ಪ್ರಜ್ವಲ್ ರೇವಣ್ಣ ಪ್ರಕರಣ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ : ಆರ್.ಆಶೋಕ್
ಶಿವಮೊಗ್ಗ: ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆಯಾಗಬೇಕು. ಆದರೆ ಈ ಪ್ರಕರಣ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪೆನ್ ಡ್ರೈವ್ ಮಾಡಿದ್ದು ಯಾರು. ಪೆನ್ ಡ್ರೈವ್ ತಯಾರಿ ಮಾಡುವ ಫ್ಯಾಕ್ಟರಿ ಇದೆಯಾ. ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆಯಾಲೇಬೇಕು. ಇದು ನಮ್ಮ ಪಕ್ಷದ ನಿಲುವು ಎಂದು ಹೇಳಿದರು.
ಚುನಾವಣೆಗಾಗಿ ಮಾಡಿರುವ ತಂತ್ರ ಇದು. ಕಾಂಗ್ರೆಸ್ ಮನಸ್ಸಿನಲ್ಲಿ ಪ್ರಜ್ವಲ್ ಇಲ್ಲ. ದೇವೇಗೌಡರಿಗೆ ಅಪಮಾನ ಮಾಡಲು ಈ ತಂತ್ರ ಹೆಣದಿದ್ದಾರೆ. ಸಿದ್ದರಾಮಯ್ಯ ಯೋಗ್ಯತೆ ಏನು ಅಂತ ಗೊತ್ತಾಯಿತಲ್ಲ.ಅಧಿಕಾರ ನಡೆಸಲು ಆಗಲ್ಲ ಅಂದರೆ ಅಧಿಕಾರ ಬಿಟ್ಟು ಇಳಿಯಿರಿ ಎಂದರು.
ದೇಶದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಬರಬೇಕು.ದೇಶದ ನಾಯಕತ್ವ ಮೋದಿ ವಹಿಸಬೇಕೋ? ರಾಹುಲ್ ವಹಿಸಬೇಕೋ ಎಂಬ ಚರ್ಚೆ ಆಗುತ್ತಿದೆ. ಕಾಂಗ್ರೆಸ್ ನವರು ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂದು ಎಲ್ಲೂ ಹೇಳುತ್ತಿಲ್ಲ. ಕೇರಳದ ಮುಖ್ಯಮಂತ್ರಿ ʼಅಮೂಲ್ ಬೇಬಿʼ ಅಂದಿದ್ದಾರೆ. ಕರ್ನಾಟಕದಲ್ಲಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.
ರಾಜು ಕಾಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಮಾನ ಮರ್ಯಾದೆ ಇರುವ ಯಾವ ಪಾರ್ಟಿನೂ ಸಾವನ್ನು ಬಯಸುವುದಿಲ್ಲ. ಸಾವನ್ನು ಬಯಸುವ ಪಾರ್ಟಿ ಕಾಂಗ್ರೆಸ್. ವಿಕೃತ ಮನಸಿನ ಪಾರ್ಟಿ ಕಾಂಗ್ರೆಸ್. ಚುನಾವಣೆ ಆದ ಮೇಲೆ ರಾಹುಲ್ ಗಾಂಧಿ ಇಂಡಿಯಾದಲ್ಲಿ ಇರಲ್ಲ. ಯಾವ ದೇಶಕ್ಕೆ ಓಡಿ ಹೋಗುತ್ತಾರೊ ಗೊತ್ತಿಲ್ಲ. ಚುನಾವಣೆ ನಂತರ ಕಾಂಗ್ರೆಸ್ ಮುಕ್ತ ದೇಶ ಆಗುತ್ತದೆ. ಕಾಂಗ್ರೆಸ್ ಯೋಗ್ಯತೆಗೆ ಬೆಂಕಿ ಹಾಕಬೇಕು ಎಂದು ಕಿಡಿಕಾರಿದರು.