ಶಿವಮೊಗ್ಗ | ಮಾರಕಾಸ್ತ್ರ, ಖಾರದಪುಡಿಯೊಂದಿಗೆ ದರೋಡೆಗೆ ಹೊಂಚು ಹಾಕಿದ್ದ ಆರೋಪ : ನಾಲ್ವರ ಬಂಧನ
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಮಾರಕಾಸ್ತ್ರ, ಖಾರದ ಪುಡಿ ಹಿಡಿದುಕೊಂಡು ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಕೆಎಸ್ಸಾರ್ಟಿಸಿ ಬಸ್ ಡಿಪೋ ಪಕ್ಕದ ಎಗ್ಸಿಬಿಷನ್ ಗ್ರೌಂಡ್ನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಒಬ್ಬಾತ ಪರಾರಿಯಾಗಿದ್ದಾನೆ ಎಂದು ಎನ್ನಲಾಗಿದೆ.
ಕೆಎಸ್ಸಾರ್ಟಿಸಿ ಬಸ್ ಡಿಪೋ ಪಕ್ಕದ ಭಾಗದಲ್ಲಿ ಓಡಾಡುವವರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ, ಖಾರದ ಪುಡಿ ಎರಚಿ ಚಿನ್ನಾಭರಣ, ನಗದು ದರೋಡೆಗೆ ಹೊಂಚು ಹಾಕಿದ್ದರು ಎಂದು ಆರೋಪಿಸಲಾಗಿದೆ. ಗಸ್ತು ತಿರುಗುತ್ತಿದ್ದ ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಅಖ್ರಿ ಖಾನ್ ಅಲಿಯಾಸ್ ಇಡ್ಲಿ (35), ಮುಶ್ತಾಕ್ ಅಹ್ಮದ್ (32), ಆದಿಲ್ ಪಾಷಾ (23), ಮಾಝ್ ಬೇಗ್ (20) ಎಂಬಾತನನ್ನು ಬಂಧಿಸಲಾಗಿದೆ ತಿಳಿದು ಬಂದಿದೆ.
ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳ ಬಳಿ ಕಬ್ಬಿಣ ರಾಡ್, ಲಾಂಗ್ ಮತ್ತು ಚಾಕು ಪತ್ತೆಯಾಗಿದೆ. 50 ಗ್ರಾಂ ಖಾರದ ಪುಡಿ, ಎರಡು ಮೊಬೈಲ್ ಫೋನ್ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.