರೆಂಟ್ ಜಾರಿಯಾಗಿದೆ. ಎಲ್ಲ ಬ್ಯಾಂಕ್ ಖಾತೆಗಳನ್ನು ಫ್ರೀಝ್ ಮಾಡಲಾಗಿದ್ದು, ನೀವು ಇದರಿಂದ ಹೊರಬರಬೇಕಾದರೆ ತಿಳಿಸಿದ ಖಾತೆಗೆ ಹಣ ವರ್ಗಾಯಿಸಬೇಕೆಂದು ನಿರ್ದೇಶಿಸಲಾಗಿತ್ತು. ಭಯಪಟ್ಟ ಗೋಪಾಳದ ವ್ಯಕ್ತಿ 41 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ನಂತರ, ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆಗೆ ಸಿಇಎನ್ ಪೊಲೀಸ್ ಠಾಣೆ ಡಿವೈಎಸ್ಪಿ ಕೆ. ಕೃಷ್ಣಮೂರ್ತಿ ಮೇಲ್ವಿಚಾರಣೆಯಲ್ಲಿ, ಪಿಐ ಮಂಜುನಾಥ್ ನೇತೃತ್ವದಲ್ಲಿ ಪಿಎಸ್ಐ ಶೇಖರ್, ಸಿಬ್ಬಂದಿ ಆರ್.ವಿಜಯ್, ಬಿ. ರವಿ, ಶರತ್ ಕುಮಾರ್ ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು. ಈ ತಂಡವು ಆರೋಪಿಗಳ ಜಾಡು ಹಿಡಿದು ಉತ್ತರ ಪ್ರದೇಶದಲ್ಲಿ ಇಬ್ಬರನ್ನು ಬಂಧಿಸಿದೆ. ಉತ್ತರ ಪ್ರದೇಶದ ಮೌನಾತ್ ಬಂಜನ್ ಜಿಲ್ಲೆಯ ಜಿ.ಎನ್.ಪುರ ಮಾರ್ಗದ ವಲಿದಪುರ ನಗರ ನಿವಾಸಿ ಮುಹಮ್ಮದ್ ಅಹಮದ್ (45) ಮತ್ತು ಅಜಂಗಡ ಜಿಲ್ಲೆಯ ಮೊಹುಡಿಯಾ ಗ್ರಾಮದ ಅಭಿಷೇಕ್ ಕುಮಾರ್ ಶೇಟ್ (27) ಬಂಧಿತರು. ಆರೋಪಿತರಿಂದ ಒಟ್ಟು 23,89,751 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಮುಹಮ್ಮದ್ ಅಹಮದ್ ಎಂಬ ಆರೋಪಿಯ ಮಗ ಜಾಕೀರ್ ಎಂಬಾತ ವಿದೇಶದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದಲೇ ಆನ್ಲೈನ್ ಮೂಲಕ ಶಿವಮೊಗ್ಗದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್ ಮಾಡಿದ್ದಾನೆ ಎಂಬ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ವಾಟ್ಸ್ ಆಪ್ ನಲ್ಲಿ ಕರೆ ಮಾಡುವುದು, ಅಪ್ಪನ ಮೂಲಕ ಎದುರುಗಡೆ ಇರುವ ವ್ಯಕ್ತಿಗೆ ಭಯಪಡಿಸುವಂತೆ ಕಾನೂನಾತ್ಮಕ ಮಾತುಗಳನ್ನಾಡುವುದು ಇಂತಹ ತಾಂತ್ರಿಕ ಕುಟಿಲತೆಯನ್ನು ಈತನೇ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ವಂಚನೆಯಲ್ಲಿ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬೇಕೆಂಬ ಮಾಹಿತಿಯನ್ನು ಅಭಿಷೇಕ್ ಕುಮಾರ್ ಎಂಬಾತ ಮುಹಮ್ಮದ್ ಅಹಮದ್ಗೆ ನೀಡಿದ್ದು, ಅದನ್ನು ಜಾಕೀರ್ ವಿದೇಶದಿಂದಲೇ ನಿರ್ವಹಿಸಿದ್ದಾನೆ. ಈ ಜಾಲದಲ್ಲಿ ಇನ್ನೂ ಸಾಕಷ್ಟು ಜನರು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ತನಿಖೆ ನಡೆದಿದೆ. ಶಿವಮೊಗ್ಗ ಪೊಲೀಸರು ಚಾಣಾಕ್ಷತೆಯಿಂದ ಡಿಜಿಟಲ್ ಅರೆಸ್ಟ್ ಪ್ರಕರಣ ಭೇದಿಸಿದ್ದಾರೆ.