ರಾಣೆಬೆನ್ನೂರು-ಶಿಕಾರಿಪುರ ಹೊಸ ರೈಲ್ವೆ ಪ್ರಗತಿ | 8 ದಿನದೊಳಗೆ ಸಮಗ್ರ ವರದಿ ನೀಡಲು ವಿ.ಸೋಮಣ್ಣ ಸೂಚನೆ
ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರಕಾರವು ಕಳೆದ ಒಂದು ದಶಕದ ಅವಧಿಯಲ್ಲಿ ರಾಜ್ಯ ರೈಲ್ವೆ ಕ್ಷೇತ್ರದಲ್ಲಿ ಅನೇಕ ಮಹತ್ವ ನಿರ್ಣಯಗಳನ್ನು ಕೈಗೊಂಡು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಿರುವುದು ಎಲ್ಲರಲ್ಲೂ ಸಂತಸ ಮೂಡಿಸಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಜಿಪಂ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾನಗರಗಳಿಂದ ಗ್ರಾಮೀಣ ಪ್ರದೇಶಗಳವರೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಸೈನಿಕರಂತೆ ಹಗಲಿರುಳು ಕಾರ್ಯ ನಿರ್ವ ಹಿಸುತ್ತಿದೆ. ರೈಲ್ವೆ ಕ್ಷೇತ್ರ ಅಸಾಧಾರಣ ಪ್ರಗತಿ ಹಾಗೂ ಕ್ರಾಂತಿಕಾರಿ ಬದಲಾವಣೆಗೆ ಹೊಸಭಾಷ್ಯ ಬರೆದಿದೆ ಎಂದರು.
ರಾಣೆಬೆನ್ನೂರು-ಶಿಕಾರಿಪುರ ಹೊಸ ರೈಲು ಮಾರ್ಗದ ಪ್ರಗತಿಯು ಆಶಾದಾಯಕವಾಗಿಲ್ಲ. ಮುಂದಿನ ಎಂಟು ದಿನಗಳೊಳಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಸಂಬಂಧಿತ ಇಲಾಖಾಧಿಕಾರಿಗಳು ಸಮಗ್ರ ವರದಿ ನೀಡುವಂತೆ ಸೂಚಿಸಿದ ಸಚಿವರು, ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಅಧಿಕಾರಿಗಳು ರೈತರಿಗೆ ಪರಿಹಾರಧನ ಒದಗಿಸುವ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ವ್ಯವಹರಿಸಿ, ಒಂದು ತಿಂಗಳೊಳಗಾಗಿ ಪರಿಹಾರಧನ ವಿತರಿಸಬೇಕೆಂದರು.
ರಾಣೆಬೆನ್ನೂರು-ಶಿಕಾರಿಪುರ ಮಾರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಿರೀಕ್ಷೆಯಂತೆ ಪೂರ್ಣಗೊಂಡಿಲ್ಲ. ಇನ್ನೂ 642ಎಕರೆ ಭೂಪ್ರದೇಶ ಮಾಲಕರಿಂದ ರೈಲ್ವೆ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ತುರ್ತಾಗಿ ಆಗಬೇಕಾಗಿದೆ. ಡಿಸೆಂಬರ್ ಅಂತ್ಯದೊಳಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಸೋಮಣ್ಣ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಂಯುಕ್ತವಾಗಿ ಈ ಕಾರ್ಯದಲ್ಲಿ ಸಮನ್ವಯತೆ ಸಾಧಿಸಿ, ಉದ್ದೇಶಿತ ಯೋಜನೆಯು ಕಾಲಮಿತಿಯಲ್ಲಿ ಪೂರ್ಣಗೊಳಿಸುವಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮನಪಾ ಆಯುಕ್ತ ಕವಿತಾ ಯೋಗಪ್ಪನವರ್ ಮಾತನಾಡಿ, ಉಷಾ ನರ್ಸಿಂಗ್ ಬಳಿಯ ವರ್ತುಲ ನವೀಕರಣಕ್ಕೆ ರೈಲ್ವೆ ಇಲಾಖೆಯಿಂದ ಮಹಾನಗರ ಪಾಲಿಕೆಗೆ ಈಗಾಗಲೇ 2 ಕೋಟಿ ರೂ.ಯನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಅಗತ್ಯವಿರುವ ಇನ್ನೂ 2.50 ಕೋಟಿ ರೂ.ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸೌತ್ ವೆಸ್ಟ್ರನ್ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಶ್ರೀವತ್ಸ, ಡಿಆರ್‌ಎಂ.ಆಶಾ, ಅಗರ್‌ವಾಲ್, ಪ್ರಕಾಶ್‌ಶಾಸ್ತ್ರಿ, ಕ್ರಿಸ್ಟೋಫರ್, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಭಾರತಿಶೆಟ್ಟಿ, ಬಲ್ಕಿಶ್‌ಬಾನು, ಅರುಣ್‌ಕುಮಾರ್, ಧನಂಜಯ ಸರ್ಜಿ, ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ ರೈಲ್ವೆ ಹಾಗೂ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.