ಸಕ್ರಿಯಗೊಳ್ಳುತ್ತಿರುವ ನೈಋತ್ಯ ಮಾನ್ಸೂನ್: ಹವಾಮಾನ ಇಲಾಖೆ
ಮೀನುಗಾರರಿಗೆ ಎಚ್ಚರಿಕೆ
ಉಡುಪಿ, ಜೂ.20: ತಮಿಳುನಾಡಿನ ತೀರ ಪ್ರದೇಶದಲ್ಲಿ ಚಂಡಮಾರುತದ ಚಟುವಟಿಕೆಗಳು ಕಂಡು ಬಂದಿದ್ದು, ಅದು ಪಶ್ಚಿಮದ ಕೇರಳ ಮತ್ತು ಕರ್ನಾಟಕದ ತೀರದಲ್ಲಿ ಮುಂದುವರಿಯುವುದರಿಂದ ಕರ್ನಾಟಕ ಕರಾವಳಿ ಯಲ್ಲಿ ನೈಋತ್ಯ ಮಾನ್ಸೂನ್ (ಮುಂಗಾರು) ಮತ್ತೆ ಚುರುಕುಗೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದರಿಂದ ಮುಂದಿನ 4-5 ದಿನಗಳ ಕಾಲ ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜೂನ್ 24-25ರ ನಂತರ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮುಂಗಾರು ಭಾರೀ ಮಳೆಯೊಂದಿಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.
ನಿನ್ನೆ ಬೀಸಿದ ಗಾಳಿಮಳೆಗೆ ಕಾಪು ತಾಲೂಕು ಕೋಟೆ ಗ್ರಾಮದ ಜನಾರ್ದನ ಕುಂದರ್ ಎಂಬವರ ಮನೆ ಮೇಲೆ ಮರಬಿದ್ದು ಮನೆಯ ಮೇಲ್ಚಾವಣಿಗೆ ಹಾನಿಯುಂಟಾಗಿದೆ. ಇದರಿಂದ 20ಸಾವಿರದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 3.9ಮಿ.ಮೀ. ಮಳೆಯಾಗಿದೆ. ಕಾಪುವಿನಲ್ಲಿ ಅತ್ಯಧಿಕ 15.8 ಮಿ.ಮೀ. ಮಳೆಯಾದರೆ, ಕಾರ್ಕಳದಲ್ಲಿ ಕನಿಷ್ಠ 0.8ಮಿ.ಮೀ. ಮಳೆಯಾದ ವರದಿಗಳು ಬಂದಿವೆ. ಉಳಿದಂತೆ ಹೆಬ್ರಿಯಲ್ಲಿ 9.7ಮಿ.ಮೀ., ಬೈಂದೂರಿನಲ್ಲಿ 3.2, ಕುಂದಾಪುರ ದಲ್ಲಿ 2.7, ಬ್ರಹ್ಮಾವರದಲ್ಲಿ 2.4 ಹಾಗೂ ಉಡುಪಿಯಲ್ಲಿ 1.7ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.
ಮೀನುಗಾರರಿಗೆ ಎಚ್ಚರಿಕೆ:ಕರ್ನಾಟಕ ಕರಾವಳಿಯುದ್ದಕ್ಕೂ ವೇಗದ ಗಾಳಿ ಬೀಸುವುದರಿಂದ ಮೀನುಗಾರರು ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಗುಡುಗು-ಮಿಂಚಿನಿಂದ ಕೂಡಿದ ಗಾಳಿಯು ಬೀಸುವ ಸಾಧ್ಯತೆಗಳಿವೆ ಎಂದೂ ವರದಿ ಹೇಳಿದೆ.