ಶಿವಮೊಗ್ಗ | ಪೊಲೀಸ್ ಸಿಬ್ಬಂದಿಗೆ ಹಲ್ಲೆಗೈದ ಪರಾರಿಗೆ ಯತ್ನಿಸಿದ ಆರೋಪಿಯ ಕಾಲಿಗೆ ಗುಂಡಿಕ್ಕಿ ಸೆರೆ
ಶಿವಮೊಗ್ಗ, ಜು.9: ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬನನ್ನು ಕಾಲಿಗೆ ಗುಂಡಿಕ್ಕಿ ಪೊಲೀಸರು ಬಂಧಿಸಿರುವ ಘಟನೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ಯಾಜ್ಯವಳ್ಳಿ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದಿದೆ.
ರಝಾಕ್ ಬಂಧಿತ ಆರೋಪಿ. ಗುಂಡೇಟಿನಿಂದ ಗಾಯಗೊಂಡಿರುವ ಆತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ರಝಾಕ್ ವಿರುದ್ಧ ಕೊಲೆ ಯತ್ನ, ಎನ್ ಡಿಪಿಎಸ್ ಕಾಯ್ದೆ ಅಡಿ ಐದು ಪ್ರಕರಣಗಳಿದ್ದವು. ತಲೆಮರೆಸಿಕೊಂಡಿದ್ದ ಈತನ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅದರಂತೆ ಹೊಳೆಹೊನ್ನೂರು ಠಾಣೆ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ಆತನ ಬಂಧನಕ್ಕೆ ವಿಶೇಷ ತಂಡ ತೆರಳಿದ್ದಾಗ ಈ ಘಟನೆ ನಡೆದಿದೆ.
ಪೊಲೀಸ್ ಸಿಬ್ಬಂದಿ ಅರ್ಜುನ್ ಮೇಲೆ ಆರೋಪಿ ರಝಾಕ್ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದನೆನ್ನಲಾಗಿದೆ. ಅರ್ಜುನ್ ಗಾಯಗೊಂಡ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಠಾಣೆ ಇನ್ ಸ್ಪೆಕ್ಟರ್ ಲಕ್ಷ್ಮಿಪತಿ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆದರೂ ದಾಳಿ ಮುಂದುವರಿಸಿ, ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ರಝಾಕ್ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಯಾಳು ಪೊಲೀಸ್ ಸಿಬ್ಬಂದಿ ಅರ್ಜುನ್ ರನ್ನು ಕೂಡಾ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.