ಸಿದ್ದರಾಮಯ್ಯ ಅವರೇ, ಅಹಂಕಾರದ ಮಾತುಗಳಿಂದ ವಿಪಕ್ಷಗಳ ಬಾಯಿ ಮುಚ್ಚಿಸಬಹುದೆಂಬ ಭ್ರಮೆಯಿಂದ ಹೊರ ಬನ್ನಿ: ಆರ್.ಅಶೋಕ್
ಬೆಂಗಳೂರು, ಜೂ.18: ನಾಲ್ಕು ಅಹಂಕಾರದ ಮಾತುಗಳನ್ನಾಡಿದ ಮಾತ್ರಕ್ಕೆ ವಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂಬ ಭ್ರಮೆಯಿಂದ ಹೊರಗೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
'ಎಕ್ಸ್'ನಲ್ಲಿ ಪೋಸ್ಟ್ ಒಂದರ ಮೂಲಕ ಮುಖ್ಯಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆರ್.ಅಶೋಕ್, ನಿಮ್ಮ ಅಹಂಕಾರದ, ದರ್ಪದ ಮಾತುಗಳು ನಿಮ್ಮ ಚಾರಿತ್ರ್ಯವನ್ನ ಪ್ರದರ್ಶನ ಮಾಡುತ್ತವೆಯೇ ಹೊರತು ಅದರಿಂದ ನನಗೆ ಯಾವುದೇ ನಷ್ಟವಿಲ್ಲ. ನಿಮ್ಮ ಅಹಂಕಾರದಿಂದ ನನ್ನ ದನಿ ಅಡಗಿಸಲೂ ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತೆ ತಮ್ಮ ವೈಫಲ್ಯ, ದಡ್ಡತನವನ್ನ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಬಗ್ಗೆ ಯಾಕೆ ಟೀಕೆ ಮಾಡುತ್ತೀರಿ. ಎಪ್ರಿಲ್ 2004 ರಿಂದ ಎಪ್ರಿಲ್ 2014ರವರೆಗೆ ಅಂದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ 32% ತೆರಿಗೆ ಹಂಚಿಕೆ ಮಾಡುತ್ತಿತ್ತು. ಆದರೆ ಕಳೆದ ಹತ್ತು ವರ್ಷಗಳ ಎನ್ ಡಿಎ ಸರ್ಕಾರದಲ್ಲಿ, ಎಪ್ರಿಲ್ 2014 ರಿಂದ ಎಪ್ರಿಲ್ 2024, ರಾಜ್ಯಗಳಿಗೆ 42% ತೆರಿಗೆ ಹಂಚಕೆಯಾಗಿದೆ. ಅಂದರೆ ಯುಪಿಎ ಸರ್ಕಾರ 68% ತೆರಿಗೆ ಹಣವನ್ನ ಕೇಂದ್ರದ ಬಳಿಯೇ ಉಳಿಸಿಕೊಳ್ಳುತ್ತಿತ್ತು, ಮೋದಿ ಅವರ ಸರ್ಕಾರ ಕೇವಲ 58% ತೆರಿಗೆಯನ್ನ ಕೇಂದ್ರದ ಬಳಿ ಉಳಿಸಿಕೊಳ್ಳುತ್ತಿದೆ.
ಕಳೆದ ಮೂರು ವರ್ಷಗಳ ಜಾಗತಿಕ ಇಂಧನ ಪ್ರಕ್ಷುಬ್ಧತೆಯ ಸಮಯದಲ್ಲಿ, ಪ್ರಧಾನಿ ಮೋದಿ ಅವರ ನೇತೃತ್ವದ NDA ಸರ್ಕಾರವು ಭಾರತದ ಕಚ್ಚಾ ತೈಲ ಖರೀದಿ ಮೂಲಗಳನ್ನು ಬೇರೆ ಬೇರೆ ದೇಶಗಳಿಗೆ ವಿಸ್ತರಿಸಿದ ಸಮಯೋಚಿತ ನಿರ್ಧಾರದ ಪರಿಣಾಮವಾಗಿ ಪೆಟ್ರೋಲ್ ಬೆಲೆಗಳು ಸುಮಾರು 14% ರಷ್ಟು ಕಡಿಮೆಯಾಗಿದೆ ಮತ್ತು ಡೀಸೆಲ್ ಬೆಲೆಗಳು ನವೆಂಬರ್ 2021-ಮೇ 2024 ರ ಅವಧಿಯಲ್ಲಿ ಸುಮಾರು 11% ರಷ್ಟು ಕಡಿಮೆಯಾಗಿದೆ. ಅದೇ ಅವಧಿಯಲ್ಲಿ, ಅಮೆರಿಕದಲ್ಲಿ ಪೆಟ್ರೋಲ್ ಬೆಲೆಗಳು 29% ರಷ್ಟು ಏರಿಕೆಯಾಗಿದೆ, ನೆರೆಯ ಪಾಕಿಸ್ತಾನ ಮತ್ತು ಶ್ರೀಲಂಕಾ ಜಾಗತಿಕ ಕಚ್ಚಾ ಬೆಲೆಗಳ ಏರಿಕೆಯಿಂದಾಗಿ ತೀವ್ರ ಆರ್ಥಿಕ ಒತ್ತಡವನ್ನು ಎದುರಿಸಿದವು. ಸದಾ ಚಿಲ್ಲರೆ ರಾಜಕಾರಣದಲ್ಲಿ ಕಾಲ ಕಳೆಯುವ ತಮಗೆ ಜಾಗತಿಕ ರಾಜಕೀಯ, ಜಾಗತಿಕ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅರಿವೂ ಇಲ್ಲ, ಅದನ್ನ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ತಮಗಿಲ್ಲ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರವು ನವೆಂಬರ್ 2021 ಮತ್ತು ಮೇ 2022ರಲ್ಲಿ ಎರಡು ಬಾರಿ ಅಬಕಾರಿ ಸುಂಕದಲ್ಲಿ ಗಣನೀಯ ಕಡಿತ ಮಾಡಿತ್ತು. ನವೆಂಬರ್ 2021ರಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್ಗೆ ₹5 ಮತ್ತು ₹10 ಕಡಿಮೆ ಮಾಡಿತ್ತು. ನಂತರ ಮೇ 2022ರಲ್ಲಿ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ ಲೀಟರ್ಗೆ ₹8 ಮತ್ತು ₹6 ರಷ್ಟು ಕಡಿತಗೊಳಿಸಲಾಯಿತು. ಇತ್ತೀಚೆಗೆ ಈ ವರ್ಷ ಮಾರ್ಚ್ 14 ರಂದು ತೈಲ ಕಂಪನಿಗಳು ಲೀಟರ್ಗೆ 2 ರೂಪಾಯಿ ಕಡಿಮೆ ಮಾಡಿವೆ ಎಂದು ಅಶೋಕ್ ವಿವರಿಸಿದ್ದಾರೆ.