5 ವರ್ಷದಲ್ಲಿ 20 ಬಾರಿ ಕುಸಿದ ಸಿಲ್ಕ್ಯಾರಾ ಸುರಂಗ!
Photo: twitter.com/cgtnamerica
ಡೆಹ್ರಾಡೂನ್: ಉತ್ತರಕಾಶಿಯ ಸಿಲ್ಕ್ಯಾರಾ- ಬಾರಾಕೋಟ್ ಸುರಂಗ ನವೆಂಬರ್ 12ರಂದು ಭಾಗಶಃ ಕುಸಿದು 41 ಮಂದಿ ಕಾರ್ಮಿಕರು 17 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಮಂಗಳವಾರ ಅವರೆಲ್ಲರನ್ನೂ ಯಶಸ್ವಿಯಾಗಿ ಹೊರಕ್ಕೆ ಕರೆತರಲಾಗಿತ್ತು. ಆದರೆ ಈ ಸುರಂಗ ಕುಸಿದಿರುವುದು ಇದೇ ಮೊದಲಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಸುಮಾರು 4.5 ಕಿಲೋಮಿಟರ್ ಉದ್ದದ ಎರಡು ಲೇನ್ ಗಳ ಸುರಂಗ ಚಾರ್ಧಾಮಾ ಸರ್ವಋತು ಸಂಪರ್ಕ ರಸ್ತೆ ಯೋಜನೆಯ ಭಾಗವಾಗಿದ್ದು, ಕಳೆದ ಐದು ವರ್ಷಗಳಲ್ಲಿ ಇಂಥ ಸರಣಿ ಘಟನಾವಳಿಗಳಿಗೆ ಸಾಕ್ಷಿಯಾಗಿದೆ.
"ಸುಮಾರು 19-20 ಸಣ್ಣ ಅಥವಾ ಮಧ್ಯಮ ಮಟ್ಟದ ಕುಸಿತಗಳು ಈ ಸುರಂಗ ನಿರ್ಮಾಣದ ಅವಧಿಯಲ್ಲಿ ಸಂಭವಿಸಿವೆ" ಎಂದು ಸುರಂಗಮಾರ್ಗ ನಿರ್ಮಾಣ ಯೋಜನೆಯ ಉಸ್ತುವಾರಿ ಹೊಂದಿರುವ ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಆಡಳಿತ ಮತ್ತು ಹಣಕಾಸು ನಿರ್ದೇಶಕ ಅಂಶು ಮನೀಶ್ ಖಲ್ಕೊ ಹೇಳಿದ್ದಾರೆ.
ಇಲ್ಲಿ ಕುಸಿತ ಸಾಮಾನ್ಯ ಎಂದ ಅವರು, ಪ್ರತಿ ಸುರಂಗ ನಿರ್ಮಾಣ ಕಾಮಗಾರಿಯಲ್ಲೂ ಇಂಥ ಘಟನೆಗಳು ನಡೆಯುತ್ತವೆ. ಆದರೆ ಈ ಬಾರಿ ಕಾರ್ಮಿಕರು ಸಿಲುಕಿಕೊಂಡದ್ದು ದುರಾದೃಷ್ಟ ಎಂದರು. ಸಿಲ್ಕ್ಯಾರಾಗಿಂತ ಹೆಚ್ಚು ಬಾರಾಕೋಟ್ ಭಾಗದಲ್ಲಿ ಹೆಚ್ಚಿನ ಕುಸಿತ ಸಂಭವಿಸಿದೆ. ಸಿಲ್ಕ್ಯಾರಾ ತುದಿಯ 160-260 ಮೀಟರ್ ಭಾಗವನ್ನು ರೆಡ್ ಝೋನ್ ಆಗಿ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.