‘ಮ್ಯಾಕ್ರೋ’ ಪಾಠ; ‘ಟ್ರಿಕಲ್ ಡೌನ್’ ಥಿಯರಿ; ‘ಪಾರದರ್ಶಕತೆ’ ಪ್ರಾಕ್ಟೀಸ್
ಇದು ಸಿದ್ದರಾಮಯ್ಯ ಬಜೆಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶುಕ್ರವಾರದ ದಾಖಲೆ ೧೪ನೇ ಬಜೆಟ್ ಮಂಡನೆಯ ಹೈಲೈಟ್ ಎಂದರೆ, ಅವರು ಬಜೆಟ್ ಭಾಷಣದಲ್ಲಿ ತಮ್ಮ ಸುದೀರ್ಘ ಪೀಠಿಕೆಯನ್ನು ಬಳಸಿಕೊಂಡು, ರಾಜ್ಯದ ಆರ್ಥಿಕ ಸ್ಥಿತಿಯ ಮ್ಯಾಕ್ರೋ ಅಂಶಗಳನ್ನು ಬಿಚ್ಚಿಟ್ಟದ್ದು. ಕಳೆದ ಕೆಲವು ಬಜೆಟ್ಗಳಲ್ಲಿ ಭರಪೂರ ‘ವರದಾನ’ ಘೋಷಣೆ ಗಳನ್ನೇ ಬಜೆಟ್ ಹೈಲೈಟ್ ಎಂದು ಗುರುತಿಸುತ್ತಿದ್ದವರಿಗೆ ಈ ಬಾರಿ ಹೊಸ ಅನುಭವ. ಆರ್ಥಿಕತೆಯ ಬಗ್ಗೆ ತಮಗಿರುವ ಹಿಡಿತ ಎಷ್ಟು ಸಮಗ್ರ ಸ್ವರೂಪದ್ದು ಎಂಬುದನ್ನು ಬಿಚ್ಚಿಡಲು ಸಿದ್ದರಾಮಯ್ಯ ಅವರು ತಮ್ಮ ಈ ಬಜೆಟ್ ಪೀಠಿಕೆಯನ್ನು ಮೀಸಲಿಟ್ಟರು.
ಇದು ಅಲ್ಲಿಗೇ ಸೀಮಿತವಾಗಲಿಲ್ಲ. ಪ್ರತಿಯೊಂದು ವಿಭಾಗಕ್ಕೆ ತನ್ನ ಬಜೆಟ್ನಲ್ಲಿ ಹೊಸ ಪ್ರಕಟಣೆಗಳನ್ನು ಮಾಡುವ ಮುನ್ನ, ೨೦೧೮ರಲ್ಲಿ (ಅವರ ಹಿಂದಿನ ಅವಧಿಯ ಅಂತ್ಯಕ್ಕೆ) ಆ ವಿಭಾಗದ ಪರಿಸ್ಥಿತಿ ಹೇಗಿತ್ತು ಮತ್ತು ಈಗ ಅದು ಮಿಸ್ ಮ್ಯಾನೇಜ್ಮೆಂಟ್ ಕಾರಣಕ್ಕೆ, ಆಡಳಿತ ವೈಫಲ್ಯದ ಕಾರಣಕ್ಕೆ ೨೦೨೩ರ ಹೊತ್ತಿಗೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಅಂಕಿ-ಸಂಖ್ಯೆಗಳ ಸಹಿತ ಬಿಚ್ಚಿಡುತ್ತಾ ಬಂದ ಮುಖ್ಯಮಂತ್ರಿಗಳು, ಈ ವರ್ಷಕ್ಕೆ ಹೊಸ ಯೋಜನೆಗಳನ್ನು ಪ್ರಕಟಿಸುವಾಗ ಬಹಳ ಮುನ್ನೆಚ್ಚರಿಕೆ ವಹಿಸಿರುವುದು ಪ್ರತೀ ಹಂತದಲ್ಲಿ ಎದ್ದು ಕಾಣಿಸುತ್ತಿತ್ತು.
ತಮ್ಮ ಸರಕಾರದ ಗ್ಯಾರಂಟಿಗಳು ಕೇವಲ ಚುನಾವಣಾ ಗಿಮಿಕ್ಗಳಾಗಿರಲಿಲ್ಲ, ಅವು ಬಿಟ್ಟಿ ಭಾಗ್ಯಗಳಲ್ಲ ಎಂಬುದನ್ನು ಸಾಬೀತುಪಡಿಸಲು ಪೀಠಿಕೆಯ ಬಹುಪಾಲು ಭಾಗವನ್ನು ವ್ಯಯಿಸಿದ ಅವರು, ಸಂಪತ್ತಿನ ಅಸಮಾನ ಹಂಚಿಕೆ ಸೃಷ್ಟಿಸುವ ಬೃಹತ್ ಕಂದರವು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ ಎಂದು ಹೇಳುವ ಮೂಲಕ ರಾಜ್ಯದ ಸುಮಾರು 1.3 ಕೋಟಿ ಕುಟುಂಬಗಳಿಗೆ, ಪ್ರತಿ ಯೊಂದು ಕುಟುಂಬಕ್ಕೆ ವಾರ್ಷಿಕ ೪೮,೦೦೦ ರೂ. ನಿಂದ 60,000 ರೂ. ಗಳ ಸಾರ್ವತ್ರಿಕ ಮೂಲ ಆದಾಯ (UBI) ಪರಿಕಲ್ಪನೆಯನ್ನು ಮುಂದಿಟ್ಟು ಅಭಿವೃದ್ಧಿಯ ‘ಕರ್ನಾಟಕ ಮಾದರಿ’ಯನ್ನು ಅನಾವರಣಗೊಳಿಸಿದ್ದು ಕೂಡ ಈ ಬಜೆಟ್ನ ಹೈಲೈಟ್.
ಶ್ವೇತಪತ್ರ
ಹಿಂದಿನ ಸರಕಾರಗಳು ಮಂಜೂರು ಮಾಡಿ, ಪೂರ್ಣಗೊಳಿಸಲು ಬಾಕಿ ಇರುವ ಕಾಮಗಾರಿಗಳ ಪ್ರಮಾಣ 2,55,102 ಕೋಟಿ ರೂ.ಗಳಷ್ಟಿದ್ದು, ಇದು ಬಹುತೇಕ ರಾಜ್ಯದ ಬಜೆಟ್ ಗಾತ್ರದ್ದೇ ಪ್ರಮಾಣದ್ದಾಗಿರುವುದನ್ನು ಬಹಿರಂಗಪಡಿಸುವ ಮೂಲಕ, ಹಿಂದಿನ ಸರಕಾರಗಳ ‘ವರದಾನ’ ಘೋಷಣೆಗಳ ಪೊಳ್ಳುತನವನ್ನು ಅವರು ಬಹಿರಂಗಪಡಿಸಿದ್ದಾರೆ. ಈ ಪ್ರಮಾಣದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಇನ್ನು ಆರು ವರ್ಷಗಳೇ ಬೇಕೆಂಬ ವಾಸ್ತವವನ್ನು ಅವರು ಬಜೆಟ್ ಭಾಷಣದ ಮೂಲಕ ನಾಡಿನ ಮುಂದೆ ಬಿಚ್ಚಿಟ್ಟಿದ್ದಾರೆ. ಹಾಗಾಗಿ ಈ ಬಜೆಟ್, ರಾಜ್ಯದ ಆರ್ಥಿಕ ಸ್ಥಿತಿಗೆ ಒಂದು ಶ್ವೇತಪತ್ರ ಕೂಡ ಹೌದು.
GST ವ್ಯವಸ್ಥೆ ಬಂದ ಬಳಿಕ, ತರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಕೇಂದ್ರ-ರಾಜ್ಯ ಸರಕಾರ ಗಳ ನಡುವೆ ಉಂಟಾಗಿರುವ ಅಸಮತೋಲನವನ್ನೂ ಅವರು ಪಾರದರ್ಶಕವಾಗಿ ಬಿಚ್ಚಿಟ್ಟಿದ್ದಾರೆ. ಇಲ್ಲಿಯ ತನಕ ಭಾರತ ಸರಕಾರವನ್ನು ನಡೆಸುತ್ತಿರುವ NDA ಸರಕಾರಕ್ಕೆ, ಅವರದೇ ರಾಜ್ಯ ಸರಕಾರಗಳಿದ್ದಲ್ಲಿ ಯಾರೂ ಬಾಯಿ ಬಿಟ್ಟು ಮಾತನಾಡುತ್ತಿರಲಿಲ್ಲವಾದರೆ ವಿರೋಧ ಪಕ್ಷಗಳ ಅಧಿಕಾರ ಇರುವಲ್ಲೂ ತಮಿಳುನಾಡು ಬಿಟ್ಟರೆ ಬೇರೆ ರಾಜ್ಯಗಳು ಅಂಕಿ-ಸಂಖ್ಯೆ ಸಹಿತ ಸನ್ನಿವೇಶವನ್ನು ಬಿಚ್ಚಿಟ್ಟದ್ದು ಕಡಿಮೆ. ಈಗ ಸಿದ್ದರಾಮಯ್ಯ ಅದನ್ನು ಇಂಚಿಂಚಾಗಿ ಬಜೆಟ್ ಪೀಠಿಕೆಯಲ್ಲಿ ಬಚ್ಚಿಡುವ ಮೂಲಕ ತಾನು ಏಕೆ ರಾಜ್ಯ ಕಂಡ ಅತ್ಯುತ್ತಮ ಹಣಕಾಸು ಸಚಿವರಲ್ಲಿ ಒಬ್ಬರೆಂದು ಮತ್ತೊಮ್ಮೆ ಸಾಬೀತುಪಡಿಸಿದರು.
ಹೋಲಿಕೆ
ಫೆಬ್ರವರಿಯಲ್ಲಿ, ಚುನಾವಣೆ ಎದುರಿರುವುದು ಗೊತ್ತಿರುವಂತೆಯೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದ ಬಸವರಾಜ ಬೊಮ್ಮಾಯಿ ಅವರು ಹೆಚ್ಚಿನಂಶ ಅತಿಯಾದ ಆತ್ಮವಿಶ್ವಾಸ ತೋರಿಸಿದ್ದರು. ಅವರು ಹೆಚ್ಚೆಂದರೆ ಮೂರು ತಿಂಗಳಿಗೆ ಲೇಖಾನುದಾನ ಪಡೆದು, ಹೊಸ ಸರಕಾರಕ್ಕೆ ಬಜೆಟ್ ಮಂಡನೆಯನ್ನು ವಹಿಸಿಕೊಡಬೇಕಾಗಿತ್ತು. ಅದರ ಬದಲು ಪೂರ್ಣಪ್ರಮಾಣದ ಬಜೆಟ್ ಮಂಡನೆ ಆಗಿ, ಅದರ ಚರ್ಚೆ-ಅಂಗೀಕಾರವೂ ನಡೆಯಿತು. ಈಗ ಹೊಸ ಸರಕಾರ ತನ್ನ ನಿಲವುಗಳಿಗೆ ತಕ್ಕಂತಹ ಹೊಸ ಬಜೆಟ್ ಮಂಡಿಸಿದೆ. ವರ್ಷಕ್ಕೆ 55,000 ಕೋಟಿ ರೂ.ಗಳಷ್ಟು ಹಣ ಗ್ಯಾರಂಟಿಗಳ ಅನುಷ್ಠಾನಕ್ಕೆ ಬೇಕಾಗಿದ್ದ ಹಿನ್ನೆಲೆಯಲ್ಲಿ ಈ ಬಜೆಟ್ ಕುತೂಹಲ ಕೆರಳಿಸಿತ್ತು. ರಾಜ್ಯದ ಆಯ-ವ್ಯಯ ಮತ್ತು ಸಬ್ಸಿಡಿ ಪ್ರಮಾಣಗಳನ್ನು ಗಮನಿಸಿದರೆ ಇದು ಅಂತಹ ದೊಡ್ಡ ಸವಾಲೇನೂ ಆಗಿರಲಿಲ್ಲ. ಅದನ್ನು ಸಿದ್ದರಾಮಯ್ಯ ಈ ಬಜೆಟ್ ಮೂಲಕ ಸಾಬೀತು ಮಾಡಿದ್ದಾರೆ. ಮಾಧ್ಯಮಗಳು, ಪ್ರತಿಪಕ್ಷಗಳ ಸತತ ಗದ್ದಲದಿಂದಾಗಿಯೇ ಈ ‘ಗ್ಯಾರಂಟಿಗೆ ಹಣ ಹೊಂದಿಕೆ’ ದೊಡ್ಡ ಸವಾಲೆಂದು ಬಿಂಬಿತವಾಗಿತ್ತು.
ಬೊಮ್ಮಾಯಿ ಅವರು ಫೆಬ್ರವರಿಯಲ್ಲಿ 2,86,740. 91 ಲಕ್ಷ ರೂ.ಗಳ ವೆಚ್ಚ ಮತ್ತು 2,26,159.81 ರೂ.ಗಳ ಜಮೆ ಇರುವ, 402.43 ಕೋಟಿ ಮಿಗತೆಯ ಬಜೆಟ್ ಮಂಡಿಸಿದ್ದರು. ಈಗ ಸಿದ್ದರಾಮಯ್ಯ 3,05,306.03 ಲಕ್ಷ ರೂ.ಗಳ ವೆಚ್ಚ ಮತ್ತು 2,38,659.81 ರೂ.ಗಳ ಜಮೆ ಇರುವ, 12,522.69 ಕೋಟಿ ರೂ. ಆದಾಯ ಕೊರತೆಯ ಬಜೆಟ್ ಮಂಡಿಸಿದ್ದಾರೆ. ಅಂದರೆ, ಸ್ಥೂಲವಾಗಿ ಸುಮಾರು 13,000 ಕೋಟಿ ರೂ.ಗಳಷ್ಟು ಆದಾಯ ಕೊರತೆ ಕಾಣಸಿಕೊಂಡಿದೆ. ಇದು ರಾಜ್ಯದ ತಲಾ ಆದಾಯದ (GSDP) ಶೇ.0.49 ಆಗಿದ್ದು, ಕರ್ನಾಟಕ ಹಣಕಾಸು ಜವಾಬ್ದಾರಿ ಕಾಯ್ದೆಯ (ಏಈಖಂ) ಮಿತಿಗಳ ಒಳಗೇ ಇದೆ. ಇದರಲ್ಲಿ ಸಾಲ ಮತ್ತಿತರ ಬಂಡವಾಳ ಜಮೆಯ ಪಾಲು 86,045.50 ಕೋಟಿ ರೂ. ಬೊಮ್ಮಾಯಿಯವರ ಬಜೆಟ್ನಲ್ಲಿ ಅದು ತೀರಾ ಕಡಿಮೆಯೇನೂ ಇರಲಿಲ್ಲ. ಅದು ರೂ. 77,977.50 ಕೋಟಿಯಷ್ಟಿತ್ತು. ಆ ಮಟ್ಟಿಗೆ ಗ್ಯಾರಂಟಿಗಳ ಜವಾಬ್ದಾರಿಯ ಹೊರತಾಗಿಯೂ ಸಿದ್ದರಾಮಯ್ಯನವರು ರಾಜ್ಯಕ್ಕೆ ಎಲ್ಲರೂ ನಿರೀಕ್ಷಿಸಿದಷ್ಟು ದೊಡ್ಡ ಹೊರೆಯನ್ನೇನೂ ಹೊರಿಸಿಲ್ಲ. ರಾಜ್ಯದ ಒಟ್ಟು ಸಾಲ ಬೊಮ್ಮಾಯಿ ಬಜೆಟ್ ಅನ್ವಯ 4,80,759.80 ಕೋಟಿ ರೂ. ಆದರೆ ಸಿದ್ದರಾಮಯ್ಯ ಬಜೆಟ್ ಅನ್ವಯ ಅದು 4,88,827.80 ಕೋಟಿ ರೂ.
ಹಣಕಾಸಿನ ಮರು ಹೊಂದಾಣಿಕೆ
ಸರಕಾರ ಇಲಾಖಾವಾರು ಹಂಚಿಕೆಗಳಲ್ಲೂ ಹಿಂದಿನ ಬೊಮ್ಮಾಯಿ ಅವರ ಸರಕಾರದ ಹಂಚಿಕೆಗಳಿಗೆ ಹೋಲಿಸಿದರೆ ದೊಡ್ಡ ಏರುಪೇರುಗಳನ್ನು ಮಾಡಿಲ್ಲ (ಬಾಕ್ಸ್ ನೋಡಿ). ಯಾಕೆಂದರೆ, ಬಜೆಟ್ ಮೇಲಿನ ಚರ್ಚೆಯ ವೇಳೆ ದೊಡ್ಡ ಆಕ್ಷೇಪಗಳು ಅಲ್ಲಿಂದಲೇ ಹೊರಡಬಹುದು ಎಂಬುದನ್ನು ಮುಖ್ಯಮಂತ್ರಿಗಳು ತಿಳಿಯದವರೇನಲ್ಲ. ಎಲ್ಲ ಹಂಚಿಕೆಗಳನ್ನು ಬಹುತೇಕ ಹಳೆಯ ಪ್ರಮಾಣದಲ್ಲೇ ಇರಿಸಿಕೊಂಡು, ಗ್ಯಾರಂಟಿ ಅನುಷ್ಠಾನಕ್ಕೆ ಬೇಕಾದ ಹೆಚ್ಚುವರಿ ಸಂಪನ್ಮೂಲಕ್ಕೆ ಮಾತ್ರ ತಲೆ ಕೆಡಿಸಿಕೊಳ್ಳಲಾಗಿದೆ. ಸರಕಾರ ಅಧಿಕಾರಕ್ಕೆ ಬಂದು ಇನ್ನೂ ತಿಂಗಳು ಪೂರೈಸುತ್ತಿದೆಯಾದುದರಿಂದ ಇದು ಸರಿಯಾದ ನಿರ್ಧಾರ. ಮುಂದಿನ ವರ್ಷದ ಹೊತ್ತಿಗೆ ತನ್ನ ನಿಲುವುಗಳಿಗೆ ತಕ್ಕಂತೆ ಕಾರ್ಯಕ್ರಮ ಅನುಷ್ಠಾನ ಮಾಡುವುದಕ್ಕೆ ಸಾಕಷ್ಟು ಸಮಯ ಅವರಿಗಿದೆ.
ಸರಕಾರ ಇಲಾಖಾವಾರು ಸಬ್ಸಿಡಿಗಳಲ್ಲಿ ಮಾಡಿರುವ ಹಂಚಿಕೆಗಳನ್ನು ಗಮನಿಸಿದರೆ, ಬೊಮ್ಮಾಯಿ ಸರಕಾರ ಮಾಡಿರುವ ಹಂಚಿಕೆಯಲ್ಲಿ ದೊಡ್ಡ ಏರುಪೇರುಗಳೇನೂ ಆಗಿಲ್ಲ. (ಬಾಕ್ಸ್ ನೋಡಿ). ಗಮನಾರ್ಹ ವಾಗಿ ಹಂಚಿಕೆ ಕಡಿಮೆ ಆಗಿರುವುದು ಕೃಷಿ, ಸಹಕಾರ, ಸಮಾಜ ಕಲ್ಯಾಣ, ವಸತಿ ಇಲಾಖೆಗಳಿಗೆ. ಗಮನಾರ್ಹವಾಗಿ ಹೆಚ್ಚಳ ಆಗಿರುವುದು ಒಳಾಡಳಿತ ಮತ್ತು ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಇಂಧನ ಇಲಾಖೆಗಳಿಗೆ. ಇದಕ್ಕೆ ಕಾರಣಗಳು ಸ್ವಯಂವೇದ್ಯ.
ಅದೇ ರೀತಿ ತೆರಿಗೆ ಸಂಗ್ರಹದಲ್ಲೂ ಗಮನಾರ್ಹ ಬದಲಾವಣೆಗಳನ್ನು ಮಾಡಿಲ್ಲ. ವಾಣಿಜ್ಯ ತೆರಿಗೆಗಳಲ್ಲಿ ಬೊಮ್ಮಾಯಿ ಸರಕಾರ 92,000 ಕೋಟಿ ರೂ.ಸಂಗ್ರಹ ಗುರಿ ಹೊಂದಿದ್ದರೆ, ಈ ಸರಕಾರ 1,01,000 ಕೋಟಿ ರೂ. ಸಂಗ್ರಹದ ಗುರಿ ಹೊಂದಿದೆ. ನೋಂದಣಿ- ಮುದ್ರಾಂಕ ಇಲಾಖೆಯಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸುವ ಮೂಲಕ ಬೊಮ್ಮಾಯಿ ಅವರಿಗಿಂತ 6,000 ಕೋಟಿ ಹೆಚ್ಚುವರಿ ಆದಾಯ (25,000 ಕೋಟಿ ರೂ.) ಸಂಗ್ರಹಿಸುವ ಗುರಿ ವಿಧಿಸಲಾಗಿದೆ. ಸಾರಿಗೆ ಇಲಾಖೆಯಲ್ಲಿ 1,000 ಕೋಟಿ ರೂ. ಮತ್ತು ಗಣಿ ಇಲಾಖೆಯಲ್ಲಿ ಬೊಮ್ಮಾಯಿ ಅವರಿಗಿಂತ 1,500 ಕೋಟಿ ರೂ. ಹೆಚ್ಚು ಸಂಗ್ರಹದ ಗುರಿ ಹಾಕಿಕೊಳ್ಳಲಾಗಿದೆ.
ಸಬ್ಸಿಡಿ ಮರುಹೊಂದಾಣಿಕೆ, ಸಾಲ ಮತ್ತು ಇಲಾಖಾವಾರು ಹಂಚಿಕೆಗಳಲ್ಲಿ ಪುಟ್ಟ ಏರುಪೇರುಗಳ ಮೂಲಕವೇ ಐದು ಗ್ಯಾರಂಟಿಗಳಿಗೆ ಹಣಕಾಸಿನ ಹೊಂದಾಣಿಕೆ ಮಾಡುವ ಮೂಲಕ ಸಿದ್ದರಾಮಯ್ಯ ಅವರ ಹಣಕಾಸು ನಿರ್ವಹಣೆಯ ಅನುಭವ ಮತ್ತು ಚತುರತೆಗಳು ಒರೆಗಲ್ಲಿನ ಪರೀಕ್ಷೆಗೆ ಒಳಗಾಗಿ ಯಶಸ್ಸು ಕಂಡಿವೆ. ಇದು ಬಜೆಟ್ ಮೇಲಿನ ಚರ್ಚೆಗಳ ವೇಳೆ ಪ್ರತಿಪಕ್ಷಗಳಿಗೆ ನಿರಾಶೆ ತರಬಹುದು.
ಹೊಸ ಯೋಜನೆಗಳು
ಸರಕಾರದ ಬೊಕ್ಕಸಕ್ಕೆ ಹೊರೆ ಆಗಬಲ್ಲ ಯಾವುದೇ ಹೊಸ ಯೋಜನೆಗಳನ್ನು ಮುಖ್ಯಮಂತ್ರಿಗಳು ಪ್ರಕಟಿಸಲಿಲ್ಲ; ಜನರ ಮೇಲಿನ ಹೊರೆಯನ್ನೂ ಗಮನಾರ್ಹವಾಗಿ ಹೆಚ್ಚಿಸಲಿಲ್ಲ. ಆದರೆ ಪ್ರತಿಯೊಂದು ಇಲಾಖೆಗೆ ಸಂಬಂಧಿಸಿ ಹಿಂದಿನ ಸರಕಾರದ ಅವಧಿಯಲ್ಲಿ ನಡೆದ ದುರಾಡಳಿತಗಳನ್ನು, ವೈಫಲ್ಯಗಳನ್ನು ಅಂಕಿಸಂಖ್ಯೆಗಳ ಸಮೇತ ಬಿಚ್ಚಿಡುವುದನ್ನು ಮರೆಯಲಿಲ್ಲ.
ಹಿಂದಿನ ಬಜೆಟ್ಗಳಿಗೆ ಎದುರುಬದುರಾಗಿ ತನ್ನ ಬಜೆಟನ್ನು ಇರಿಸಿ ಹೋಲಿಸಿ ನೋಡಿ, ತಮ್ಮ ಬಜೆಟ್ನ ಪ್ರತಿಯೊಂದೂ ಅಂಶಗಳನ್ನು ಅನುಷ್ಠಾನ ಮಾಡಲಾಗು ವುದು. ಹಾಗಾಗಿ ತನ್ನದು ‘ಅಭಿವೃದ್ಧಿ ಗ್ಯಾರಂಟೀಡ್ ಬಜೆಟ್’ ಎಂದು ಹೇಳಿ ಅವರು ತನ್ನ ಸುದೀರ್ಘ ಭಾಷಣಕ್ಕೆ ಪೂರ್ಣವಿರಾಮ ಹಾಕಿದ್ದರು. ಅರ್ಧ ಹಾದಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವುದು ಆದ್ಯತೆ ಎಂದು ಪ್ರಕಟಸುವ ಮೂಲಕ ಸಿದ್ದರಾಮಯ್ಯ ಪ್ರತಿಪಕ್ಷಗಳ ಬಾಯಿಯನ್ನೂ ಮುಚ್ಚಿಸಿದಂತಾಗಿದೆ. ಯಾಕೆಂದರೆ ಅದನ್ನೆಲ್ಲ ಪ್ರಕಟಿಸಿದವರೇ ಅವರು !
ರೈತರಿಗೆ ಹೊಡೆತ ನೀಡಿರುವ APMC ಕಾಯ್ದೆ ರದ್ದತಿಯನ್ನು ಈ ಬಜೆಟ್ ಮೂಲಕ ಪ್ರಕಟಿಸಿದ ಸಿದ್ದರಾಮಯ್ಯ, ಇಂದಿರಾ ಕ್ಯಾಂಟೀನ್ ಬಲವರ್ಧನೆ, ಅನುಗ್ರಹ ಇತ್ಯಾದಿ ತಮ್ಮ ಹಿಂದಿನ ಆಡಳಿತಾವಧಿಯ ಕೆಲವು ಜನಪ್ರಿಯ ಕಾರ್ಯಕ್ರಮಗಳಿಗೆ ಮತ್ತೆ ಬಲ ನೀಡುವ ಇರಾದೆಯನ್ನು ಪ್ರಕಟಿಸಿದರು. ಆದರೆ, ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣ, ಬಂದರು ಇತ್ಯಾದಿಗಳ ಅಭಿವೃದ್ಧಿಯಲ್ಲಿ, ಕೃಷಿ-ತೋಟಗಾರಿಕೆ, ಮೀನುಗಾರಿಕೆಯಂತಹ ರಂಗಗಳಲ್ಲಿ ಖಾಸಗೀಕರಣದ ಧಾವಂತದಂತಹ ಹಾಲೀ ಸನ್ನಿವೇಶದಲ್ಲಿ ಸರಕಾರ ಹೊಸದಾಗಿ ತನ್ನ ನೀತಿಗಳನ್ನು ಹೇಗೆ ರೂಪಿಸಿಕೊಳ್ಳಲಿದೆ ಎಂಬುದು ಈ ಸರಕಾರದ ‘ಸಮಪಾಲು- ಸಮಬಾಳು’ ಸಿದ್ಧಾಂತಕ್ಕೆ ದಿಕ್ಸೂಚಿಗಳಾಗಲಿವೆ. ಕ್ಯಾಪೆಕ್ಸ್ ಹೂಡಿಕೆ ಗಳಲ್ಲಿ, ಕೃಷಿ ಚಟುವಟಿಕೆಗಳಲ್ಲಿ ಖಾಸಗಿಯವರ ಪಾತ್ರ ಅಸಹಜವನ್ನಿಸುವಷ್ಟು ಹಿಗ್ಗುತ್ತಿರುವುದೇ ದೇಶದಲ್ಲಿ ಆರ್ಥಿಕ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತಿ ರುವುದು. ಆ ನಿಟ್ಟಿನಲ್ಲಿ ಸರಕಾರದ ನಿಲುವುಗಳನ್ನು ಕಾದು ನೋಡಬೇಕಿದೆ. ಅದಕ್ಕೆ ಕ್ರಿಯಾ ಯೋಜನೆಗಳನ್ನು ರೂಪಿಸುವುದಾಗಿ ಬಜೆಟ್ ಹೇಳಿದೆ. ಬಾಕಿ ಉಳಿದಿರುವ, ಅರೆಬರೆ ಆಗಿರುವ ಕಾಮಗಾರಿಗಳನ್ನು-ಕಾರ್ಯಕ್ರಮಗಳನ್ನು ತುದಿ ಮುಟ್ಟಿಸುವ ಕೆಲಸಕ್ಕೆ ಸಿದ್ದರಾಮಯ್ಯ ಅವರು ಆದ್ಯತೆ ನೀಡಿರುವುದು ಬಹಳ ಸೆನ್ಸಿಬಲ್ ಆದ ತೀರ್ಮಾನ.
ಬಜೆಟ್ ಮಂಡನೆ ಸರಕಾರದ ಗ್ಯಾರಂಟಿಗಳ ಮೇಲೆ ಅತಿಯಾದ ಅವಲಂಬನೆ ಆಗದಂತೆ ಎಚ್ಚರ ವಹಿಸಿರುವ ಸಿದ್ದರಾಮಯ್ಯ ಅವರು ನೀರಾವರಿ, ದುರ್ಬಲ ವರ್ಗಗಳ ಕಲ್ಯಾಣ, ಶಿಕ್ಷಣ, ಆರೋಗ್ಯ, ಗ್ರಾಮೀಣ ಮತ್ತ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಗಮ ನಾರ್ಹವಾದ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದು, ಬಜೆಟ್ ಗಾತ್ರದಲ್ಲಿ ದೊಡ್ಡ ಕಾರ್ಯಕ್ರಮಗಳಲ್ಲದಿದ್ದರೂ, ಅವೆಲ್ಲವೂ ಕೂಡ ಹಿಂದಿನ ಸರಕಾರದ ನಿಲುವು-ಚಿಂತನಕ್ರಮಗಳಿಗೆ ಹೋಲಿಸಿದರೆ ಸಂಪೂರ್ಣ ಹೊಸ ಹಾದಿಯಲ್ಲಿರು ವುದು ಕಾಣಿಸುತ್ತದೆ. ಹೆಚ್ಚಿನಂಶ ಇವಕ್ಕೆಲ್ಲ ಮುಂದಿನ ಬಜೆಟ್ ಹೊತ್ತಿಗೆ ಸ್ಥೂಲ ರೂಪ ಸಿಗಬಹುದು. ಒಟ್ಟಿನಲ್ಲಿ, ಬಹಳ ಕಾಲದ ಬಳಿಕ ಒಂದು ಸೆನ್ಸಿಬಲ್, ಪ್ರಾಕ್ಟಿಕಲ್ ಮತ್ತು ಚಲಿಸ ಬೇಕಾದ ದಿಕ್ಕಿನ ಸ್ಪಷ್ಟತೆ ಇರುವ ಬಜೆಟ್ ಒಂದು ಕಾಣಸಿಕ್ಕಿತು.