ಸಾಗರ | 9ನೇ ದಿನಕ್ಕೆ ಕಾಲಿಟ್ಟ ಶರಾವತಿ ಮುಳುಗಡೆ ಸಂತ್ರಸ್ತರ ಅಹೋರಾತ್ರಿ ಧರಣಿ
ಸರಕಾರದಿಂದ ಚರ್ಚೆಗೆ ಅಧಿಕೃತ ಆಹ್ವಾನ
ಸಾಗರ : ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ತರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಅ.21ರಿಂದ ಸಾಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಶರಾವತಿ ಮುಳುಗಡೆ ರೈತರ ಹೋರಾಟ ಮಂಗಳವಾರಕ್ಕೆ ಒಂಭತ್ತನೇ ದಿನಕ್ಕೆ ಕಾಲಿಟ್ಟಿದೆ.
ಈ ವೇಳೆ ಜಿಲ್ಲಾ ಮಾತನಾಡಿದ ಮುಳುಗಡೆ ಸಂತ್ರಸ್ತರು ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ಸಂಚಾಲಕ ವಿ.ಜಿ.ಶ್ರೀಕರ್, ಮಲೆನಾಡಿನ ರೈತರು, ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಭೂ ಹಕ್ಕು ವಂಚಿತರ ಆಮೂಲಾಗ್ರ ಸಮಸ್ಯೆ ಬಿಡಿಸಲಾಗದಂತ ಕಗ್ಗಂಟಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 6-7 ಸಾವಿರ ರೈತರಿಗೆ ಒತ್ತುವರಿ ತೆರವು ಮಾಡುವಂತೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪಅವರ ಅಧ್ಯಕ್ಷತೆಯಲ್ಲಿ ಮಲೆನಾಡಿನ ಶಾಸಕರು-ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಿ ಜಿಲ್ಲಾಡಳಿತದ ಪ್ರಸ್ತಾವವನ್ನು ಪರಿಗಣಿಸಿ ಟಾಸ್ಕ್‌ಫೋರ್ಸ್ ರಚನೆ ಮಾಡಬೇಕು. ಸರಕಾರ ಟಾಸ್ಕ್ ಫೋರ್ಸ್ ರಚನೆ ಮಾಡಲು ಸಾಧ್ಯವಿಲ್ಲ ಎಂದಾದರೆ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಸರಕಾರ ಮಾತುಕತೆಗೆ ಬರಲು ಈತನಕ ಲಿಖಿತವಾಗಿ ಆಹ್ವಾನ ನೀಡಿಲ್ಲ. ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಸರಕಾರದ ಹಂತದಲ್ಲಿ ನಡೆಯಬೇಕು. ದಿಲ್ಲಿ ಮಾದರಿಯಲ್ಲಿ ವರ್ಷಗಟ್ಟಲೆ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸರಿಯಾದ ನಿರ್ಧಾರ ತೆಗೆದುಕೊಂಡು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕೆಂದು ಒತ್ತಾಯಿಸಿದರು.
ಮಲೆನಾಡು ರೈತಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಮಾತನಾಡಿ, ಮುಳುಗಡೆ ರೈತರ ಜೊತೆ ಅರಣ್ಯ ಭೂಮಿ ಸಾಗುವಳಿದಾರರ ಪರವಾಗಿ ನಮ್ಮ ಹೋರಾಟ ನಡೆಯುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಿದ 3 ಲಕ್ಷ ರೈತರ ಅರ್ಜಿಗಳನ್ನು ವಿಚಾರಣೆ ನಡೆಸದೆ ವಜಾಗೊಳಿಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಂಗಳೀಕ ಅಭಯಾರಣ್ಯದ ಹೆಸರಿನಲ್ಲಿ ಮಲೆನಾಡಿನ ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಶಿವಮೊಗ್ಗದಲ್ಲಿರುವ ದೊಡ್ಡವರ ಕಾಲೇಜನ್ನು ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಕೈಬಿಡುವ ಸಲುವಾಗಿ ಭದ್ರಾವತಿ ತಾಲೂಕಿಗೆ ಶೆಟ್ಟಿಹಳ್ಳಿ ಅಭಯಾರಣ್ಯವನ್ನು ವರ್ಗಾವಣೆ ಮಾಡಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ವನ್ಯಜೀವಿ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ. ಆದರೆ, ಉರುಳುಗಲ್ಲು ಗ್ರಾಮ ವನ್ಯಜೀವಿ ಮಂಡಳಿಯಲ್ಲಿದ್ದರೂ ಗ್ರಾಮಕ್ಕೆ ವಿದ್ಯುತ್ ಕೊಡಲು ಸಭೆಯಲ್ಲಿ ತೀರ್ಮಾನವಾಗಿಲ್ಲ ಎಂದು ದೂರಿದರು.
ಕಂದಾಯ ಇಲಾಖೆ ಕೊಟ್ಟ ಹಕ್ಕುಪತ್ರಗಳನ್ನು ವಜಾಗೊಳಿಸಲಾಗುತ್ತಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಭೂಮಿ ಸಮಸ್ಯೆ ಇದೆ. ನನ್ನಿಂದ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಇನ್ನು ಅರಣ್ಯ ಸಚಿವರು ಮಲೆನಾಡಿನ ರೈತರನ್ನು ಲೂಟಿಕೋರರು ಎಂದು ತಿಳಿದುಕೊಂಡಿದ್ದಾರೆ. ಮಲೆನಾಡಿನ ರೈತರು ತ್ಯಾಗ ಮಾಡಿಲ್ಲ ಅಂದರೆ ರಾಜ್ಯಕ್ಕೆ ಬೆಳಕು ಇರುತ್ತಿರಲಿಲ್ಲ. ಅವರನ್ನು ಮುಳಗಡೆ ಮಾಡಿ ಸಮಾಧಿ ಮೇಲೆ ಅಣೆಕಟ್ಟು ಕಟ್ಟಿ ಇವತ್ತು ರಾಜ್ಯ ಮತ್ತು ಕೇಂದ್ರ ಸರಕಾರಗಳು ದ್ರೋಹ ಬಗೆಯುತ್ತಿದೆ. ಇವರ ಪಾಪ ಮುಕ್ತಿಯಾಗಬೇಕೆಂದರೆ ನ್ಯಾಯ ಒದಗಿಸಬೇಕೆಂದು ಶ್ರೀನಿವಾಸ್ ಆಗ್ರಹಿಸಿದರು.
ರೈತ ಸಂಘ(ಎಚ್.ಗಣಪತಿಯಪ್ಪ ಸ್ಥಾಪಿತ)ದ ಅಧ್ಯಕ್ಷ ದಿನೇಶ್ ಶಿರಿವಾಳ ಮಾತನಾಡಿ, ಅ.30ರಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಚರ್ಚೆ ನಡೆಸಲು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಕಚೇರಿಯಿಂದ ಆಹ್ವಾನ ಬಂದಿದೆ. ಸಭೆಯಲ್ಲಿ ಭಾಗವಹಿಸಲಾಗುವುದು. ಆದರೆ, ಬೇಡಿಕೆ ಈಡೇರುವ ತನಕ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವಾನಂದ ಕುಗ್ವೆ, ಜಿ.ಟಿ.ಸತ್ಯನಾರಾಯಣ್, ರಾಘು ಸಂಪೋಡಿ, ದುಗೂರು ಪರಮೇಶ್ವರ್, ಚಕ್ರಪಾಣಿ ಕೂಡಸರ, ರವಿ ಕುಪ್ಪ ಗುಡ್ಡೆ, ಎನ್.ಡಿ.ವಸಂತ ಕುಮಾರ್, ಡಾ.ರಾಮಚಂದ್ರ, ಸುಂದರ ಸಿಂಗ್, ಪರಶುರಾಮ್ ಸಿದ್ದಿಹಳ್ಳಿ, ರಾಘವೇಂದ್ರ ಸಂಪಳ್ಳಿ, ರಾಜೇಶ್ ಬುಕ್ಕಿಬರೆ, ಇಂದ್ರಕುಮಾರ್, ವೀರಣ್ಣ ಗೌಡ, ಗಣೇಶ್ ತುಮರಿ ಸೇರಿದಂತೆ ನೂರಾರು ರೈತರು ಇದ್ದರು.
ಸರಕಾರದಿಂದ ಚರ್ಚೆಗೆ ಅಧಿಕೃತ ಆಹ್ವಾನ :
ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರು ಹಾಗೂ ಪಾರಂಪರಿಕ ಅರಣ್ಯವಾಸಿಗಳ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ಅ.30 ರಂದು 4 ಗಂಟೆಗೆ ವಿಧಾನ ಸೌಧದ ಕೊಠಡಿ 313 ರಲ್ಲಿ ನಡೆಯಲಿರುವ ಸಭೆಗೆ ಶಿವಮೊಗ್ಗ ಜಿಲ್ಲಾ ರೈತರ ಮುಳುಗಡೆ ಸಂತ್ರಸ್ತರು ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ಮುಖಂಡರು ಭಾಗವಹಿಸುವಂತೆ ಆಹ್ವಾನ ಬಂದಿದೆ.
ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ ಇಲಾಖೆ, ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಇಲಾಖೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಭವನ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಸಂರಕ್ಷಣೆ), ಅರಣ್ಯ ಭವನ ಬೆಂಗಳೂರು, ಶಿವಮೊಗ್ಗ ಜಿಲ್ಲಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ/ ಭದ್ರಾವತಿ/ ಸಾಗರದ ಸಹಾಯಕ ಆಯುಕ್ತರು, ಶಿವಮೊಗ್ಗ ಮತ್ತು ಸಾಗರ ಉಪವಿಭಾಗಾಧಿಕಾರಿಗಳು ಭಾಗವಹಿಸಲಿದ್ದಾರೆ.