ಜನಾಂದೋಲನಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದಷ್ಟು ರಾಜಕಾರಣಿಗಳಿಗೆ ಧೈರ್ಯ ಬಂದದ್ದಾದರೂ ಹೇಗೆ: ನಟ ಕಿಶೋರ್ ಪ್ರಶ್ನೆ
"ನಾಚಿಕೆಗೆಟ್ಟು ಓಟು ಕೇಳಲು ಬರುವ ಪರಮಭ್ರಷ್ಟ ವಿಶ್ವಗುರುಗಳ ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಧೈರ್ಯ ನಮಗಿಲ್ಲವೇ?"
Photo: Kishore Kumar Huli (FB)
ಬೆಂಗಳೂರು: ಗಣಿಗಾರಿಕೆಯ ಸೇಠ್ ಗಳಿಂದ ಲಡಾಖ್ ನ್ನು ಉಳಿಸಲು ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ 21 ದಿನಗಳ ದಿನಗಳ ಉಪವಾಸ ಸತ್ಯಾಗ್ರಹ ಧರಣಿ ನಡೆಸಿದರೂ ಈ ಸೂಕ್ಷ್ಮ ಗಂಭೀರ ವಿಷಯದ ಬಗ್ಗೆ ಯಾರೂ ಏಕೆ ಧ್ವನಿಯೆತ್ತುತ್ತಿಲ್ಲ ಜನಾಂದೋಲನಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದಷ್ಟು, ಆಡಿಕೊಳ್ಳುವಷ್ಟು ಈ ಗಲೀಜು ರಾಜಕಾರಣಿಗಳಿಗೆ ಧೈರ್ಯ ಬಂದದ್ದಾದರೂ ಹೇಗೆ ಎಂದು ಬಹುಭಾಷಾ ನಟ ಕಿಶೋರ್ ಕುಮಾರ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಈ ರಾಜಕಾರಣಿಗಳು ಪ್ರಶ್ನಾತೀತರಾದದ್ದು ಹೇಗೆ? ನಿರ್ಭಯಾ ಆಂದೋಲನದಲ್ಲಿ ಬೀದಿಗಿಳಿದು ವ್ಯವಸ್ಥೆಯನ್ನು ಪ್ರಶ್ನಿಸಿದ ಆ ಭಾರತೀಯರೆಲ್ಲಿ? ಪ್ರಶ್ನೆಗಳ ಸರಣಿಯನ್ನೇ ಮುಂದಿಟ್ಟಿದ್ದಾರೆ.
ಲಡಾಖ್ ವಿನಾಶದ ಅಂಚಿನಲ್ಲಿದ್ದರೇನು, ಮಣಿಪುರ ಹೊತ್ತಿ ಉರಿದರೇನು, ರೈತರು ಸತ್ತರೇನು, ಯೋಧರನ್ನು ಸೈನ್ಯದಿಂದ ನಾಲ್ಕೇ ವರ್ಷದಲ್ಲಿ ಹೊರಗಟ್ಟಿದರೇನು, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದರೇನು, ದಲಿತ ಆದಿವಾಸಿಗಳ ಮಾನಭಂಗವಾದರೇನು, ದೇಶದ ಕಾಡೆಲ್ಲ ಕಲ್ಲಿದ್ದಲು ಕಳ್ಳರ ಪಾಲಾದರೇನು, ನೋಟು ಚಲಾವಣೆ ಬಂದ್ ಮಾಡಿದರೇನು, ಪೆಟ್ರೊಲು ಗ್ಯಾಸಿನ ಬೆಲೆ ಗಗನ ಮುಟ್ಟಿದರೇನು ಕೊರೋನದಿಂದ ಲಕ್ಷಾಂತರ ಜನ ಸತ್ತರೇನು, ಚುನಾವಣಾ ಬಾಂಡಿನ ಹೆಸರಲ್ಲಿ ಭ್ರಷ್ಟ ಸರ್ಕಾರ ದೇಶವನ್ನೇ ಮಾರಿಬಿಟ್ಟರೂ ಭವ್ಯ ಭಾರತದ ಪ್ರಜೆಗಳಾದ ನಾವು ಏನೂ ಮಾತಾಡದೇ ಪ್ರತಿರೋಧ ಒಡ್ಡಿದವರನ್ನೆಲ್ಲ ದೋಶದ್ರೊಹಿಗಳೆಂದು ಬ್ರಾಂಡ್ ಮಾಡಿ ಕೈಕಟ್ಟಿ ಕೂತಿರುವ ಕಾರಣವೇನು?
ನಿಜ ಸಮಸ್ಯೆಗಳು ಕಾಣದಂತೆ ನಮ್ಮನ್ನು ಹಿಂದೂ ಸುಖದಲ್ಲಿ ಮುಳುಗಿಸಿರುವ ಸರ್ಕಾರ ಕಾರಣವೇ? ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವಾದ, ಜನರ ಪರವಾಗಿ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಬೇಕಾದ ತಮ್ಮ ಕರ್ತವ್ಯ ಮರೆತ ಸರ್ಕಾರದ __ ನೆಕ್ಕುವ ವಿಶ್ವಾಸಘಾತುಕ ಮಾಧ್ಯಮಗಳೇ? ಇಲ್ಲಾ ಹೇಡಿ ಧರ್ಮಗುರುಡು ಪ್ರಜೆಗಳಾದ ನಾವೇ?
ಈಗ ನಾಚಿಕೆಗೆಟ್ಟು ಓಟು ಕೇಳಲು ಬರುವ ಈ ಪರಮಭ್ರಷ್ಟ ವಿಶ್ವಗುರುಗಳನ್ನು ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಧೈರ್ಯ ನಮಗಿಲ್ಲವೇ? ಎಂದು ಕಿಶೋರ್ ಪ್ರಶ್ನಿಸಿದ್ದಾರೆ.