ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಪಕ್ಷದ ವರಿಷ್ಠರೇ ಹೊರತು ನಾನಲ್ಲ: ಬಿ.ಎಸ್. ಯಡಿಯೂರಪ್ಪ
"ನಾವೇ ಬಡದಾಡಿಕೊಳ್ಳುವುದರಿಂದ ಪಕ್ಷಕ್ಕೆ ಹೆಚ್ಚು ಶಕ್ತಿಯನ್ನು ನೀಡಲು ಸಾಧ್ಯವಾಗುವುದಿಲ್ಲ"
ಶಿವಮೊಗ್ಗ: ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಪಕ್ಷದ ವರಿಷ್ಠರೇ ಹೊರತು ತಾನಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದು ಅವರ ತಂದೆ ಬಿ.ಎಸ್ ಯಡಿಯೂರಪ್ಪನವರಿಂದಾಗಿ ಎಂದು ರಮೇಶ್ ಜಾರಕಿಹೊಳಿ ಮಾಡಿರುವ ಹೇಳಿಕೆಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ಬಿ.ವೈ ವಿಜಯೇಂದ್ರ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದಾದ್ಯಂತ ಜನ ಬೆಂಬಲ ಸೂಚಿಸಿದ್ದಾರೆ. ಮೊನ್ನೆ ಮೂರು ಜಿಲ್ಲೆಗಳಲ್ಲಿ ನಡೆದ ಉಪ ಚುನಾವಣೆಯಲ್ಲೂ ಜನ ಅವರನ್ನು ಬೆಂಬಲಿಸಿರುವ ರೀತಿ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಯತ್ನಾಳ್ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಅವರು, ಡಿ.7ರಂದು ಕೋರ್ ಕಮಿಟಿ ಸಭೆ ನಡೆಯಲಿದೆ. ಅಲ್ಲಿ ಯತ್ನಾಳ್ ಅವರ ಬಗ್ಗೆ ಚರ್ಚೆ ಆಗುತ್ತದೆಯೇ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆಡಳಿತ ಪಕ್ಷವನ್ನು ಎದುರಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಹೋಗಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ. ಇದಕ್ಕೆ ಯತ್ನಾಳ್ ರವರು ಒಪ್ಪಿಕೊಳ್ಳುತ್ತಾರೆ. ಎಲ್ಲವೂ ಸರಿ ಹೋಗಲಿದೆ ಎಂಬ ಭರವಸೆ ನನಗೆ ಇದೆ ಎಂದರು.
ಕೋರ್ ಕಮಿಟಿಯಲ್ಲಿ ಎಲ್ಲಾ ಗೊಂದಲಗಳಿಗೂ ತೆರೆ ಬಿದ್ದರೆ ನಾವೆಲ್ಲ ಒಟ್ಟಾಗಿ ಹೋಗಲು ಸಾಧ್ಯವಾಗುತ್ತದೆ ಎಂಬ ಭರವಸೆ ನನಗೆ ಇದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಒಟ್ಟಾಗಿ ಎದುರಿಸಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ. ನನ್ನ ಉದ್ದೇಶ ನಾವೆಲ್ಲ ಒಟ್ಟಾಗಿ ಹೋಗಬೇಕೆಂಬುದು ಆಗಿದೆ ಎಂದರು.
ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವೇ ಹೊರತು ನಾವೇ ಬಡದಾಡಿಕೊಳ್ಳುವುದರಿಂದ ಪಕ್ಷಕ್ಕೆ ಹೆಚ್ಚು ಶಕ್ತಿಯನ್ನು ನೀಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಎಲ್ಲವನ್ನು ಮರೆತು ಒಟ್ಟಾಗಿ ಹೋಗುವ ಪ್ರಯತ್ನ ಮಾಡುತ್ತೇವೆ ಎಂದರು.
ಸರ್ಕಾರದ ಹಗರಣಗಳನ್ನು ಬಯಲು ಮಾಡಿ ಅದಕ್ಕೆ ನ್ಯಾಯ ಕೊಡಿಸುತ್ತೇವೆ. ಈಗಾಗಲೇ ಈಡಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದೆ. ಇವೆಲ್ಲವೂ ಮುಂಬರುವ ದಿನಗಳಲ್ಲಿ ಚರ್ಚೆ ಆಗಲಿದೆ. ಸರ್ಕಾರದ ಹಗರಣಗಳ ವಿರುದ್ದ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ನಾವೆಲ್ಲ ಒಟ್ಟಾಗಿ ಕುಳಿತು ಚರ್ಚೆ ಮಾಡುತ್ತೇವೆ ಎಂದರು.