ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಣಂತಿ ಮೃತ್ಯು

ಸಾಂದರ್ಭಿಕ ಚಿತ್ರ pinterest.com
ಶಿವಮೊಗ್ಗ : ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ, ಹೆರಿಗೆಯಾದ ಕೆಲವೇ ಗಂಟೆಗಳಲ್ಲಿಯೇ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಶಂಶೀಪುರ ನಿವಾಸಿಯಾದ ಕವಿತಾ (24) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ಜಿಲ್ಲೆಯ ಮೈದೊಳಲು ಮಲ್ಲಾಪುರ ಗ್ರಾಮದಲ್ಲಿದ್ದ ಕವಿತಾ ಅವರು, ಎರಡನೇ ಹೆರಿಗಾಗಿ ಜ.1ರಂದು ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ಗೆ ದಾಖಲಾಗಿದ್ದರು. ಜ.3ರಂದು ಬೆಳಿಗ್ಗೆ ಕವಿತಾ ಅವರಿಗೆ ಸಹಜ ಹೆರಿಗೆಯಾಗಿತ್ತು. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದರು. ತದನಂತರ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿ ಬಾಣಂತಿ ಕವಿತಾ ಮೃತಪಟಿದ್ದಾರೆ ಎಂದು ತಿಳಿದು ಬಂದಿದೆ.
"ಹೆರಿಗೆಯಾದ ಎರಡು ಗಂಟೆ ನಂತರ, ದಿಢೀರ್ ಆಗಿ ಅವರಲ್ಲಿ ತೀವ್ರ ಸ್ವರೂಪದ ರಕ್ತಸ್ರಾವ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ಸಾಕಷ್ಟು ವೈದ್ಯೋಪಚಾರದ ನಡುವೆಯೂ ಅವರು ಬದುಕುಳಿಯಲಿಲ್ಲ" ಎಂದು ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕರಾದ ಡಾ.ತಿಮ್ಮಪ್ಪ ತಿಳಿಸಿದ್ದಾರೆ.