ಪಶ್ಚಿಮ ಬಂಗಾಳಕ್ಕೆ 7,000 ಕೋಟಿ ರೂ. ತಡೆಹಿಡಿದ ಮೋದಿ ಸರಕಾರ
ರಾಜ್ಯಗಳಿಗೆ ನೀಡುವ ಹಣದಲ್ಲಿ ಭಾರೀ ಕಡಿತಕ್ಕೆ ರಹಸ್ಯವಾಗಿ ಪ್ರಯತ್ನಿಸಿದ್ದರು ಮೋದಿ : ವರದಿ ! ► ಕರ್ನಾಟಕಕ್ಕೂ ಅನ್ಯಾಯ : ಬಹಿರಂಗ ಚರ್ಚೆಗೆ ಸಿಎಂ ಸವಾಲು
ನಮ್ಮ ಪ್ರಧಾನಿ ಮೋದಿಯವರು ಇಡೀ ಜಗತ್ತಿಗೇ ನಾಯಕರು ಎಂದು ಹೇಳುತ್ತಾರೆ ಅವರ ಕಟ್ಟಾ ಅಭಿಮಾನಿಗಳು. ಅವರಿಗೆ ಇಡೀ ಜಗತ್ತಿನ ಎಲ್ಲ ದೇಶಗಳ ಮೇಲೆ ಪ್ರಭಾವ ಇದೆ, ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಅವರೆಲ್ಲ ಮೋದಿಯವರನ್ನೇ ಕೇಳಿ ಕೊಳ್ತಾರೆ. ಮೋದಿಯವರೂ ದೊಡ್ಡ ಮನಸ್ಸು ಮಾಡಿ ಅವರಿಗೆ ನೆರವಾಗ್ತಾರೆ.
ಆದರೆ ಪ್ರಪಂಚದ ಯಾವ್ಯಾವುದೋ ದೇಶಗಳಿಗೆಲ್ಲ ಹೆಲ್ಪ್ ಮಾಡೋ ಪ್ರಧಾನಿ ಮೋದಿ ಯಾಕೆ ನಮ್ಮ ದೇಶದ್ದೇ ರಾಜ್ಯಗಳ ಬಗ್ಗೆ ಈ ರೀತಿ ಮಾಡ್ತಾರೆ ?. ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳ ವಿಚಾರದಲ್ಲಿ ಪ್ರಧಾನಿ ಮೋದಿ ಅದೆಂಥ ದ್ವೇಷದ ರಾಜಕಾರಣ ಮಾಡುತ್ತಿದ್ಧಾರೆ ಎಂಬುದು ಈಗಾಗಲೇ ಬಯಲಾಗುತ್ತಲೇ ಇರುವ ಸಂಗತಿಯಾಗಿದೆ.
ತೆರಿಗೆ ಪಾಲೂ ಸೇರಿದಂತೆ ರಾಜ್ಯಗಳಿಗೆ ನ್ಯಾಯಯುತವಾಗಿ ಕೇಂದ್ರದಿಂದ ಬರಬೇಕಾದ ಹಣದಲ್ಲಿ ಕಡಿತ ಮಾಡುವ ಮೂಲಕ ವಿಚಿತ್ರ ಸೇಡಿನ ರಾಜಕಾರಣವನ್ನು ಅವರು ಹುಟ್ಟುಹಾಕುತ್ತಿದ್ದಾರೆ.ಕರ್ನಾಟಕಕ್ಕೂ ಮೋದಿ ನೇತೃತ್ವದ ಸರ್ಕಾರದಿಂದ ಆಗಿರುವ ಅನ್ಯಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆಯೇ, ರಾಜ್ಯಗಳಿಗೆ ನೀಡುವ ಹಣದಲ್ಲಿ ಭಾರೀ ಕಡಿತಕ್ಕೆ ರಹಸ್ಯವಾಗಿ ಮೋದಿ ಪ್ರಯತ್ನಿಸಿದ್ದರು ಎಂಬ ತನಿಖಾ ವರದಿಯೂ ಬಂದಿದೆ.ಆ ವರದಿ ಬಂದ ಮರುದಿನವೇ ಪಶ್ಚಿಮ ಬಂಗಾಳಕ್ಕೆ 7,000 ಕೋಟಿ ರೂಪಾಯಿ ತಡೆಹಿಡಿದಿರುವ ಸುದ್ದಿ ಬಂದಿದೆ.
ಹಾಗಾದರೆ, ಇದೆಂತಹ ವಿಶ್ವಗುರು ಆಡಳಿತ?. ತನ್ನ ದೇಶದ ರಾಜ್ಯಗಳ ವಿರುದ್ಧವೇ ಸೇಡಿನ, ಹಗೆಯ ಭಾವನೆ ತೋರಿಸುವ ಪ್ರಧಾನಿಯ ಕಾರ್ಯವೈಖರಿ ಯಾವ ರೀತಿಯದ್ದು?. ಅವರೇನು ಎಲ್ಲವೂ ತನ್ನದು ಎಂದುಕೊಂಡು ಬಿಟ್ಟಿದ್ದಾರೆಯೆ? ಇದೆಲ್ಲ ಎಲ್ಲಿಗೆ ಹೋಗಿ ತಲುಪಲಿದೆ?
ಅಷ್ಟಕ್ಕೂ ಪಶ್ಚಿಮ ಬಂಗಾಳಕ್ಕೆ ನೀಡಬೇಕಿದ್ದ 7,000 ಕೋಟಿ ರೂ. ತಡೆಹಿಡಿದಿರುವುದರ ಹಿಂದಿನ ಅಸಲಿ ಕಾರಣ ಗೊತ್ತಾದರೆ ನಿಮಗೇ ಅಚ್ಚರಿಯಾಗದೇ ಇರಲಾರದು. ರೇಷನ್ ಅಂಗಡಿಗಳಲ್ಲಿ ಪ್ರಧಾನಿ ಭಾವಚಿತ್ರ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಲಾಂಛನ ಇರುವ ಫ್ಲೆಕ್ಸ್ಗಳನ್ನು ಪ್ರದರ್ಶನ ಮಾಡಿಲ್ಲ ಎಂಬುದು ಹಣ ಬಿಡುಗಡೆಯನ್ನು ತಡೆದಿರುವುದಕ್ಕೆ ಕಾರಣ.
ಹೇಗಿದೆ ನೋಡಿ ಈ ರಾಜಕಾರಣ ?. ಮಮತಾ ಬ್ಯಾನರ್ಜಿ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಲಾಂಛನ ಮತ್ತು ಪ್ರಧಾನಿ ನರೇಂದ್ರ ಮೋದಿ ಫೋಟೋಗಳಿರುವ ಫಲಕಗಳು ಮತ್ತು ಫ್ಲೆಕ್ಸ್ಗಳನ್ನು ಇನ್ನೂ ಹಾಕಿಲ್ಲ. ಹೀಗಾಗಿ ಕೇಂದ್ರದ ಯೋಜನೆಗಳಿಗೆ ಭತ್ತ ಖರೀದಿಸಲು ರಾಜ್ಯ ಸರ್ಕಾರಕ್ಕೆ 7,000 ಕೋಟಿ ರೂಪಾಯಿ ಬಿಡುಗಡೆ ಮಾಡುವುದನ್ನು ಈಗ ಕೇಂದ್ರ ತಡೆಹಿಡಿದಿದೆ ಎಂದು ವರದಿಗಳು ಹೇಳುತ್ತಿವೆ.
ಕೇಂದ್ರ ಸರ್ಕಾರದ ನಿಲುವಿನಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಪಶ್ಚಿಮ ಬಂಗಾಳದ ಭತ್ತ ಸಂಗ್ರಹಣೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿ ಎನ್‌ಎಫ್‌ಎಸ್‌ಎ ಯೋಜನೆಗಳಿಗಾಗಿ ಬಂಗಾಳ ಸರ್ಕಾರ ಈಗಾಗಲೇ 8.52 ಲಕ್ಷ ಟನ್ ಅಕ್ಕಿಯನ್ನು ಸಂಗ್ರಹಿಸಿದೆ. ವಾರ್ಷಿಕ ಗುರಿ 70 ಲಕ್ಷ ಟನ್. ಕೇಂದ್ರ ಪಾಲು ಸೇರಿದಂತೆ 22 ಲಕ್ಷ ಟನ್ ಭತ್ತವನ್ನಷ್ಟೇ ಈವರೆಗೆ ಸಂಗ್ರಹಿಸಿದೆ.
ಖಾರಿಫ್ ಹಂಗಾಮಿನಲ್ಲಿ 70 ಲಕ್ಷ ಟನ್ ವಾರ್ಷಿಕ ಗುರಿಯಲ್ಲಿ ಶೇ.80ರಷ್ಟು ಸಂಗ್ರಹಿಸುವ ಗುರಿಯಿದ್ದು, ಕೇಂದ್ರದ ಮರುಪಾವತಿ ಸ್ಥಗಿತಗೊಳಿಸುವುದರಿಂದ ಹಾಲಿ ಖಾರಿಫ್ ಋತುವಿನಲ್ಲಿ ಭತ್ತ ಸಂಗ್ರಹಣೆಯ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.ಹೇಗೆ ಮೋದಿ ಸರ್ಕಾರ ಚುನಾವಣೆ ಹತ್ತಿರ ಬರುತ್ತಲೇ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳನ್ನು ಬೇರೆ ಬೇರೆ ಥರದ ಸಂಕಷ್ಟಕ್ಕೆ ತಳ್ಳುತ್ತದೆ ಎಂಬುದಕ್ಕೂ ಇದು ಉದಾಹರಣೆ.
ಈಗಾಗಲೇ ಬಂದಿರುವ ತನಿಖಾ ವರದಿ ಕೂಡ ಹೇಗೆ ಮೋದಿ ಹಿಡೆನ್ ಅಜೆಂಡಗಳು ಬೇರೆ ಬೇರೆ ಸಂಸ್ಥೆಗಳ ಮೂಲಕ ವ್ಯಕ್ತವಾಗುತ್ತಿವೆ ಎಂಬುದನ್ನೇ ಬಯಲು ಮಾಡಿದೆ. ಮೋದಿ 2014ರಲ್ಲಿ ಪ್ರಧಾನಿಯಾದ ತಕ್ಷಣ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದ್ದ ಹಣಕಾಸುಗಳಲ್ಲಿ ಭಾರೀ ಕಡಿತ ಮಾಡಲು ಹಣಕಾಸು ಆಯೋಗದೊಂದಿಗೆ ತೆರೆಮರೆಯ ಮಾತುಕತೆಗಳನ್ನು ನಡೆಸಿದ್ದರು ಎಂಬುದನ್ನು ಆ ವರದಿ ಹೇಳಿದೆ. ಆದರೆ ಆಯೋಗದ ಮುಖ್ಯಸ್ಥರು ಪ್ರಧಾನಿ ಪ್ರಸ್ತಾವವನ್ನು ವಿರೋಧಿಸಿದ್ದರು ಮತ್ತು ಮೋದಿಯವರು ತನ್ನ ಪ್ರಯತ್ನದಿಂದ ಹಿಂದೆ ಸರಿಯುವಂತಾಗಿತ್ತು ಎಂದು ಇತ್ತೀಚಿಗೆ ಬಹಿರಂಗಗೊಂಡ ಮಾಹಿತಿಗಳು ತೋರಿಸಿವೆ ಎಂದು aljazeera.com ವರದಿ ಮಾಡಿದೆ.
ರಾಜ್ಯಗಳ ಪಾಲನ್ನು ಕಡಿತ ಮಾಡಲು ತೆರೆಮರೆಯಲ್ಲಿ ಹೀಗೆ ಪ್ರಯತ್ನಿಸಿದ್ದ ಮೋದಿ, ಸಂಸತ್ತಿನಲ್ಲಿ ಮಾತ್ರ ಹಣಕಾಸು ಆಯೋಗದ ಶಿಫಾರಸುಗಳನ್ನು ಸ್ವಾಗತಿಸುವುದಾಗಿ ಸುಳ್ಳು ಹೇಳಿದ್ದರು ಎಂದು aljazeera.com ನಲ್ಲಿನ ಶ್ರೀಗಿರೀಶ್ ಜಾಲಿಹಾಳ್ ಹಾಗು ನಿತಿನ್ ಸೇಥಿ ಅವರ ವರದಿ ಬಯಲು ಮಾಡಿದೆ.ಕೇಂದ್ರ ಸರಕಾರದ ಚಿಂತನ ಚಾವಡಿ ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ ವಿ ಆರ್ ಸುಬ್ರಹ್ಮಣ್ಯಂ ಅವರು ಈ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಾರೆ. ಆ ಸಂದರ್ಭದಲ್ಲಿ ಪ್ರಧಾನಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದ ಅವರು ಮೋದಿ ಮತ್ತು ಹಣಕಾಸು ಆಯೋಗದ ಅಧ್ಯಕ್ಷ ವೈ.ವಿ.ರೆಡ್ಡಿ ಅವರ ನಡುವಿನ ಹಿಂಬಾಗಿಲ ಮಾತುಕತೆಗಳಲ್ಲಿ ಸಂಪರ್ಕ ಸೇತುವಾಗಿದ್ದರು.
ಹಣಕಾಸು ಆಯೋಗವು 2014 ಡಿಸೆಂಬರ್‌ನಲ್ಲಿ ಸಲ್ಲಿಸಿದ್ದ ತನ್ನ ವರದಿಯಲ್ಲಿ ಆವರೆಗೆ ಶೇ.32ರಷ್ಟಿದ್ದ ರಾಜ್ಯ ಸರಕಾರಗಳ ಪಾಲನ್ನು ಶೇ.42ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತ್ತು. ಆದರೆ ಪ್ರಧಾನಿ ಮೋದಿ ರಾಜ್ಯಗಳ ಪಾಲನ್ನು ಶೇ.33ಕ್ಕೆ ತಗ್ಗಿಸಲು ಮತ್ತು ಹೆಚ್ಚಿನ ಪಾಲನ್ನು ಕೇಂದ್ರ ಸರಕಾರಕ್ಕೆ ಉಳಿಸಿಕೊಳ್ಳಲು ಹವಣಿಸಿದ್ದರು ಎನ್ನಲಾಗಿದೆ.
ಪ್ರಧಾನಿ ಮತ್ತು ಅವರ ತಂಡವು ಆರಂಭದಿಂದಲೂ ರಾಜ್ಯಗಳಿಗೆ ಹಣಕಾಸು ಹಂಚಿಕೆಯನ್ನು ಕುಗ್ಗಿಸಲು ಪ್ರಯತ್ನಿಸಿದ್ದರು ಎನ್ನುವುದನ್ನು ಇದೇ ಮೊದಲ ಬಾರಿಗೆ ಪ್ರಸ್ತುತ ಭಾರತ ಸರಕಾರದ ಉನ್ನತ ಅಧಿಕಾರಿಯೋರ್ವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ರಾಜ್ಯಗಳೂ ಈಗ ಪದೇ ಪದೇ ಈ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸುತ್ತಿವೆ. ಹಣಕಾಸು ಆಯೋಗ ತನ್ನ ವರದಿಯನ್ನು ಬದಲಿಸುವಂತೆ ಮಾಡುವ ಮೂಲಕ ರಾಜ್ಯಗಳ ತೆರಿಗೆ ಪಾಲನ್ನು ಕಡಿಮೆಗೊಳಿಸಲು ಮೋದಿ ಸರಕಾರ ಪ್ರಯತ್ನಿಸಿತ್ತಾದರೂ ಅದು ಸಾಧ್ಯವಿಲ್ಲ ಎನ್ನುವುದನ್ನು ಕಂಡುಕೊಂಡ ಬಳಿಕ ಅದು ಹಳೆಯ ಲೆಕ್ಕಪತ್ರ ತಂತ್ರವನ್ನು ಬಳಸಿಕೊಂಡಿತ್ತು ಮತ್ತು ಅದು ಈಗಲೂ ಮುಂದುವರಿದಿದೆ.
ಅದು ಸೆಸ್ ಮತ್ತು ಸರ್ ಚಾರ್ಜ್ ಗಳು ಎಂದು ಕರೆಯಲಾಗುವ ತೆರಿಗೆಗಳ ವರ್ಗದ ಸಂಗ್ರಹವನ್ನು ಕ್ರಮೇಣ ಹೆಚ್ಚಿಸುತ್ತಲೇ ಬಂದಿದೆ. ರಾಜ್ಯಗಳು ಇದರಲ್ಲಿ ಯಾವುದೇ ಪಾಲನ್ನು ಪಡೆಯಲು ಸಾಧ್ಯವಿಲ್ಲ. ಮೋದಿ ಸರಕಾರ 2017ರ ಜುಲೈನಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರುವ ಮೂಲಕ ರಾಜ್ಯಗಳ ತೆರಿಗೆ ಸಂಪನ್ಮೂಲಗಳಿಗೆ ಕನ್ನ ಹಾಕಿದೆ. ರಾಜ್ಯಗಳು ಆದಾಯಕ್ಕಾಗಿ ಹೆಚ್ಚೆಚ್ಚು ಪರದಾಡುವಂತಾಗಿದೆ.
ಜಿಎಸ್‌ಟಿ ಪೂರ್ವದ ಅವಧಿಗೆ ಹೋಲಿಸಿದರೆ ಜಿಎಸ್‌ಟಿ ಜಾರಿಯ ಬಳಿಕ ರಾಜ್ಯಗಳ ತೆರಿಗೆ ಆದಾಯವು ಕ್ಷೀಣಿಸಿದೆ ಎಂದು ಇತ್ತೀಚಿನ ಸಂಶೋಧನಾ ಪ್ರಬಂಧಗಳು ಕೂಡ ಹೇಳುತ್ತಿವೆ ಎಂಬುದು ವರದಿಯಲ್ಲಿದೆ. ಹೇಗೆ ಮೋದಿ ಸರ್ಕಾರ ವ್ಯವಸ್ಥಿತವಾಗಿ ರಾಜ್ಯಗಳ ಸಂಪತ್ತನ್ನು ತಾನು ಪಡೆದುಕೊಳ್ಳುತ್ತಿದೆ ಎಂಬುದಕ್ಕೆ ಇದು ನಿದರ್ಶನ. ಒಂದೆಡೆ ಹೀಗೆ ರಾಜ್ಯಗಳ ಆರ್ಥಿಕ ಪಾಲನ್ನು ನೀಡಲು ನಿರಾಕರಿಸುತ್ತಲೇ , ಇನ್ನೊಂದು ದಿಕ್ಕಿನಿಂದ ರಾಜಕೀಯವಾಗಿಯೂ ತನಗಾಗದ ರಾಜ್ಯಗಳ ವಿರುದ್ಧ ಹಗೆ ಸಾಧಿಸುವ ಮೋದಿ ನಡೆ ಒಕ್ಕೂಟ ವ್ಯವಸ್ಥೆಯಲ್ಲಿನ ಬಹುದೊಡ್ಡ ವಿಪರ್ಯಾಸವಾಗಿದೆ ಎಂಬುದಂತೂ ಸತ್ಯ.