ಶಿವಮೊಗ್ಗ | ಗೀತಾ ಶಿವರಾಜ್‌ಕುಮಾರ್ ಈ ಜಿಲ್ಲೆಯ ಮನೆ ಮಗಳು, ಅವರಿಗೆ ಮತ ನೀಡುವ ಮೂಲಕ ಆಶೀರ್ವದಿಸಿ: ಮಧುಬಂಗಾರಪ್ಪ
ಶಿವಮೊಗ್ಗ: 'ಗೀತಾ ಶಿವರಾಜ್‌ಕುಮಾರ್ ಜಿಲ್ಲೆಯ ಮನೆ ಮಗಳು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸೇವಾ ಗುಣ ಇವರಿಗೂ ಇದೆ. ಆದ್ದರಿಂದ, ಜನರು ಅವರಿಗೆ ಮತ ನೀಡುವ ಮೂಲಕ ಆಶೀರ್ವದಿಸಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಮನವಿ ಮಾಡಿದರು.
ಸಾಗರ ತಾಲ್ಲೂಕಿನ ಸಿರಿವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ರಿಪುರಾಂತಕೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2009ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸೋಲು, ಕಪ್ಪು ಚುಕ್ಕೆಯಾಗಿ ಉಳಿದಿದೆ. ಅದನ್ನು ಹೋಗಲಾಡಿಸಲು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಮತ ನೀಡಬೇಕು. ದಿಲ್ಲಿಯಲ್ಲಿ ರೈತರ ಪರ ಧ್ವನಿ ಎತ್ತಲು ಶಕ್ತಿ ತುಂಬಬೇಕಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, 'ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳು ಅಶಕ್ತ ಕುಟುಂಬಗಳಿಗೆ ವರದಾನವಾಗಿವೆ ಎಂದರು.
ರಾಜ್ಯ ಸರ್ಕಾರವು ಜಾರಿ ಮಾಡಿದ ಅನ್ನಭಾಗ್ಯ ಯೋಜನೆಯಿಂದ ಕಡು ಬಡವರು, ಕೃಷಿ ಕೂಲಿಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಅಲ್ಲದೆ ಗೃಹಲಕ್ಷ್ಮಿ ಯೋಜನೆಯಿಂದಾಗಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಸಿಗುತ್ತಿದೆ. ಜೊತೆಗೆ ಗೃಹಜ್ಯೋತಿ ಯೋಜನೆ ಮತ್ತು ಯುವನಿಧಿ ಯೋಜನೆಯಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಬಡವರ ಮುಖದಲ್ಲಿ ಮಂದಹಾಸ ಮೂಡಿಸುವುದೇ ಕಾಂಗ್ರೆಸ್ ಸರ್ಕಾರದ ಆದ್ಯ ಕರ್ತವ್ಯ. ಇದು ಗ್ಯಾರಂಟಿ ಯೋಜನೆಗಳಿಂದ ಸಾಧ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಆಸ್ತಿ ಮಾಡಿರಲಿಲ್ಲ. ಜನರೇ ಅವರ ಆಸ್ತಿಯಾಗಿದ್ದರು. ಅದೇ ಗುಣ ಗೀತಾ ಅವರಿಗೆ ಇದೆ. ಆದ್ದರಿಂದ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಟ ಶಿವರಾಜಕುಮಾರ್ ಮಾತನಾಡಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಅಭಿಮಾನಿ ನಾನು. ಜಿಲ್ಲೆಗೆ ನಟನಾಗಿ ಬಂದಿಲ್ಲ. ಗೀತಾ ಅವರ ಗಂಡನಾಗಿ ಬಂದಿದ್ದೇನೆ. ಗೀತಾ ಮದುವೆ ಆಗುವ ಮುನ್ನ ಈ ಮಣ್ಣಿನಲ್ಲಿ ಜನಿಸಿದವರು. ಇಲ್ಲಿ ಓಡಾಡಿದವರು. ಬಂಗಾರಪ್ಪ ಅವರ ಸೇವಾ ಗುಣ ಅವರಲ್ಲಿಯೂ ಇದೆ. ಗೀತಾ ಅವರು ಗೆದ್ದು ದಿಲ್ಲಿಗೆ ಹೋಗುತ್ತಿದ್ದಾರೆ ಎಂದರೆ ಅದು ನಿಮಗೆ ಹೆಮ್ಮೆ. ಆದ್ದರಿಂದ ಅವರಿಗೆ ಮತ ನೀಡಿ ಹರಸಬೇಕು ಎಂದರು.
ಅದೇ ರೀತಿ ತಾಲ್ಲೂಕಿನ ಪಡವಗೋಡು, ಬೀಮನೇರಿ,- ಕೆಳದಿ, ಮರತ್ತೂರು, ಕಾನಲೆ, ಸೈದೂರು, ಹೀರೆ ನಲ್ಲೂರು ಸೇರಿ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಪ್ರಚಾರ ಸಭೆ ನಡೆಸಲಾಯಿತು.
ಲೋಕಸಭಾ ಚುನಾವಣೆ ವಕ್ತಾರ ಅನಿಲ್ ಕುಮಾರ್ ತಡಕಲ್, ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಕಾಂಗ್ರೆಸ್ ಜಿಲ್ಲಾ ಘಟಕ ಮಹಿಳಾ ಅಧ್ಯಕ್ಷೆ ಅನಿತಾ ಕುಮಾರಿ, ಗ್ರಾಮಾಂತರ ವ್ಯಾಪ್ತಿಯ ಸ್ಥಳೀಯ ಮುಖಂಡರಾದ ಅಣ್ಣಪ್ಪ, ಅಶೋಕ್ ಬರದವಳ್ಳಿ, ಅನಿಲ್ ಗೌಡ, ಮನೋಜ್ ಗುರ್ಲುಗುಂಡಿ, ರಮೇಶ್ ಬರದವಳ್ಳಿ, ಹುಚ್ಚಪ್ಪ, ಈಶ್ವರ್ ನಾಯಕ್, ಸೂರ್ಯ ನಾರಾಯಣ, ಅಶೋಕ್ ಮರಗಿ, ಚಂದ್ರು, ಶಾಂತಕುಮಾರ್, ಪುಷ್ಪಾವತಿ, ಧರ್ಮಪ್ಪ ಕೆಲುವೆ, ರಾಮಪ್ಪ ಗಡೆಮನೆ, ಅಣ್ಣಪ್ಪ ಕಾನಲೆ ಇದ್ದರು.