ಗಾಯಕ ಹನಿಸಿಂಗ್, ಪತ್ನಿ ಶಾಲಿನಿ ವಿಚ್ಛೇದನಕ್ಕೆ ಕೋರ್ಟ್ ಅಸ್ತು
Photo: twitter.com/UpdateChaser
ಹೊಸದಿಲ್ಲಿ: ಖ್ಯಾತ ಗಾಯಕ ಹನಿ ಸಿಂಗ್ ಮತ್ತು ಪತ್ನಿ ಶಾಲಿನಿ ತಲ್ವಾರ್ ಅವರ ವಿಚ್ಛೇದನಕ್ಕೆ ದೆಹಲಿ ಕೋರ್ಟ್ ಒಪ್ಪಿಗೆ ನೀಡಿದೆ. ಸುಮಾರು ಒಂದು ವರ್ಷದಿಂದ ಈ ವ್ಯಾಜ್ಯ ನ್ಯಾಯಾಲಯದಲ್ಲಿತ್ತು. ಖ್ಯಾತ ಗಾಯಕನ ವಿರುದ್ಧ ಶಾಲಿನಿ ತಲ್ವಾರ್, ಗೃಹಹಿಂಸೆಯ ಆರೋಪ ಹೊರಿಸಿ ನ್ಯಾಯಾಲಯದ ಕಟ್ಟೆ ಏರಿದ್ದರು.
ಸಾಕೇತ್ ಕೋರ್ಟ್ನ ಪ್ರಧಾನ ನ್ಯಾಯಾಧೀಶ (ಕುಟುಂಬ ನ್ಯಾಯಾಲಯ) ಪರಮಜೀತ್ ಸಿಂಗ್ ಅವರು, ಇಬ್ಬರ ನಡುವಿನ ಎಲ್ಲ ವ್ಯಾಜ್ಯಗಳನ್ನು ಬಗೆಹರಿಸುವ ಒಪ್ಪಂದದ ಬಳಿಕ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದರು.
ಎಲ್ಲ ವ್ಯಾಜ್ಯಗಳನ್ನು ಬಗೆಹರಿಸಿಕೊಂಡು ಒಂದು ಕೋಟಿ ರೂಪಾಯಿ ಪರಿಹಾರಧನ ನೀಡುವ ಒಪ್ಪಂದಕ್ಕೆ ಕಳೆದ ವರ್ಷ ಬರಲಾಗಿತ್ತು. ಈ ಹಿನ್ನೆಲೆಯಲ್ಲಿ ಗಾಯಕನ ವಿರುದ್ಧದ ಎಲ್ಲ ಪ್ರಕರಣಗಳನ್ನು ಪತ್ನಿ ವಾಪಾಸು ಪಡೆದಿದ್ದಾರೆ. ಹನಿ ಸಿಂಗ್ ಜತೆ 13 ವರ್ಷಗಳಿಂದ ಶಾಲಿನಿ ತಲ್ವಾರ್ ಸಂಸಾರ ಸಾಗಿಸಿದ್ದರು.
2011ರ ಜನವರಿಯಲ್ಲಿ ವಿವಾಹವಾಗಿದ್ದ ಇವರು, 2022ರ ಸೆಪ್ಟೆಂಬರ್ ನಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ನ್ಯಾಯಾಧೀಶರಿಗೆ ಸ್ಪಷ್ಟನೆ ನೀಡಿದ್ದ ಹನಿ ಸಿಂಗ್, ಮುಂದೆ ಪತ್ನಿಯ ಜತೆ ಬಾಳ್ವೆ ನಡೆಸುವ ಯಾವುದೇ ಅವಕಾಶ ಇಲ್ಲ ಎಂದು ಹೇಳಿದ್ದರು. ಹನಿಸಿಂಗ್ ಪರವಾಗಿ ವಕೀಲ ಇಶಾನ್ ಮುಖರ್ಜಿ ವಾದ ಮಂಡಿಸಿದ್ದರು.