10 ಕೋಟಿಯಲ್ಲಿ ಎಷ್ಟು ಫೇಕ್ ಫಾಲೋವರ್ಸ್ ಎಂದು ಮೋದಿಗೆ ಕೇಳಿದ ಜನ
ನರೇಂದ್ರ ಮೋದಿ (Photo : X/@narendramodi)
ಹೊಸದಿಲ್ಲಿ: ಸಾಮಾಜಿಕ ಜಾಲತಾಣ ಎಕ್ಸ್ ನ ಖಾತೆಯಲ್ಲಿ 10 ಕೋಟಿ ಫಾಲೋವರ್ ಗಳನ್ನು ಹೊಂದುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲೇ ನಂಬರ್ ಒನ್ ಆಗಿದ್ದಾರೆ. ಭಾರತದಲ್ಲಿ ಎಕ್ಸ್ನಲ್ಲಿ ವಿವಿಧ ರಾಜಕಾರಣಿಗಳಿಗೆ ಹೋಲಿಸಿದರೆ ಪ್ರಧಾನಿ ಮೋದಿಗೆ ಹೆಚ್ಚು ಫಾಲೋವರ್ ಗಳಿದ್ದಾರೆ. ಕಳೆದ 3 ವರ್ಷಗಳಲ್ಲಿ, ಮೋದಿ ಅವರ ಎಕ್ಸ್ ಖಾತೆಯಲ್ಲಿ ಸುಮಾರು 3 ಕೋಟಿ ಫಾಲೋವರ್ ಗಳು ಹೆಚ್ಚಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್ ಖಾತೆ @narendramodi, 10 ಕೋಟಿ ಫಾಲೋವರ್ಸ್ ಪಡೆಯುವ ಮೂಲಕ ಮಹತ್ವದ ಮೈಲಿಗಲ್ಲನ್ನು ದಾಟಿದೆ. ಇದರ ಬೆನ್ನಲ್ಲೇ ಹಲವು ಬಿಜೆಪಿ ಮುಖಂಡರು ಪ್ರಧಾನಿಯನ್ನು ಅಭಿನಂದಿಸಿದ್ದಾರೆ. ಬಿಜೆಪಿ ಐಟಿ ಸೆಲ್ ಎಕ್ಸ್ ನಲ್ಲಿ ಇದನ್ನು ವ್ಯಾಪಕವಾಗಿ ಹಂಚಿಕೊಂಡು ಸಂಭ್ರಮಿಸುತ್ತಿದೆ.
ಆದರೆ ಪ್ರಧಾನಿ ಮೋದಿ ಹತ್ತು ಕೋಟಿ ಎಕ್ಸ್ ಫಾಲೋವರ್ಸ್ ಪಡೆಯುವಾಗಲೇ ನಕಲಿ ಫಾಲೋವರ್ಸ್ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. 2018 ರ ಅಧ್ಯಯನ ವೊಂದನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿರುವುದು ಬಿಜೆಪಿ ಮತ್ತದರ ಬೆಂಬಲಿಗರಿಗೆ ಈ ಖುಷಿಯ ನಡುವೆ ಕಸಿವಿಸಿ ತಂದಂತಾಗಿದೆ.
"ಪ್ರಧಾನಿ ಮೋದಿ ಮೇಲಿನಿಂದ ಕೆಳಕ್ಕೆ ಫುಲ್ ನಕಲಿ. ಅವರ ಫಾಲೋವರ್ಗಳು ಸಹ ನಕಲಿ" ಎಂದು ಎಕ್ಸ್ ಬಳಕೆದಾರರೋರ್ವರು ಬರೆದುಕೊಂಡಿದ್ದಾರೆ. 2018 ರ ಹಳೆಯ ಅಧ್ಯಯನವೊಂದನ್ನೂ ಅವರು ಹಂಚಿಕೊಂಡಿದ್ದಾರೆ. ಇನ್ನೂ ಹಲವರು ಸಾಮಾಜಿಕ ಮಾಧ್ಯಮ ಬಳಕೆದಾರರು ಸ್ವತಃ ಟ್ವೀಟರ್ 2018 ರಲ್ಲಿ ನಡೆಸಿದ್ದ ಅಧ್ಯಯನವನ್ನು ಹಂಚಿಕೊಂಡಿದ್ದಾರೆ.
ಆ ವರದಿ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ಅಂದ್ರೆ 60 ಶೇಕಡಾ ನಕಲಿ ಫಾಲೋವರ್ಸ್ ಗಳಿದ್ದ ಖಾತೆ ಪ್ರಧಾನಿ ಮೋದಿಯವರದ್ದಾಗಿತ್ತು. ಮೋದಿ ಅಲ್ಲದೆ ಬೇರೆ ಪ್ರಸಿದ್ದ ಎಕ್ಸ್ ಬಳಕೆದಾರರ ಕುರಿತೂ ವರದಿ ಪರಾಮರ್ಶಿಸಿತ್ತು. ಆದರೆ ಎಲ್ಲ ಗಣ್ಯರ ಪೈಕಿ ಶೇಕಡಾವಾರು ಅತಿ ಹೆಚ್ಚು ಫೇಕ್ ಫಾಲೋವರ್ಸ್ ಇರೋದು ಮೋದಿ ಅವರ ಖಾತೆಗೆ ಎಂದು ಆ ವರದಿ ಹೇಳಿತ್ತು. ಈ ಹಿಂದೆ ಮೋದಿ 2021 ರಲ್ಲಿ 70 ಮಿಲಿಯನ್ ಅಥವಾ ಏಳು ಕೋಟಿ ಫಾಲೋವರ್ಸ್ ಗಳ ಮೈಲಿಗಲ್ಲನ್ನು ದಾಟಿದಾಗಲೂ ಈ ವರದಿ ಚರ್ಚೆಯಾಗಿತ್ತು.
ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿರುವಾಗಲೂ ಅವರ ಖಾತೆಗೆ ಹೀಗೆಯೇ ನಕಲಿ ಫಾಲೋವರ್ಸ್ ಇರುವ ಕುರಿತು ವರದಿಯೊಂದು ಬಂದಿತ್ತು.
2012 ರಲ್ಲಿ ಮೋದಿ 1 ಮಿಲಿಯನ್ ಅಥವಾ ಹತ್ತು ಲಕ್ಷ ಫಾಲೋವರ್ಸ್ ಮೈಲಿಗಲ್ಲನ್ನು ದಾಟಿದಾಗ ಲಂಡನ್ ಮೂಲದ ಇಂಜಿನಿಯರ್ಗಳು ನೀಡಿದ ವರದಿಯೊಂದು ತುಂಬಾ ಚರ್ಚೆಯಾಗಿತ್ತು. ಅವರ ಬೃಹತ್ ಫಾಲೋವರ್ಸ್ ಬೇಸ್ನ ಸತ್ಯಾಸತ್ಯತೆಯ ಬಗ್ಗೆ ಚರ್ಚೆ ನಡೆದಿತ್ತು.
2012 ರಲ್ಲಿ ಸ್ಟೇಟಸ್ ಪೀಪಲ್ ನಡೆಸಿದ ಅಧ್ಯಯನವೊಂದರ ಪ್ರಕಾರ, ಸರಿಸುಮಾರು 46% ಮೋದಿ ಫಾಲೋವರ್ಸ್ ನಕಲಿಯಾಗಿದ್ದರು. ಮೋದಿ ಖಾತೆಯನ್ನು ಫಾಲೋ ಮಾಡುವ 41% ಖಾತೆಗಳು ನಿಷ್ಕ್ರಿಯವಾಗಿದ್ದವು.
2009 ರಲ್ಲಿ ಪ್ರಾರಂಭವಾದಾಗಿನಿಂದ ಮೋದಿ ಅವರ ಎಕ್ಸ್ ಖಾತೆಗೆ ಸ್ಥಿರವಾಗಿ ಫಾಲೋವರ್ಸ್ ಹೆಚ್ಚುತ್ತಾ ಬಂದಿದೆ. ಕ್ರಮೇಣ ಮೋದಿ ರಾಷ್ಟ್ರ ರಾಜಕಾರಣದತ್ತ ತಿರುಗಿದ ಬಳಿಕ ಅವರ ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ಹೆಚ್ಚಿಸಲು ಟ್ವಿಟರ್ (ಎಕ್ಸ್) ನ ಅವರ ಕಾರ್ಯತಂತ್ರದ ಬಳಕೆಯನ್ನು ಇದು ಪ್ರತಿಬಿಂಬಿಸುತ್ತದೆ.
ಮಿಚಿಗನ್ ವಿಶ್ವವಿದ್ಯಾನಿಲಯದ 2015 ರ ಅಧ್ಯಯನವೊಂದರ ಪ್ರಕಾರ ಎಚ್ಚರಿಕೆಯಿಂದ ರಚಿಸಲಾದ ಟ್ವೀಟ್ಗಳು ಮತ್ತು ಇತರ ಟ್ವಿಟರ್ ಖಾತೆಗಳಿಗೆ ಫಾಲೋಬ್ಯಾಕ್ಗಳ ಸಂಯೋಜನೆಯು ಪ್ರಧಾನಿ ಮೋದಿಯ ಪ್ರಬಲ ಸಾಮಾಜಿಕ ಮಾಧ್ಯಮ ಬ್ರ್ಯಾಂಡ್ ಅನ್ನು ನಿರ್ಮಿಸಲು ಸಹಾಯ ಮಾಡಿದೆ.
ಸುಳ್ಳು ಹಾಗು ದ್ವೇಷ ಹರಡುವವರ ಖಾತೆಗಳನ್ನು ಸ್ವತಃ ಪ್ರಧಾನಿ ಮೋದಿ ಫಾಲೋ ಮಾಡುವ ಕಾರಣ ಅವರು ಹಲವು ಬಾರಿ ಮುಜುಗರಕ್ಕೆ, ಟೀಕೆಗೆ ಗುರಿಯಾಗಿದ್ದಾರೆ. ಟೀಕೆ ಬಳಿಕವೂ ತಾನು ಫಾಲೋ ಮಾಡುವ ದ್ವೇಷ ಕಾರುವವರನ್ನು ಮೋದಿ ಅನ್ ಫಾಲೋ ಮಾಡಿಲ್ಲ.
ಈಗ ಎಕ್ಸ್ ನಲ್ಲಿ ಪ್ರಧಾನಿ ಮೋದಿ 10 ಕೋಟಿ ಫಾಲೋವರ್ಸ್ ಮೈಲಿಗಲ್ಲು ಮುಟ್ಟಿರುವಾಗ ಈ ಫಾಲೋವರ್ಸ್ ಹೆಚ್ಚಿಸಲು ಏನಲ್ಲ ತಂತ್ರಗಳು ಅಥವಾ ಕುತಂತ್ರಗಳನ್ನು ಬಳಸಲಾಗಿದೆ ಎಂಬುದರ ಕುರಿತು ಚರ್ಚ್ ಶುರುವಾಗಿದೆ. ಇದರಲ್ಲಿ ಎಷ್ಟು ಶೇಕಡಾ ಫಾಲೋವರ್ಸ್ ನಕಲಿಯೆಂಬ ಪ್ರಶ್ನೆಯೂ ಕೇಳಿ ಬರುತ್ತಿದೆ.
"ಫೇಕು ಮತ್ತು ಅವನ ಕುರುಡು ಅನುಯಾಯಿಗಳು" ಎಂದು ಒಬ್ಬರು ಬರೆದು ಕೊಂಡರೆ "ಇದು ಕೂಡ ಒಂದು ಜುಮ್ಲಾ" ಎಂದು ಇನೊಬ್ಬರು ತಮಾಷೆ ಮಾಡಿದ್ದಾರೆ. "ನಕಲಿ ಅನುಯಾಯಿಗಳಲ್ಲಿ ವಿಶ್ವ ಗುರು" ಎಂದು ಇನ್ನೊಬ್ಬರು ಬರೆದಿದ್ದಾರೆ.