ಸಾಗರ | ತೆಪ್ಪ ಮುಳುಗಿ ಯುವಕರ ನಾಪತ್ತೆ ಪ್ರಕರಣ : ಮೂವರ ಮೃತದೇಹ ಪತ್ತೆ
ಸಾಂದರ್ಭಿಕ ಚಿತ್ರ(File photo)
ಸಾಗರ : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರ ಮೃತದೇಹ ಗುರುವಾರ ಪತ್ತೆಯಾಗಿದೆ.
ಕಳಸವಳ್ಳಿ ಸಮೀಪ ಶರಾವತಿ ಹಿನ್ನೀರಿನಲ್ಲಿ ಬುಧವಾರ ಹೊಳೆ ಊಟಕ್ಕಾಗಿ ತೆರಳಿದ್ದ ವೇಳೆ ತೆಪ್ಪ ಮಗುಚಿ ನೀರಲ್ಲಿ ಮುಳುಗಿ ಯುವಕರು ನಾಪತ್ತೆಯಾಗಿದ್ದರು.
ಕಳಸವಳ್ಳಿಯ ಬಳಿ ಹಿನ್ನೀರಿನಲ್ಲಿ ಸುಮಾರು 40 ಅಡಿ ಆಳದಲ್ಲಿ ಮೂವರು ಯುವಕರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈಶ್ವರ್ ಮಲ್ಪೆ ತಂಡದಿಂದ ಮೃತದೇಹಗಳ ಶೋಧ :
ಕಳಸವಳ್ಳಿ ಸಮೀಪ ಶರಾವತಿ ಹಿನ್ನೀರಿನ ನಡುಗಡ್ಡೆಯಲ್ಲಿ ಊಟಕ್ಕೆ ತೆರಳಿದ್ದ ಐವರು ಯುವಕರ ಪೈಕಿ, ತೆಪ್ಪ ಮಗುಚಿದ್ದ ವೇಳೆ ಮೂವರು ಬುಧವಾರ ಸಂಜೆ ಕಣ್ಮರೆಯಾಗಿದ್ದರು.
ಚೇತನ್ ಜೈನ್ ಸಿಗಂದೂರು(28), ಸಂದೀಪ್ ಹುಲಿದೇವರಬನ(30) ಹಾಗೂ ರಾಜೀವ್ ಗಿಣಿವಾರ(34) ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೊಲೀಸ್ ಹಾಗೂ ಆಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸಲಾಗಿತ್ತು. ರಾತ್ರಿಯಾದ್ದರಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು.
ಗುರುವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಯುವಕರ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ನೀರಿನಾಳದಲ್ಲಿ ಇದ್ದ ಮೂವರು ಯುವಕರ ಮೃತದೇಹವನ್ನು ಪತ್ತೆ ಮಾಡಲಾಗಿದೆ.
ತಾಲ್ಲೂಕು ಆಡಳಿತ ಮೃತದೇಹದ ಮರಣೋತ್ತರ ಪರೀಕ್ಷೆಗೆ ಸ್ಥಳದಲ್ಲೇ ವ್ಯವಸ್ಥೆ ಮಾಡಿದ್ದು, ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು.