ನೇಹಾ ಸಾವಿಗೆ ಕೋಮು ಬಣ್ಣ ಬಳಿದು ರಾಜಕೀಯ ಉದ್ದೇಶಕ್ಕೆ ಬಳಸುವುದು ಕೊಲೆಯಷ್ಟೇ ಘೋರ ಅಪರಾಧ: ನಟ ಕಿಶೋರ್
Photo: Kishore Kumar Huli (FB)
ಬೆಂಗಳೂರು, ಎ.21: ಬಾಳಿ ಬದುಕಬೇಕಾದ ಜೀವ ನೇಹಾಗೆ ನಡೆದದ್ದು ನಿಜಕ್ಕೂ ಅಕ್ಷಮ್ಯ ಅಪರಾಧ. ಒಂದು ಪ್ರಗತಿಶೀಲ ಸಮಾಜವಾಗಿ ನಮ್ಮೆಲ್ಲರ ಸೋಲು. ಆದರೆ ಈ ಕೊಲೆಯನ್ನು ಕೋಮು ಬಣ್ಣ ಬಳಿದು ಜನರಲ್ಲಿ ದ್ವೇಷ ಹೆಚ್ಚಿಸಿ ರಾಜಕೀಯ ಉದ್ದೇಶಕ್ಕೆ ಬಳಸುವುದು ಕೊಲೆಯಷ್ಟೇ ಘೋರ ಅಪರಾಧ ಎಂದು ಬಹುಭಾಷಾ ನಟ ಕಿಶೋರ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಅವರು, ಕೊಲೆಯಂತಹ ನೋವಿನ ಕ್ಷಣದಲ್ಲೂ ಅದರಲ್ಲಿ ಹಿಂದೂ, ಮುಸ್ಲಿಮ್ ಮಾಡುವುದು ಎಷ್ಟು ಸರಿ? ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ? ಎಂದು ಆಕ್ಷೇಪಿಸಿರುವ ಕಿಶೋರ್, ದಿನಕ್ಕೆ 78 ಕೊಲೆಗಳಾಗುವ, ಮಹಿಳೆಯರ ವಿರುದ್ಧ ದಿನಕ್ಕೆ 1,224 ಅಪರಾಧಗಳಾಗುವ ನಾಡಿನಲ್ಲಿ ಎಷ್ಟು ಹಿಂದೂ, ಎಷ್ಟು ಕ್ರೈಸ್ತ ಅಪರಾಧಿಗಳು ? ಹಾಗೆಂದರೆ ಆ ಧರ್ಮದ ನಾವೆಲ್ಲರೂ ಅಪರಾಧಿಗಳೇ? ಎಂದು ಪ್ರಶ್ನಿಸಿದ್ದಾರೆ.
ಹಾಗೆ ನೋಡಿದರೆ ಎಷ್ಟು ಅಂತರ್ಧರ್ಮೀಯ ಜೋಡಿಗಳು ಅನ್ಯೋನ್ಯವಾಗಿ ಬಾಳುತ್ತಿಲ್ಲ? ಅದಕ್ಕೆ ಆ ಧರ್ಮಗಳೂ, ಅದರ ಜನರೂ ಜವಾಬ್ದಾರಿಯೇ ?
ಅಪರಾಧಿಗೆ ನ್ಯಾಯ ಕೊಡಿಸಲು ಶ್ರಮಿಸುವುದನ್ನು ವಿರೋಧ ಪಕ್ಷವಾಗಲೀ ಯಾರಾಗಲೀ ಮಾಡಿದರೆ ಒಪ್ಪಲೇಬೇಕು. ಅದು ಅವರ ಕರ್ತವ್ಯ. ಆದರೆ ಒಡೆದಾಳುವ ಈ ಧರ್ಮಾಂಧ ಜನ ನೇಹಾ ಸಾವನ್ನು ಕೋಮು ಬಣ್ಣ ಬಳಿದು ಜನರಲ್ಲಿ ದ್ವೇಷ ಹೆಚ್ಚಿಸಿ ರಾಜಕೀಯ ಉದ್ದೇಶಕ್ಕೆ ಬಳಸುವುದು ಕೊಲೆಯಷ್ಟೇ ಘೋರ ಅಪರಾಧ ಎಂದಿದ್ದಾರೆ ಕಿಶೋರ್ ಕುಮಾರ್.
ಮಹಿಳೆಯರ ವಿರುದ್ಧ ದಿನೇ ದಿನೇ ಹೆಚ್ಚುತ್ತಿರುವ ಅಪರಾಧಗಳು ಅದರ ಮೂಲ ಕಾರಣಗಳನ್ನು ನಿಯಂತ್ರಿಸಲು ನಾವು ಮತ್ತು ಸರ್ಕಾರಗಳು ಸಾಧ್ಯ ಕ್ರಮಗಳೆಲ್ಲವನ್ನೂ ಕೈಗೊಳ್ಳಬೇಕು. ಮತ್ತಾರೂ ಇಂಥಾ ಕೃತ್ಯವೆಸಗಲು ಧೈರ್ಯ ಮಾಡದಂತೆ ಈಗಾಗಲೇ ಸಾಕ್ಷಿ ಸಮೇತ ಬಂಧಿತವಾಗಿರುವ ಅಪರಾಧಿಯ ತನಿಖೆ ಮತ್ತು ಅತಿ ಕಠಿಣ ಶಿಕ್ಷೆ ಆಗಲೇಬೇಕು ಎಂದು ಕಿಶೋರ್ ಒತ್ತಾಯಿಸಿದ್ದಾರೆ.
ಯಾವುದೇ ಶಿಕ್ಷೆಯಿಂದ ನೇಹಾಳನ್ನು ತಿರುಗಿ ತರಲಾಗದು. ಆದರೆ ನಮ್ಮ ಕೈಲಿ ಸಾಧ್ಯವಾಗುವುದು ಮತ್ಯಾರೂ ನೇಹಾಳಂತೆ ಬಲಿಯಾಗದಿರುವಂತೆ ನೋಡಿಕೊಳ್ಳುವುದಾಗಿದೆ ಎಂದವರು ಹೇಳಿದ್ದಾರೆ.