ಶಿವಮೊಗ್ಗ | ಸಾಲದ ಕಂತು ಕಟ್ಟದ್ದಕ್ಕೆ ಕಿವಿಯೋಲೆ ಕಸಿದು ಹೊರದಬ್ಬಿದ ಬ್ಯಾಂಕ್ ಸಿಬ್ಬಂದಿ; ವೃದ್ಧೆಯ ಆರೋಪ : ದೂರು ದಾಖಲು

ಸಾಂದರ್ಭಿಕ ಚಿತ್ರ | PTI
ಶಿವಮೊಗ್ಗ : ಸಾಲದ ಕಂತು ಕಟ್ಟಿಲ್ಲವೆಂದು ಬ್ಯಾಂಕ್ನವರು ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯ ಕಿವಿಯೋಲೆ ಕಿತ್ತುಕೊಂಡು ನಿಂದಿಸಿ ಹೊರದಬ್ಬಿದ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ವರದಿಯಾಗಿದೆ.
ತೀರ್ಥಹಳ್ಳಿ ತಾಲೂಕಿನ ಬಿಲ್ಲೇಶ್ವರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಎಸ್.ಚನ್ನವೀರಪ್ಪ ಅವರ ಪತ್ನಿ ಹಾಲಮ್ಮ (86) ಅವರಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಪಿಂಚಣಿ ಹಣ ಬರುತ್ತಿರಲಿಲ್ಲ. ಇದರ ನಡುವೆ ಈ ಹಿಂದೆ ಮನೆ ದುರಸ್ತಿಗೆಂದು ಪಿಂಚಣಿ ಹಣದ ಆಧಾರದ ಮೇಲೆ ಮಾಡಿದ್ದ ಸಾಲದ ಒಂದು ಕಂತು ಕಟ್ಟಿಲ್ಲವೆಂದು ಕಿವಿಯಲ್ಲಿದ್ದ ಓಲೆಯನ್ನು ಪಡೆದು ನಿಂದಿಸಿ ಹೊರದಬ್ಬಿರುವ ಬಗ್ಗೆ ಕೋಣಂದೂರು ಉಪ ಠಾಣೆಯಲ್ಲಿ ದೂರು ದಾಖಲಾಗಿದೆ
ಪಿಂಚಣಿ ಹಣದ ಆಧಾರದ ಮೇಲೆ ಮನೆ ದುರಸ್ತಿಗೆ ಕೋಣಂದೂರಿನ ಬ್ಯಾಂಕ್ವೊಂದರಲ್ಲಿ ಸಾಲ ಪಡೆದಿದ್ದ ವೃದ್ಧೆಗೆ ಕಳೆದ ನಾಲ್ಕು ತಿಂಗಳಿನಿಂದ ಪಿಂಚಣಿ ಹಣ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಸಾಲದ ಕಂತು ಕಟ್ಟಿರಲಿಲ್ಲ. ಹಾಗೆಯೇ ಫೆ.10ರಂದು ಮನೆಯಲ್ಲಿ ರೇಷನ್ ಕೊರತೆಯ ಕಾರಣ ಕಿವಿಯಲ್ಲಿದ್ದ ಓಲೆ, ಚೈನ್ ಅನ್ನು ಅಡವಿಡಲು ಬ್ಯಾಂಕ್ಗೆ ಬಂದಾಗ ಬ್ಯಾಂಕ್ ಸಿಬ್ಬಂದಿ ಓಲೆ, ಚೈನ್ ಪಡೆದು ಹಣ ನೀಡದೆ ಅವಾಚ್ಯವಾಗಿ ಏಕವಚನದಲ್ಲಿ ನಿಂದಿಸಿ ಹೊರದಬ್ಬಿದ್ದಾರೆ ಎಂದು ಆರೋಪಿಸಿ ವೃದ್ಧೆಯ ಮಗಳು ಶಕುಂತಳಾ ದೂರು ನೀಡಿದ್ದಾರೆ.