ಶಿವಮೊಗ್ಗ | ಇನ್ಸ್ಟಾಗ್ರಾಂನಲ್ಲಿ ಬಂದ ಜಾಹೀರಾತು ನಂಬಿ 13.33 ಲಕ್ಷ ರೂ. ಕಳೆದುಕೊಂಡ ಉಪನ್ಯಾಸಕ
ಸಾಂದರ್ಭಿಕ ಚಿತ್ರ: PTI
ಶಿವಮೊಗ್ಗ : ಇನ್ಸ್ಟಾಗ್ರಾಂನಲ್ಲಿ ಬಂದ ಜಾಹೀರಾತು ನಂಬಿ ಉಪನ್ಯಾಸಕರೊಬ್ಬರು 13.33 ಲಕ್ಷ ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಇನ್ಸ್ಟಾಗ್ರಾಂ ಜಾಹೀರಾತಿನ ಕೆಳಗಿದ್ದ ಆಡ್ ಬಟನ್ ಕ್ಲಿಕ್ ಮಾಡಿದ ಭದ್ರಾವತಿಯ ಉಪನ್ಯಾಸಕರೊಬ್ಬರು (ಹೆಸರು ಗೌಪ್ಯ) ಪ್ರಿಯಾ ಎಂಬ ಟೆಲಿಗ್ರಾಂ ಅಕೌಂಟ್ಗೆ ಜಾಯಿನ್ ಆಗಿದ್ದರು. ಆರಂಭದಲ್ಲಿ ವಿಡಿಯೋ ರಿವ್ಯೂಗೆ 120 ರೂ. ಹಣ ಕೊಡುವುದಾಗಿ ನಂಬಿಸಿದ್ದ ಪ್ರಿಯಾ, ಹಣ ಕಳುಹಿಸಿದ್ದರು. ನಂತರ ವಿವಿಧ ಟಾಸ್ಕ್ ಪೂರೈಸಿದರೆ ಹಣ ನೀಡುವುದಾಗಿ ತಿಳಿಸಿದರು. ಒಂದು ಸಾವಿರ ರೂ. ಹೂಡಿಕೆ ಮಾಡಿ ಟಾಸ್ಕ್ ಪೂರೈಸಿದ್ದಕ್ಕೆ ಉಪನ್ಯಾಸಕನ ಖಾತೆಗೆ 1300 ರೂ. ಹಣ ಬಂದಿತ್ತು. ನಂಬಿಕೆ ಹೆಚ್ಚಾದ ಹಿನ್ನೆಲೆ ಉಪನ್ಯಾಸಕ ವಿವಿಧ ಹಂತದಲ್ಲಿ ಟಾಸ್ಕ್ ಪೂರೈಸಲು 13.33 ಲಕ್ಷ ರೂ. ಹೂಡಿಕೆ ಮಾಡಿದ್ದರು ಎನ್ನಲಾಗಿದೆ.
ಟಾಸ್ಕ್ ಪೂರೈಸಿದ್ದರೂ ಹಣ ಮರಳಿ ಬಾರದೆ ಇರುವುದನ್ನು ಉಪನ್ಯಾಸಕ ವಿಚಾರಿಸಿದ್ದರು. ಈ ವೇಳೆ, ವಂಚಕರು ಬ್ಯಾಂಕ್ ಖಾತೆ ಫ್ರೀಜ್ ಆಗಿದೆ. ಹಣ ವರ್ಗಾವಣೆಗೆ ದೊಡ್ಡ ಮೊತ್ತದ ಆಕ್ಟಿವೇಷನ್ ಚಾರ್ಜ್ ಪಾವತಿಸಬೇಕು, ಸೇರಿದಂತೆ ನಾನಾ ಕಾರಣ ಹೇಳಿದ್ದರು. ಇದರಿಂದ ಅನುಮಾನಗೊಂಡ ಉಪನ್ಯಾಸಕ ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.