ಶಿವಮೊಗ್ಗ | ಕಳ್ಳು–ಬಳ್ಳಿಗಳ ಅನುಬಂಧದ ವೇದಿಕೆಯಾದ ʼದೀವರ ಸಾಂಸ್ಕೃತಿಕ ವೈಭವʼ
ಶಿವಮೊಗ್ಗ : ಹಸೆ ಚಿತ್ತಾರ, ಬೂಮಣ್ಣಿ ಬುಟ್ಟಿ, ಡೊಳ್ಳು ಕುಣಿತ, ಕೋಲಾಟ, ಅಂಟಿಕೆ-ಪಿಂಟಿಕೆ, ದೀವರ ಕಲೆ ಆಚಾರ ವಿಚಾರ, ಸಂಪ್ರದಾಯಗಳು ಸೇರಿದಂತೆ ಕಳ್ಳು–ಬಳ್ಳಿಗಳ ಅನುಬಂಧದ ವೇದಿಕೆಯಾಗಿ ದೀವರ ಸಾಂಸ್ಕೃತಿಕ ವೈಭವ ರೂಪುಗೊಂಡಿತ್ತು.
ಧೀರ ದೀವರ ಬಳಗ, ಹಳೆಪೈಕ ದೀವರ ಸಂಸ್ಕೃತಿ ಸಂವಾದ ಬಳಗ ಸೇರಿ ನಡೆಸಿದ ಈ ಹಬ್ಬದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿದ್ದ ಈಡಿಗ ಸಮುದಾಯದ ಪ್ರತಿನಿಧಿಗಳು ದಿನವಿಡೀ ನಕ್ಕು, ನಲಿದು ಸಂಭ್ರಮಿಸಿದರು.
ದೀವರ ಸಾಂಸ್ಕೃತಿಕ ವೈಭವದ ಕುರುಹುಗಳಾದ ಡೊಳ್ಳು, ಕೋಲಾಟ, ಅಂಟಿಕೆ–ಪಿಂಟಿಕೆ, ಸಂಪ್ರದಾಯದ ಹಾಡುಗಳು ಸಮಾರಂಭದಲ್ಲಿ ಮೇಳೈಸಿದವು. ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಚಾಲನೆ ನೀಡಿದರು.
ನಂತರ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಕುಮಾರ್ ಬಂಗಾರಪ್ಪ,ನಮ್ಮ ಕಲೆಗೆ ಪ್ರಕೃತಿಯೇ ಸ್ಪೂರ್ತಿ. ಅದಕ್ಕಿಂತ ದೊಡ್ಡದು ಯಾವುದು ಇಲ್ಲ. ಪ್ರಕೃತಿ ದತ್ತ ಸಂಪತ್ತಿನ ಒಳಗೆ ಜಾನಪದ ಕಲೆಗಳು ಮತ್ತು ನಮ್ಮ ಮುಂದಿನ ಪೀಳಿಗೆ ನೋಡುವ ಶಕ್ತಿ, ಯುಕ್ತಿ, ಮಾರ್ಗದರ್ಶನ ಎಲ್ಲವೂ ಪ್ರಕೃತಿಯಲ್ಲಿದೆ ಎಂದರು.
ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಧೀರರ ಸಾಂಸ್ಕೃತಿಕ ವೈಭವದ ಸಂಚಾಲಕ ನಾಗರಾಜ ನೇರಿಗೆ ಪ್ರಾಸ್ತವಿಕವಾಗಿ ಮಾತನಾಡಿದರು. ರಾಜಪ್ಪ ಮಾಸ್ತರ್, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಚಲನಚಿತ್ರ ನಿರ್ದೇಶಕ ರಾಜಗುರು, ಧೀರ ಧೀವರ ಬಳಗದ ಸಂಚಾಲಕ ಸುರೇಶ್ ಬಾಳೆಗುಂಡಿ, ಗಣಪತಿಯಪ್ಪ ಮಡೆನೂರು, ಕಣ್ಣೂರು ಟಾಕಪ್ಪ, ಲಕ್ಷ್ಮೀ ಗಡೆಮನೆ, ಮೋಹನ್ ಚಂದ್ರಗುತ್ತಿ, ತಬಲಿ ಬಂಗಾರಪ್ಪ, ಶ್ರೀಧರ್ ಹುಲ್ತಿಕೊಪ್ಪ, ಗೀತಾಂಜಲಿ ದತ್ತಾತ್ರೇಯ, ಐಎಎಸ್ ಅಧಿಕಾರಿ ಜಿ.ಜಗದೀಶ್, ಪುರುಷೋತ್ತಮ್, ಲಕ್ಷ್ಮಣ್ ಕೊಡಸೆ, ಜಿಪಂ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರಧಾನ :
ಖ್ಯಾತ ಸಮಾಜವಾದಿ ಹೋರಾಟಗಾರ ಈಡೂರು ಪರಶುರಾಮಪ್ಪರ ಪತ್ನಿ ರಾಧಮ್ಮ ಈಡೂರು ಪರಶುರಾಮಪ್ಪ, ಸಮಾಜವಾದಿ ಹೋರಾಟಗಾರ ಬಿ.ಎಸ್.ಪುರುಷೋತ್ತಮ, ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಲಕ್ಷ್ಮಣ್ ಕೊಡಸೆ, ಸಾಮಾಜಿಕ ಹೋರಾಟಗಾರ ರಾಜಪ್ಪ ಮಾಸ್ತರ್ ಮತ್ತು ಮುಡುಬಾದ ನಾಟಿ ವೈದ್ಯ ಈಶ್ವರ ನಾಯ್ಕ್ ಅವರಿಗೆ ಈ ಬಾರಿಯ ಧೀರ ದೀವರು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಮ್ಮ ಸಮಾಜದ ನನ್ನ ತಮ್ಮನೇ ಜಿಲ್ಲೆಗೆ ಸಚಿವರಾಗಿದ್ದಾರೆ. ಇದು ಸಂತೋಷದ ವಿಷಯ. ಅವರಿಂದ ನಮ್ಮ ಸಮಾಜಕ್ಕೆ, ಜಿಲ್ಲೆಗೆ ಸೇವೆ ಆಗಬೇಕು. ಅವರ ಅಧಿಕಾರವಧಿಯಲ್ಲಿ ದೀವರ ಸಮಾಜಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಅವರ ಕೊಡುಗೆ ಸಿಗಲಿ. ಮುಂದಿನ ದಿನಗಳಲ್ಲಿ ಅರ್ಧಕ್ಕೆ ನಿಂತಿರುವ ಸಮಾಜದ ಸಮುದಾಯಗಳ ಭವನಗಳ ಅಭಿವೃದ್ಧಿಯನ್ನು ಸರ್ಕಾರ ಮಾಡಲಿ. ವಿದ್ಯಾರ್ಥಿ ನಿಲಯ, ನಾರಾಯಣಗುರು ವಸತಿ ಶಾಲೆಗಳನ್ನು ಮುಂದುವರೆಸಲಿ. ಮೀಸಲಿನ ಹಕ್ಕುಗಳು ಸಿಗುವಂತಾಗಲಿ.
-ಕುಮಾರ್ ಬಂಗಾರಪ್ಪ, ಮಾಜಿ ಸಚಿವ