ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾಗಿ: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
ಮೈಸೂರು, ಜ.24: ಮೇಲುಕೋಟೆ ಶಾಸಕ, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷರೂ ಆಗಿರುವ ದರ್ಶನ್ ಪುಟ್ಟಣ್ಣಯ್ಯ ಪಾಂಡವಪುರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. "ದರ್ಶನ್ ಪುಟ್ಟಣ್ಣಯ್ಯ ಅಮೆರಿಕದಲ್ಲಿ ಇದ್ದು ತನ್ನ ಹೆಸರಿನ ಮುಂದೆ ಇರುವ 'ಪುಟ್ಟಣ್ಣಯ್ಯ' ಅವರ ಹೆಸರಿನ ಘನತೆ ಆದರೂ ಉಳಿಸಬಹುದಿತ್ತು" ಕೆಲವರು ಅಸಮಾಧಾನ ಹೊರ ಹಾಕಿದ್ದಾರೆ.
ಶ್ರೀ ಜನಜಾಗರಣ ಟ್ರಸ್ಟ್ (ರಿ) ಇದರ ಪಾಂಡವಪುರ ಘಟಕ ವತಿಯಿಂದ ಪಾಂಡವಪುರದಲ್ಲಿ ನಿರ್ಮಿಸಿರುವ ನೂತನ ಮಣಿಕರ್ಣಿಕ ನಿಲಯ (ಆರೆಸ್ಸೆಸ್ ಕಾರ್ಯಾಲಯ) ಹೊಸ ಕಟ್ಟಡದ ಗಣಹೋಮ ಮತ್ತು ಶ್ರೀ ರಾಮತಾರಕ ಹೋಮ ಕಾರ್ಯಕ್ರಮದಲ್ಲಿ ಭಾಗವಸಿರುವ ಬಗ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ. ಎಸ್ ಪುಟ್ಟರಾಜು ಹಾಗೂ ಸಂಘದ ಪ್ರಮುಖರು ಉಪಸ್ಥಿತರಿದ್ದರು ಎಂದು ಉಲ್ಲೇಖಿಸಿರುವ ದರ್ಶನ್ ಪುಟ್ಟಣ್ಣಯ್ಯ, ಕಾರ್ಯಕ್ರಮದ ಕೆಲವು ಫೋಟೊಗಳನ್ನೂ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ರೈತ ನಾಯಕ, ಮಾಜಿ ಶಾಸಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯರ ಪುತ್ರರಾಗಿರುವ ದರ್ಶನ್ ಪುಟ್ಟಣ್ಣಯ್ಯ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ದರ್ಶನ್ ರ ಫೇಸ್ ಬುಕ್ ಪೋಸ್ಟ್ ಗೆ ಕಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಒಂಚೂರು ಬದ್ಧತೆ ಇಲ್ಲದೆ ಅಪ್ಪನ ಹೆಸರಲ್ಲಿ ಗೆದ್ದರೆ ಹೀಗೂ ಆಗಬಹುದು ಅನ್ಸುತ್ತೆ. ಇದಕ್ಕಿಂತ ಅಮೆರಿಕದಲ್ಲಿ ಇದ್ದು ತನ್ನ ಹೆಸರಿನ ಮುಂದೆ ಇರುವ ಪುಟ್ಟಣ್ಣಯ್ಯರ ಹೆಸರಿನ ಘನತೆ ಆದರೂ ಉಳಿಸಬಹುದಿತ್ತು. ಪುಟ್ಟಣ್ಣಯ್ಯ ಇದ್ದರೆ ಏನ್ ಮಾಡ್ತಾ ಇದ್ದರೊ..." ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
"ಶಾಸಕರು ಇನ್ನು ಮುಂದೆಯಾದರೂ ಹೆಚ್ಚರದಿಂದಿರಿ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಮೌಲ್ಯವಿರುವ, ಸಂವಿಧಾನ ವಿರೋಧಿಗಳ ಜೊತೆಗೆ ಹೋಗುವುದಕ್ಕಿಂತ ಮೊದಲು ಒಮ್ಮೆ ಯೋಚಿಸಿ ಅಥವಾ ಒಮ್ಮೆ ತಮ್ಮ ಚಳವಳಿಯ ಸಂಗಾತಿಗಳನ್ನಾದರು ಕೇಳಿ ನಂತರ ಮುಂದುವರೆಯಿರಿ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
"ನಿಮಗೆ ಆರೆಸ್ಸೆಸ್ ಎಂದರೆ ಏನು ಎಂದು ನಿಮ್ಮ ತಂದೆಯವರ ಒಂದಷ್ಟು ಭಾಷಣಗಳನ್ನು ಕೇಳಿದ್ದರೇ ಸ್ವಲ್ಪವಾದರೂ ಜ್ಞಾನ ಬರುತ್ತಿತ್ತು" ಎಂದು ಇನ್ನೊಬ್ಬರು ಟೀಕಿಸಿದ್ದಾರೆ.
ಸರ್ವೋದಯ ಕರ್ನಾಟಕ ಪಕ್ಷವು 2005ರ ಬಸವ ಜಯಂತಿಯ ದಿನದಂದು ಹಿರಿಯ ಸಾಹಿತಿ ದೇವನೂರ ಮಹದೇವ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾದ ಪಕ್ಷ. 'ಇದು ರೈತ, ದಲಿತ, ಪ್ರಗತಿಪರ ಮನಸ್ಸುಗಳ ಒತ್ತಾಸೆಯಿಂದ ಪಕ್ಷ ಹುಟ್ಟಿಕೊಂಡ ಪಕ್ಷ' ಎಂದು ದೇವನೂರ ಮಹದೇವ ಹೇಳಿದ್ದರು.
ಈ ಪಕ್ಷದಿಂದ ಇದುವರೆಗೆ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಅವರ ಪುತ್ರರಾಗಿರುವ ದರ್ಶನ್ ಪುಟ್ಟಣ್ಣಯ ಮಾತ್ರ ಶಾಸಕರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದರ್ಶನ್ ಅವರನ್ನು ಕಾಂಗ್ರೆಸ್ ಬೆಂಬಲಿಸಿತ್ತು.